ವೈದ್ಯಕೀಯ ವಸ್ತು ಪ್ರದರ್ಶನಕ್ಕೆ ಚಾಲನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ನ.7 ನಮ್ಮ ಶಿಕ್ಷಣ ಕ್ರಮದಲ್ಲಿ ದೇಹ ರಚನೆ ಕುರಿತಾಗಿ ಸಮಗ್ರ ವಿವರ ನೀಡಲಾಗುತ್ತಿಲ್ಲ. ಇದರಿಂದಾಗಿ ಎಳೆಯ ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲಗಳಿವೆ.
ವೈಜ್ಞಾನಿಕವಾಗಿ ದೇಹರಚನೆ ಅರಿವು ಮೂಡಿಸುವ ಪ್ರಯತ್ನ ಶಾಲಾ ಹಂತದಲ್ಲಿ ನಡೆಯಬೇಕು ಎಂದು ಐಎಂಎ ಅಧ್ಯಕ್ಷರಾದ ಡಾ. ವೀಣಾ ಕೋರಿ ತಿಳಿಸಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞನಗಳ ಸಂಸ್ಥೆ ಆಶ್ರಯದಲ್ಲಿ ನಡೆದ ವೈದ್ಯಕೀಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರೀರದ ಬಗ್ಗೆ ಕುತೂಹಲ ಸಹಜ. ದೇಹ ರಚನೆಯ ಅರಿವು ಮೂಡಿದಂತೆ ಅನಗತ್ಯ ಆತಂಕ ದೂರವಾಗುತ್ತದೆ ಎಂದು ತಿಳಿಸಿದರು.
ವಿಶ್ಲೇಷಣೆ ಅಗತ್ಯ: ಮುಖ್ಯ ಅತಿಥಿಯಾಗಿದ್ದ ಡಾ. ಮಲ್ಲೇಶ್ ಹುಲುಮನಿ ಮಾತನಾಡಿ, ವೈಜ್ಞಾನಿಕ ವಿಸ್ಮಯಗಳು ವಿಶ್ಲೇಷಣೆಯಾಗದಿದ್ದರೆ ನಿಗೂಢವಾಗಿಯೇ ಉಳಿಯುತ್ತವೆ.
ಆದೇ ಮುಂದೆ ಮೂಢನಂಬಿಕೆಯಾಗಿ ಪರಿವರ್ತನೆಯಾಗುತ್ತದೆ. ಕಾಲೇಜುಗಳು ಕೇವಲ ವೈದ್ಯರನ್ನು ತಯಾರು ಮಾಡುವ ಕಾರ್ಖಾಗಳಾಗದೆ ವೈಚಾರಿಕ ಚಿಂತಕರನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಾ. ಗಂಗಾಧರ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಡಾ. ಲೇಪಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಚಾಲನೆ: ವೈದ್ಯಕೀಯ ಕ್ಷೇತ್ರದಲ್ಲಾದ ಬೆಳವಣಿಗೆಗಳು, ಸಾಮಾನ್ಯ ಖಾಯಿಲೆ ಕುರಿತು ಸರಳ ಮತ್ತು ಸುಲಭವಾಗಿ ತಿಳಿದುಕೊಳ್ಳಬಹುದಾದ ಒಂದು ಅಪರೂಪದ ವೇದಿಕೆಯನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನನಗಳ ಸಂಸ್ಥೆ ಸೃಷ್ಟಿಸಿದ್ದು, ಗುರುವಾರ ಈ ವೈದ್ಯಕೀಯ ವಸ್ತುಪ್ರದರ್ಶನಕ್ಕೆ ಚಾಲನೆ ದೊರೆಯಿತು.
ಆಪರೇಷನ್ ಥಿಯೇಟರ್ ಹೇಗಿರುತ್ತದೆ, ಡಿಎನ್ಎ ಅಂದರೇನು, ದೇಹ ರಚನೆ ಹೇಗಿರುತ್ತೆ, ಎಂಆರ್ಐ ಸ್ಕ್ಯಾನ್ ಹೇಗೆ ಆಗುತ್ತದೆ ಎಂಬಿತ್ಯಾದಿ ವೈದ್ಯಕೀಯ ಕ್ಷೇತ್ರದ ಮಾಹಿತಿಗಳನ್ನು ತಿಳಿಸಿಕೊಡುವ, ಆರೋಗ್ಯ ಜೀವನ ಕ್ರಮ ಹೇಗಿರಬೇಕು, ವಿವಿಧ ರೋಗಗಳು ಬಾರದ ಹಾಗೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಾಗೃತಿ ಮೂಡಿಸುವ ಜೊತೆ ಜೊತೆಗೆ, ಚಿಕಿತ್ಸಾ ವಿಧಾನವನ್ನೂ ಅರಿಯುವ ಅವಕಾಶ ಇಲ್ಲಿ ಮಾಡಿಕೊಡಲಾಗಿದೆ.
ಈ ವಸ್ತು ಪ್ರದರ್ಶನ ನ. 8 ಹಾಗೂ 9ರಂದೂ ಇರಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಿಮ್ಸ್ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

