ಸಂವಿಧಾನ ಶಿಲ್ಪಿ ಪ್ರತಿಮೆಗಿನ್ನೂ ಕಾಲ ಕೂಡಿ ಬಂದಿಲ್ಲ
ಕ.ಪ್ರ.ವಾರ್ತೆ ಶಿವಮೊಗ್ಗ ನ.14
ಮಲೆನಾಡ ನಗರಿಯಲ್ಲಿ ಇದುವರೆಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಎಲ್ಲಿಯೂ ಸ್ಥಾಪನೆಗೊಂಡಿಲ್ಲ. ನಗರದಲ್ಲಿ ವಿವಿಧ ಸ್ಥಳಗಳಲ್ಲಿ ಬೇರೆ ಪ್ರತಿಮೆಗಳು ರಾರಾಜಿಸುತ್ತಿದ್ದರೂ ಸಂವಿಧಾನ ಶಿಲ್ಪಿಯ ಪ್ರತಿಮೆ ಮಾತ್ರ ಅನಾವರಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ 1996ರಿಂದ ನಿರಂತರ ಹೋರಾಟ ಮಾಡಿಕೊಂಡು ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ದಿಸೆಯಲ್ಲಿ ಜಿಲ್ಲಾಡಳಿತ, ನಗರಸಭೆ ಪ್ರಯತ್ನಗಳು ಕುಂಟುತ್ತಾ ಸಾಗಿವೆ.
ದಲಿತ ಸಮಿತಿಯ ನಿರಂತರ ಹೋರಾಟದ ಫಲವಾಗಿ 2010ರಲ್ಲಿ ಅಂದಿನ ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ತಯಾರಿಸಲು ಟೆಂಡರ್ ಕರೆಯುವಂತೆ ನಗರಸಭೆಗೆ ಆಯುಕ್ತರು ಮತ್ತು ಅಧ್ಯಕ್ಷರಿಗೆ ನಿರ್ದೇಶಿಸಿದ್ದರು.
ಮರು ಟೆಂಡರ್ಗೆ ಸೂಚನೆ: ಅದರಂತೆ ನಗರಸಭೆ ಪರಿಶಿಷ್ಟರಿಗೆ ಮೀಸಲಿಟ್ಟ ಶೇ. 22.75 ಅನುದಾನದಲ್ಲಿ ಕಂಚಿನ ಪುತ್ಥಳಿಗೆ 25 ಲಕ್ಷ ಹಣ ಬಿಡುಗಡೆ ಮಾಡಿ, ಟೆಂಡರ್ ಕೂಡ ಕರೆದಿದ್ದರು. ತದ ನಂತರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪುತ್ಥಳಿ ನಿರ್ಮಿಸಲು ಯಾವುದೇ ಅರ್ಜಿ ಬಾರದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದರು.
ನಂತರ ಮುಂಬಯಿ ಮೂಲದ ವಾಘ ಸ್ಕಲ್ಪ್ ಚರ್ಚ್ ಸಂಸ್ಥೆಗೆ ಪುತ್ಥಳಿ ನಿರ್ಮಿಸಲು ಟೆಂಡರ್ ನೀಡಲಾಗಿದ್ದು, ಸಂಸ್ಥೆ ಪುತ್ಥಳಿಗೆ ತಗುಲುವ ವೆಚ್ಚದಲ್ಲಿ ಶೇ.75ರಷ್ಟು ಹಣವನ್ನು ನೀಡುವಂತೆ ಮನವಿ ಮಾಡಿತು. ಈ ಹಣವನ್ನು ನಗರಸಭೆ ಸಂಸ್ಥೆಗೆ ನೀಡಿ, 2010 ಅಕ್ಟೋಬರ್ರೊಳಗೆ ಪುತ್ಥಳಿ ತಯಾರಿಸುವಂತೆ ಸೂಚಿಸಿತ್ತು.
ಉಳಿದಂತಹ ಶೇ.25ರಷ್ಟು ಹಣವನ್ನು ಪುತ್ಥಳಿ ಕಾಮಗಾರಿ ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪಾವತಿಸಲು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂಬಂಧವಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಪ್ರತಿಮೆಯನ್ನು ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ಭವನದ ಎದುರು ನಿರ್ಮಿಸುವಂತೆ ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿ ಮಾಡಿತು. ಆದರೆ, ಇದುವರೆಗೂ ಪುತ್ಥಳಿ ಸಿದ್ದಗೊಂಡಿಲ್ಲದಿರುವುದಕ್ಕೆ ದಸಂಸ ಅಸಮಾಧಾನ ವ್ಯಕ್ತಪಡಿಸಿದೆ.
2010ರಲ್ಲಿ ನಗರಸಭೆ ಚುಕ್ಕಾಣಿ ಹಿಡಿದ್ದಿದ್ದ ಬಿಜೆಪಿ ನೇತೃತ್ವದ ನಗರಸಭೆ ಸಮಿತಿಯಲ್ಲಿ ಹಲವು ಸದಸ್ಯರು ಹಾಗೂ ಅಧಿಕಾರಿಗಳು ಮುಂಬಯಿಗೆ ತೆರಳಿ ಪುತ್ಥಳಿ ತಯಾರಿಕೆಯ ಕುರಿತು ಪರಿಶೀಲನೆ ಮಾಡುವುದಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿಕೊಂಡು ಮುಂಬಯಿಗೆ ತೆರಳಿದ್ದರು. ಆದರೆ, ಇದರ ಫಲಿತಾಂಶ ಮಾತ್ರ ಶೂನ್ಯ ಎಂದು ಆರೋಪಿಸಿದೆ.
ಟೆಂಡರ್ ನೀಡಿದ ಸಂಸ್ಥೆ ನಿಗದಿತ ಸಮಯಕ್ಕೆ ಪುತ್ಥಳಿ ನೀಡದಿದ್ದರಿಂದ ಅವರ ಮೇಲೆ ಕ್ರಿಮಿನಲ್ ದಾಖಲು ಮಾಡಲು ನಿರ್ಧರಿಸಲಾಗಿತ್ತು. ಆದರೆ, ತದ ನಂತರ ಕ್ರಿಮಿನಲ್ ಕೇಸ್ ದಾಖಲು ಮಾಡುವುದರಿಂದ ಸಮಯ, ಹಣ ಎರಡು ವ್ಯರ್ಥವಾಗುತ್ತದೆ. ಆದರಿಂದ ನಗರಸಭೆ ಅಧಿಕಾರಿಗಳ ತಂಡವನ್ನು ಮುಂಬಯಿಗೆ ಕಳುಹಿಸಲಾಗಿದೆ. ನಂತರ ಕ್ರಮ ಕೈಗೊಳ್ಳಲಾಗುವುದು.
- ವಿಪುಲ್ ಬನ್ಸಲ್, ಜಿಲ್ಲಾಧಿಕಾರಿ
ಜಿಲ್ಲಾಡಳಿತ, ನಗರಸಭೆ ಡಿಸೆಂಬರ್ ಕೊನೆ ವಾರದೊಳಗೆ ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು. ಇಲ್ಲಿಯವರೆಗೆ ಪುತ್ಥಳಿ ತಯಾರಾಗದಿರಲು ಕಾರವಣವೇನೆಂಬುದನ್ನು ಬಹಿರಂಗ ಪಡಿಸಬೇಕು. ಪುತ್ಥಳಿಗೆ ಮೀಸಲಿಟ್ಟಿರುವ ಹಣದ ಬಗ್ಗೆ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಇದನ್ನು ತನಿಖೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಜನವರಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ಕೈಗೊಳ್ಳಲಾಗುವುದು.
- ಎಂ. ಗುರುಮೂರ್ತಿ,
ದಸಂಸ ರಾಜ್ಯ ಸಂಘಟನಾ ಸಂಚಾಲಕ
ಮೋಹನ್ಕುಮಾರ್ ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

