ಶಿವಮೊಗ್ಗ

ಮಾದರಿ ಯುವ ಸಂಸತ್ ಅಧಿವೇಶನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ರೋಟರಿ ಕ್ಲಬ್ ಭಾನುವಾರ ಕಸ್ತೂರ ಬಾ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದರಿ ಯುವ ಸಂಸತ್ ಅಧಿವೇಶನದ ತರಬೇತಿ ಕಾರ್ಯಕ್ರಮ ಎರಡು ಬಾರಿ ಉದ್ಘಾಟನೆಗೊಂಡ ಪ್ರಸಂಗ ನಡೆಯಿತು.
ಆಯೋಜಕರ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಸರಿಯಾದ ಸಮಯಕ್ಕೆ ಬಂದು ಸಂಸದ ರಾಘವೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಕಾಯ್ದರು. ನಂತರ ತಾನು ಮತ್ತೊಂದು ಕಾರ್ಯಕ್ರಮದಲ್ಲಿ ಇದ್ದೇನೆ, ಬರುವುದು ತಡವಾಗುತ್ತದೆ ಎಂದು ಸಚಿವರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಂಸದರೇ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ನಂತರ ಮಧ್ಯಾಹ್ನ 12.30ರ ಆಸುಪಾಸಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರ ಆಶಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೆವಾ ಎಂದು ಪ್ರಶ್ನಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸರಿಯಾಗಿ ಜನರಿಗೆ ಸಲುಪಿಸುವ ಕೆಲಸ ಆಗಬೇಕು. ಎಲ್ಲಾ ರಾಜಕೀಯ ಮುಖಂಡರೆಲ್ಲ ಒಳ್ಳೆಯವರಲ್ಲ. ಅದೇ ರೀತಿ ಕೆಟ್ಟವರು ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವಕರ ದೇಶ ಭಾರತ: ದೇವರು ಮನುಷ್ಯನಿಗೆ ಎಲ್ಲಾವನ್ನು ಕೊಟ್ಟಿದ್ದಾನೆ. ಬುದ್ದಿವಂತಿಕೆ, ಹಕ್ಕಿಯಂತೆ ಹಾರುವುದು ಎಲ್ಲಾವನ್ನು. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ನಾವು ಅರಿತುಕೊಳ್ಳಬೇಕು ಎಂದ ಅವರು, ಹೆಚ್ಚು ಯವಕರನ್ನು ಹೊಂದಿರುವ ದೇಶ ಭಾರತ. ಆದರೆ, ನಿರೋದ್ಯೋಗ ಸಮಸ್ಯೆಯಿಂದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಯುವಕರು ರಾಜಕೀಯ ಕಡೆ ಮುಖ ಮಾಡಬೇಕು. ವಿಧಾನಸಭೆ, ಸಂಸತ್‌ಗೆ ಬರಬೇಕು ಎಂದು ಕರೆ ನೀಡಿದರು.
ನೂರಾರು ಕೋಟಿ ನಷ್ಟ: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಬಗ್ಗೆ ಮಾತನಾಡಿದ ಅವರು, ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಕೇವಲ ಒಂದು ರುಪಾಯಿಗೆ ಸೈಲ್‌ಗೆ ಒಪ್ಪಿಸಿದ್ದರು. ಆದರೂ ಕಾರ್ಖಾನೆ ನೂರಾರು ಕೋಟಿ ರುಪಾಯಿ ನಷ್ಟದಲ್ಲಿರುವುದು ವಿಪರ್ಯಾಸ. ಈ ಸಂಬಂಧವಾಗಿ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು. ಅಣುಕ್ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಸೋನಿಯಾ ಗಾಂಧಿ ಹಾಗೂ ಸುಷ್ಮ ಸ್ವರಾಜ್, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಮುಖಂಡರ ಮಾದರಿ ಉಡುಪು ಧರಿಸಿ ಸಂಸತ್‌ನಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ, ಗಡಿ ಸಮಸ್ಯೆ, ಆರ್ಥಿಕ ಬಿಕ್ಕಟು ಇತರೆ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಖುರ್ಷಿದಾ ಬಾನು, ಸದಸ್ಯ ಐಡಿಯಲ್ ಗೋಪಿ, ರೋಟರಿ ಅಧ್ಯಕ್ಷ ಗೋಪಾಲಕೃಷ್ಣ ಗುಪ್ತಾ, ವೀರಣ್ಣ ಹುಗ್ಗಿ, ಉದಯಶಂಕರ ಶಾಸ್ತ್ರಿ, ಎಸ್.ವಿ. ಶಾಸ್ತ್ರಿ ಮತ್ತಿತರರು ಇದ್ದರು.

ನಗೆ ಬುಗ್ಗೆ...
ರಾಜ್ಯಸಭಾ ಸದಸ್ಯ ಆಯನೂರು ಅವರ ವ್ಯಕ್ತಿಪರಿಚಯ ಮಾಡಿಕೊಡುವ ವೇಳೆ ನಿರೂಪಕರು, ಆಯನೂರು ಮಂಜುನಾಥ ಒಬ್ಬ ಹುಟ್ಟುಹೋರಾಟಗಾರ ಎಂದು ಸಂಬೋಧಿಸಿದರು.
ಈ ಪದ ಕೇಳುತ್ತಿದ್ದಂತೆ ಚಂಗನೆ ಎದ್ದು ಮೈಕ್ ಪಡೆದುಕೊಂಡ ಆಯನೂರು, ನಾನು ಹುಟ್ಟು ಹೋರಾಟಗಾರನಲ್ಲ. ಆ ಬಿರುದಿಗೆ ನಾನು ಅರ್ಹನೂ ಅಲ್ಲ. ದಯವಿಟ್ಟು ಆ ಬಿರುದನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಹಾಸ್ಯಭರಿತರಾಗಿ ಹೇಳಿದರು.
ವ್ಯಕ್ತಿ ಹುಟ್ಟುವಾಗಲೇ ಹುಟ್ಟು ಹೋರಾಟಗಾರನೆಂಬುವುದು ನಿರ್ಧರಿತವಾಗುತ್ತದೆ. ಸೀಝೆರಿಯನ್ ಹೆರಿಗೆಯ ಮೂಲಕ ಹುಟ್ಟುವವರೆಲ್ಲರೂ ಹುಟ್ಟು ಹೋರಾಟಗಾರರಾಗಿದ್ದಾರೆ. ಏಕೆಂದರೆ ಹುಟ್ಟುವ ಮುನ್ನವೇ ಅವರು ಹೋರಾಟ ಆರಂಭಿಸುತ್ತಾರೆ ಎಂದು ಹೇಳಿ ಸಭೆಯಲ್ಲಿ ನಗೆಯ ಅಲೆಯೆಬ್ಬಿಸಿದರು. ಸಭೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳಿಗೆ ಸಾರ್ವನಿಕರು ಲಿಂಬೆ ಹಣ್ಣು ನೀಡುತ್ತಾರೆ. ಏಕೆಂದರೆ ಗೆದ್ದ ನಂತರ ಸರ್ವೇ ಸಾಮಾನ್ಯವಾಗಿ ಜನಪ್ರತಿನಿಧಿಗಳ ಪಿತ್ತ ನೆತ್ತಿಗೇರಿರುತ್ತದೆ. ಈ ಹಿನ್ನೆಲೆಯಲ್ಲಿ ತಲೆಗೆ ಲಿಂಬೆಹಣ್ಣಿನಿಂದ ತಿಕ್ಕಿಕೊಂಡು ಪಿತ್ತ ಕಡಿಮೆ ಮಾಡಿಕೊಳ್ಳುವಂತೆ ಪರೋಕ್ಷವಾಗಿ ಸೂಚಿಸಿ ಈ ಲಿಂಬೆಹಣ್ಣು ನೀಡುತ್ತಾರೆ ಎಂದು ಜೋಕ್ ಕಟ್ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.