ಶಿವಮೊಗ್ಗ

ಅರ್ಹರಿಗೆ ಪ್ರಾಮಾಣಿಕವಾಗಿ ಸೌಲಭ್ಯ ತಲುಪಿಸಿ

Published On :

ಕನ್ನಡಪ್ರಭ ವಾರ್ತೆ, ಸೊರಬ, ನ.18
ಸರ್ಕಾರವು ಬಡವರಿಗಾಗಿ ರೂಪಿಸುವ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕು.
 ಈ ದೃಷ್ಟಿಯಿಂದ ಬಸವ ವಸತಿ ಯೋಜನೆಯಡಿ 780 ಜನರ ಪಟ್ಟಿ ತಯಾರಿಸಿದ್ದು, ಅವುಗಳಲ್ಲಿ 769 ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ 2013- 14ನೇ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಿಂದ ಅನುಮೋದನೆ ಪಡೆಯಲು ಸಭೆ ನಡೆಸಿ ಮಾತನಾಡಿದರು.
ವಸತಿರಹಿತ ಕಡು ಬಡವರಿಗೆ ನಿವೇಶನ ನೀಡಬೇಕು ಎನ್ನುವ ಉದ್ದೇಶ ತಮ್ಮದಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸಬೇಕು ಎಂದ ಅವರು, ಬಸವ ವಸತಿ ಯೋಜನೆಯಡಿ ಈಗಾಗಲೇ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಅನರ್ಹರೂ ಸೇರಿದ್ದರೆ ಸ್ಥಳೀಯರ ಆಕ್ಷೇಪಣೆ ಇದ್ದರೂ ಅಂತಹ ಅರ್ಜಿಗಳ ದಾಖಲಾತಿಗಳ ಮರು ಪರಿಶೀಲನೆ ನಡೆಸಿ, ನಿವೇಶನ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಈ ಹಿಂದೆ ಮನೆ ಕಟ್ಟಿಕೊಂಡು ವಾಸವಾಗಿರುವ ಗ್ರಾಮಸ್ಥರಿಗೆ ಗ್ರಾಪಂ ವತಿಯಿಂದ ಹಕ್ಕುಪತ್ರ ಹಾಗೂ ಮೂಲ ಸೌಲಭ್ಯ ನೀಡಿದ್ದರೂ ಅಂಥ ನಿವೇಶನಗಳನ್ನು ಅರಣ್ಯ ಭೂಮಿ ಎಂದು ನಮೂದಿಸಿ, ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲು ಗ್ರಾಪಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಮತ್ತು ತಾಲೂಕಿನ ಬಸವ ವಸತಿ ಯೋಜನೆ ಜಾಗೃತಿ ಸಮಿತಿಯ ಸಭೆಯಲ್ಲಿ ಫಲಾನುಭವಿಗಳ ಪಟ್ಟಿ ಅನುಮೋದನೆ ಪಡೆಯುವ ಮೊದಲೇ ಫಲಾನುಭವಿಗಳಿಂದ ಕರಾರು (ಜಿಪಿಎಸ್)ಮಾಡಿಕೊಂಡಿರುವ ಅಧಿಕಾರಿಗಳ ಕ್ರಮಕ್ಕೆ ತಾಪಂ ಸರ್ವ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಶಾಸಕರ ಗಮನಕ್ಕೆ ತಂದಾಗ, ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ತಪ್ಪು ನಡೆಯದಂತೆ ಜಾಗೃತಿ ಸಮಿತಿ ಗಮನಕ್ಕೆ ತಂದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್, ಸದಸ್ಯರಾದ ಬರಗಿ ನಿಂಗಪ್ಪ, ಕೆ. ಅಜ್ಜಪ್ಪ, ವೀರಭದ್ರಗೌಡ, ಇಒ ಜಿ. ಮಂಜುಳಾ, ಮೆಸ್ಕಾಂ ಎಇಇ ವೆಂಕಟೇಶ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ರಾಮಪ್ಪ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.