ಮೋದಿ ಭರವಸೆಯ ನಾಯಕ
ಕ.ಪ್ರ. ವಾರ್ತೆ ಶಿವಮೊಗ್ಗ ನ.8
ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌ನ ಕ್ಷುದ್ರ ರಾಜಕಾರಣದ ಫಲವಾಗಿ ಇಂದು ಭಾವೈಕ್ಯತೆ ಒಡೆದಿದೆ. ದೇಶದ್ರೋಹಿ ಸಂಘಟನೆಗಳು ದಿನದಿಂದ ದಿನಕ್ಕೆ ಬಲವಾಗುತ್ತಿವೆ. ಇವರಿಗೆಲ್ಲ ತಾಕತ್ತಿನ ಉತ್ತರ ಕೊಡಲು ನರೇಂದ್ರ ಮೋದಿಗೆ ಮಾತ್ರ ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಪ್ರತಿಪಾದಿಸಿದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಈ ಪರ್ವ ಕಾಲದಲ್ಲಿ ನರೇಂದ್ರ ಮೋದಿ ಯುವ ಜನತೆಯ ಪಾಲಿನ ಭರವಸೆ ನಾಯಕ ಎಂದು ಹೇಳಿದರು.
ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಧಕ್ಕೆಯಾಗಿ ಜನರು ಆತಂಕದಲ್ಲಿರುವ ಸಂದರ್ಭದಲ್ಲಿ ಮೋದಿ ಹೆಸರಿನಲ್ಲಿ ಬೀಸಿರುವ ಬದಲಾವಣೆಯ ಗಾಳಿಯನ್ನು ಯುವ ಪೀಳಿಗೆ ಸದ್ಬಳಕೆ ಮಾಡಿಕೊಂಡು ಈ ದೇಶ ಕಟ್ಟಲು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಎಲ್ಲಡೆ ಮೋದಿ ಅಲೆ: ದೇಶದ ಗಡಿಯಲ್ಲಿ ಅನ್ಯ ದೇಶದ ಸೈನಿಕರು ಜಮಾವಣೆಗೊಂಡರೂ ವಿಶ್ವದ ಯಾವುದೇ ರಾಷ್ಟ್ರ ಭಾರತದ ಪರವಾಗಿ ಪ್ರಶ್ನಿಸುತ್ತಿಲ್ಲ. ದೇಶದಲ್ಲಿ ವಿಚ್ಛದ್ರಕಾರಿ ಶಕ್ತಿಯೂ ಹೆಚ್ಚಾಗಿದೆ. ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಮೋದಿಯಿಂದ ಮಾತ್ರ ಸಾಧ್ಯ ಎಂದು ದೇಶದ ಯುವ ಜನತೆ ಅರಿತಿದ್ದಾರೆ. ಇದರಿಂದ ಎಲ್ಲೆಡೆ ಮೋದಿ ಅಲೆ ಹರಡಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮನಮೋಹನ್‌ಸಿಂಗ್ ಅವರ ಅಧಿಕಾರಾವಧಿಯಲ್ಲಿ ದೇಶದ ರಾಜಕಾರಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಛಾಪು ಮೂಡಿಲ್ಲ ಎಂದು ಆರೋಪಿಸಿದರು.
ಈ ಪರಿಸ್ಥಿತಿಯನ್ನು ಬಿಜೆಪಿ ಯುವ ಮೋರ್ಚಾ ಸವಾಲಾಗಿ ಸ್ವೀಕರಿಸಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿ ಮೋದಿಯವರು ಪ್ರಧಾನಿಯಾಗಲು ವೇದಿಕೆ ಕಲ್ಪಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಟಿ. ಮುನಿರಾಜು ಮಾತನಾಡಿ, ಪಕ್ಷದಲ್ಲಿ ಅಧಿಕಾರ ಪಡೆಯುತ್ತೇವೆ ಎಂಬ ಭಾವನೆ ಇರದೆ ಜವಾಬ್ದಾರಿಯನ್ನು ನಿಭಾಯಿಸಬೇಕು. ಪಕ್ಷ ಸಂಘಟನೆಗೆ ಒತ್ತು ನೀಡಿ ಮೋದಿ ಅವರನ್ನು ಮುಂದಿನ ಪ್ರಧಾನಿ ಸ್ಥಾನಕ್ಕೇರಿಸಲು ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕೆಂದು ತಿಳಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭವಾನಿ ರಾವ್ ಮೊರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಕಾರ್ಯದರ್ಶಿ ಡಿ.ಎಸ್. ಅರುಣ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

