ಶಿವಮೊಗ್ಗ

ಸಂಪನ್ಮೂಲ ಸದ್ಬಳಕೆಯಲ್ಲಿ ವಿಫಲ

Published On :

ಶಿವಮೊಗ್ಗ: ಸಮಾಜದಲ್ಲಿ ನಮ್ಮ ನಡುವೆ ಇರುವ ಸಂಪನ್ಮೂಲ ಬಳಸಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ವಿಷಾದಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆ್ಯಂಡ್ ರೀಸರ್ಚ್ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಡೆವಲಪ್ಪಿಂಗ್ ಎ ಹಾಲಿಸ್ಟಿಕ್ ಇಂಡಿಯನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಕುರಿತ 2 ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ಇದೆ. ಈ ಭಾವನೆಯಿಂದಲೇ ನಮ್ಮಲ್ಲಿರುವ ಸಂಪನ್ಮೂಲ, ಮಾದರಿ ವ್ಯಕ್ತಿಗಳು, ವಿದ್ಯಾವಂತರು, ಪ್ರಗತಿಪರರು, ವಿಜ್ಞಾನಿಗಳು, ವಸ್ತುಗಳನ್ನು ತಿರಸ್ಕರಿಸಿದ್ದೇವೆ. ಇದು ನಮ್ಮ ದೇಶದವರ ಮನಸ್ಥಿತಿ. ಇದಕ್ಕೆ ಉದಾಹರಣೆ ಎಂದರೆ, ಮುಂಬೈಯಲ್ಲಿ ಮನೆ ಊಟವನ್ನು ಅಧಿಕಾರಿಗಳಿಗೆ ತಲುಪಿಸುವ ಕಾರ್ಮಿಕರು ಯಾವುದೇ ಅದಲು, ಬದಲು ಇಲ್ಲದೆ ಅವರವರ ಊಟದ ಚೀಲವನ್ನು ಅವರಿಗೆ ಕೊಡುತ್ತಾರೆ (ಡಬ್ಬಾವಾಲ).
ಇವರನ್ನು ನಮ್ಮ ದೇಶದಲ್ಲಿ ಯಾರು ಗುರುತಿಸಲಿಲ್ಲ. ಆದರೆ, ಭಾರತಕ್ಕೆ ಭೇಟಿ ನೀಡಿದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುರುತಿಸಿ ಬ್ರಿಟನ್ಗೆ ಕರೆದೊಯ್ದು ಸಂವಾದ ನಡೆಸುತ್ತಾರೆ. ಇಂತಹ ಸಂಗತಿಗಳನ್ನು ಬೇರೆ ದೇಶದವರು ಬಂದು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಪರಿಣಾಮ ಬೀರಲಿಲ್ಲ: ವಿಶ್ವದಲ್ಲಿ 2007- 08 ರಲ್ಲಿ ಹಣದುಬ್ಬರ ಉಂಟಾದಾಗ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಬ್ಯಾಂಕ್ಗಳು, ಮ್ಯೂಚುವಲ್ ಫಂಡ್ಗಳು ಬಿದ್ದುಹೋದವು. ಆದರೆ, ಭಾರತದಲ್ಲಿ ಮಾತ್ರ ಇದರ ಬಗ್ಗೆ ಯಾವುದೇ ಪರಿಣಾಮ ಬೀರಲಿಲ್ಲ. ಈ ಕುರಿತು ದೇಶದಲ್ಲಿ ಚರ್ಚೆಗಳೂ ನಡೆದಿಲ್ಲ ಎಂದ ಅವರು, ಇಂದಿನ ಉದ್ಯಮಿಗಳಲ್ಲಿ ಶಿಸ್ತು, ಮೌಲ್ಯಾಧಾರಿತ ನಡತೆಗಳು ಕಂಡು ಬರುವುದಿಲ್ಲ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಜನರೆ ಇವರಿಗೆ ಹೊಡೆಯುತ್ತಾರೆ. ಇದನ್ನು ವ್ಯಾಪಾರಸ್ಥರು ಅರಿತುಕೊಳ್ಳಬೇಕು ಎಂದರು.
ದೇಶಿಯ ಮಟ್ಟದಲ್ಲಿ ಪೂರ್ವದಲ್ಲಿಯೇ ಸಾಕಷ್ಟು ಅಭಿವೃದ್ಧಿ ಆಗಿವೆ. ಇವುಗಳನ್ನು ಕ್ರಮಬದ್ಧವಾಗಿ ಅಧ್ಯಯನಕ್ಕೆ ಒಳಪಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಇದನ್ನು ಇಂದಿನ ಪೀಳಿಗೆಯ ನಿರ್ವಹಣ ಅಧ್ಯಯನ ಸಂಸ್ಥೆಗಳು ವಿಷಯಾಧಾರಿತ ಅಧ್ಯಯನಕ್ಕೆ ಒಳಪಡಿಸುವ ಮೂಲಕ ದಾಖಲೀಕರಿಸಬೇಕು ಎಂದರು.
ಕರ್ತವ್ಯಪ್ರಜ್ಞೆ: ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದ ಬೌದ್ಧಿಕ ಪ್ರಗತಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ನಾವು ಭೌತಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೇವೆ. ಇದನ್ನು ನೆರೆಯ ಚೀನಾ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿದೆ ಎಂದ ಅವರು, ಭಾರತದಲ್ಲಿ ಕರ್ತವ್ಯಪ್ರಜ್ಞೆ ಪರಿವರ್ತಿಸುವುದು ಕಷ್ಟಸಾಧ್ಯ. ಸರ್ಕಾರಿ ಕಚೇರಿಗಳಿಗೆ ನಿಯಮಿತ ಸಮಯದಲ್ಲಿ ಹಾಜರಾಗಬೇಕೆಂಬ ಉದ್ದೇಶದಿಂದ ಬಯೋವುಟ್ರಿಕ್ ಅಳವಡಿಸಿದ್ದರೂ ಅದರ ಉದ್ದೇಶ ಸಮರ್ಪಕವಾಗಿ ಈಡೇರಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.  
ಭಾರತದಲ್ಲಿ ಅಭಿವೃದ್ಧಿಯ ಬದಲಾವಣೆ ಆಗಬೇಕು. ಅದಕ್ಕಾಗಿ ಭ್ರಷ್ಟಾಚಾರ ಮುಕ್ತ ಆಡಳಿತ, ವೈಜ್ಞಾನಿಕ ತಳಹದಿಯ ಶಿಕ್ಷಣ ಇವುಗಳು ಹೆಚ್ಚು ಪ್ರಚಲಿತಕ್ಕೆ ಬರಬೇಕು ಎಂದು ಪ್ರತಿಪಾದಿಸಿದ ಅವರು, ಪಾಶ್ಚಾತ್ಯ ಶಿಕ್ಷಣ ನಮಗೆ ಪೂರಕವಲ್ಲ. ನಮ್ಮಲ್ಲಿರುವ ಶಿಕ್ಷಣದ ಮಾರ್ಗವನ್ನೆ ಸರಿಯಾಗಿ ಬಳಸಿಕೊಂಡರೆ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಎಸ್.ಎ. ಬಾರಿ, ಕುಲಸಚಿವೆ ಮಲ್ಲಿಕಾ ಎಸ್. ಘಂಟಿ, ವಿತ್ತಾಧಿಕಾರಿ ಪ್ರೊ. ಹಿರೇಮಣಿನಾಯ್ಕ, ಐಎಂಎಸ್ಆರ್ ಅಧ್ಯಕ್ಷ ಡಾ. ಡಿ.ಎನ್. ರಮೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.