ಕ್ರಾಸಿಂಗ್ ಗೇಟ್ ಮುಚ್ಚಿದ್ದಕ್ಕೆ ಆಕ್ರೋಶ
ಕ.ಪ್ರ.ವಾರ್ತೆ, ಭದ್ರಾವತಿ, ನ. 25
ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಅಪ್ಪರ್ ಹುತ್ತಾದಲ್ಲಿರುವ ರೇಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 33ರಲ್ಲಿ ಸೋಮವಾರ ರೇಲ್ವೆ ಇಲಾಖೆಯವರು ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆಯಲ್ಲಿ ಲೆವೆಲ್ ಕ್ರಾಸಿಂಗ್ ಗೇಟನ್ನು ಮುಚ್ಚಿ ಅಂಬೇಡ್ಕರ್ ವೃತ್ತದಲ್ಲಿರುವ ರೈಲ್ವೇ ಅಂಡರ್‌ಬ್ರಿಡ್ಜ್‌ನಿಂದ ಸಂಚರಿಸುವಂತೆ ಸೂಚಿಸಿದ್ದನ್ನು ಸಾರ್ವಜನಿಕರು ಪ್ರತಿಭಟಿಸಿ ಮೈಸೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಇಂಟರ್‌ಸಿಟಿ ರೈಲನ್ನು ಹತ್ತು ನಿಮಿಷ ತಡೆದು ನಿಲ್ಲಿಸಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿತು.
ಸೋಮವಾರ ಬೆಳಗಿನಿಂದಲೇ ಸಾರ್ವಜನಿಕರು ರೈಲ್ವೆ ಗೇಟ್ ಮುಚ್ಚಿದ್ದನ್ನು ನಗರಸಭಾ ಸದಸ್ಯ ಭೈರಪ್ಪಗೌಡ, ಎಚ್.ಬಿ. ರವಿಕುಮಾರ್, ಮಹಾದೇವು ಅವರ ನೇತೃತ್ವದಲ್ಲಿ ಪ್ರತಿಭಟಿಸತೊಡಗಿದರು. ಹತ್ತು ಗಂಟೆ ಸುಮಾರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ರೇಲ್ವೆ ಗೇಟ್ ಮುಚ್ಚಿದ್ದನ್ನು ಪ್ರತಿಭಟಿಸತೊಡಗಿದರು.
ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಸ್ಥಳಕ್ಕೆ ಆಗಮಸಿ, ರೇಲ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಾತುಕತೆ ನಡೆಸದಿದ್ದರೆ ರೈಲುತಡೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.
ರೊಚ್ಚಿಗೆದ್ದ ಸಾರ್ವಜನಿಕರು: ಶಿವಮೊಗ್ಗದಿಂದ ರೈಲ್ವೆ ಅಧಿಕಾರಿ ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗ ಸಾಧ್ಯವಿಲ್ಲವೆಂದು ತಿಳಿಸಿದಾಗ ಸ್ಥಳದಲ್ಲಿ ಜಮಾಯಿಸಿದ್ದ ಹಲವು ರಾಜಕೀಯ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ರೊಚ್ಚಿಗೆದ್ದರು.
ಆಗ ಸಂಗಮೇಶ್ವರ್ ಅವರು ಸಾರ್ವಜನಿಕರು ರೇಲ್ವೇ ಇಲಾಖೆಯೊಂದಿಗೆ ಅಂಡರ್‌ಬ್ರಿಡ್ಜ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತಾರೆ. ಆದರೆ ರೈಲ್ವೇ ಗೇಟ್ ಮುಚ್ಚುವ ಮುನ್ನ ಕನಿಷ್ಠ ಪಾದಚಾರಿಗಳು ಸಂಚರಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ರೈಲ್ವೇ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡರು.
ಸೂಕ್ತ ತೀರ್ಮಾನ: ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯವೆಂದು ಅಧಿಕಾರಿ ಶಿವಕುಮಾರ್ ತಿಳಿಸಿದಾಗ ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಮೈಸೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಇಂಟರ್‌ಸಿಟಿ ರೈಲನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರು.
ನಂತರ ಶಿವಕುಮಾರ್ ಮಂಗಳವಾರ ಡೆಪ್ಯುಟಿ ಚೀಫ್ ಎಂಜಿನಿಯರ್ ಅವರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರೊಂದಿಗೆ ಚರ್ಚಿಸುವರೆಂಬ ಆಶ್ವಾಸನೆ ನೀಡಿದ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆ ಹಿಂತೆಗೆದುಕೊಂಡ ಮೇಲೂ ರೈಲ್ವೆ ಗೇಟ್ ತೆರೆಯದ್ದರಿಂದ ಮತ್ತಷ್ಟು ಕಾಲ ಪ್ರಕ್ಷುಬ್ದ ವಾತಾವರಣ ಏರ್ಪಟ್ಟಿತ್ತು.
ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಸದಾನಂದ ಪಿ. ನಾಯಕ್ ಮತ್ತು ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಜೆ.ಜೆ.ತಿರುಮಲೇಶ್ ಅವರಲ್ಲಿ ರೈಲ್ವೆ ಗೇಟನ್ನು ತೆರೆಸಲು ಬೇಡಿಕೆಯಿಟ್ಟರು. ಆಗ ಡಿವೈಎಸ್ಪಿ ನಾಯಕ್ ಅವರು ರೈಲ್ವೆ ನಿಯಮಗಳನ್ನು ಮೀರಿ ನಡೆಯಲು ಸಾಧ್ಯವಿಲ್ಲವಾದ್ದರಿಂದ ಮಂಗಳವಾರ ಡೆಪ್ಯುಟಿ ಚೀಫ್ ಎಂಜಿನಿಯರ್ ಬರುವವರೆಗೂ ಸಾರ್ವಜನಿಕರು ತಾಳ್ಮೆಯಿಂದಿರಲು ತಿಳಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ, ನಗರಸಭಾ ಸದಸ್ಯ ಭೈರಪ್ಪಗೌಡ ಮತ್ತು ರವಿಕುಮಾರ್ ಅವರೊಂದಿಗೆ ಬಾಲಕೃಷ್ಣ, ಮಹಾದೇವು, ಸುರೇಶ್, ಸನ್ನಿ, ನವೀನ್, ರಾಜು, ರಂಗನಾಥ್, ಬಾಬು, ಶಿವಕುಮಾರ್, ಶಿವು, ಬಿಜೆಪಿ ಸತೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

