ಶಿವಮೊಗ್ಗ

ಪ್ಯಾಕ್ಸ್ ಗಣಕೀಕರಣಕ್ಕೆ ಸೂಚನೆ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಸೆ.14
ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್‌ನ ಎಲ್ಲಾ ಶಾಖೆಗಳು ಇನ್ನು 2 ತಿಂಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ (ಪ್ಯಾಕ್ಸ್) ಬ್ಯಾಂಕ್‌ನಿಂದಲೇ ಸಿಬಿಎಸ್‌ಗೆ ಸಂಬಂಧಿಸಿದ ತಂತ್ರಾಂಶ ಒದಗಿಸಲಾಗುತ್ತದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ ತಿಳಿಸಿದರು.
 ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕ್‌ನ 56ನೇ ವಾರ್ಷಿಕ ಮಹಾಸಭೆಯಲ್ಲಿ ಅವರು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು(ಪ್ಯಾಕ್ಸ್)ತಂತ್ರಾಂಶ ಹೊಂದಲು ಬೇಕಾದ ವ್ಯವಸ್ಥೆಯನ್ನು ಮಾ.31 ರೊಳಗೆ ಮಾಡಿಕೊಳ್ಳದಿದ್ದರೆ ಅವುಗಳಿಗೆ ಸಾಲ ನೀಡುವುದನ್ನು ತಡೆಹಿಡಿಯಲಾಗುವುದು ಎಂದರು.
ಸರ್ಕಾರ ಹಣ ನೀಡಿಲ್ಲ: ದಕ್ಷಿಣ ಹಾಗೂ ಉತ್ತರ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ಪ್ಯಾಕ್ಸ್‌ಗಳು ಸರ್ಕಾರದ ನೆರವನ್ನು ಬಯಸದೇ ಸ್ವಂತ ಬಂಡವಾಳದಿಂದ ರೈತರಿಗೆ 25 ಸಾವಿರ ರುಪಾಯಿವರೆಗೆ ಸಾಲ ನೀಡುತ್ತಿವೆ. ಆದರೆ, ಸರ್ಕಾರ ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದ ಹಣವನ್ನು ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡದೆ ಸತಾಯಿಸುತ್ತಿದೆ ಎಂದು ಹೇಳುತ್ತಿದ್ದ ಬಿಜೆಪಿಯವರು, ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಬ್ಯಾಂಕ್‌ಗಳಿಗೆ ಏಕೆ ಹಣ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
 ರಾಜ್ಯ ಸರ್ಕಾರದಿಂದ ಅಪೆಕ್ಸ್ ಬ್ಯಾಂಕ್‌ಗೆ ಕಳೆದ 4 ವರ್ಷದಿಂದ 300 ಕೋಟಿ ರುಪಾಯಿ ಬರಬೇಕಿದೆ. ಇಂದು ಕೂಡ ಬಂದಿಲ್ಲ.
 ಆದರೂ ಬೇರೆ ಬೇರೆ ಮೂಲದಿಂದ ಬಂದ ಲಾಭದಲ್ಲಿ ರೈತರಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಸುಳ್ಳು ಹೇಳಿ ರೈತರ ಹಾದಿ ತಪ್ಪಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸಾಲ ನೀಡಿಕೆ ವಿಷಯದಲ್ಲಿ ಗಂಭೀರವಾಗಿ ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಟಿಸಿಗೆ ವಿರೋಧ: ಕೇಂದ್ರ ಸರ್ಕಾರ ಡೈರೆಕ್ಟ್ ಟ್ಯಾಕ್ಸ್ ಕೋಡ್(ಡಿಟಿಸಿ)ಮೂಲಕ ಸಹಕಾರ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳು ಸ್ವತಂತ್ರ್ಯ ಹಾಗೂ ಸ್ವಚ್ಛ ಆಡಳಿತ ನಡೆಸಲು ತಮ್ಮದೇ ಆದ ಉತ್ತಮ ಬೈಲಾ ರೂಪಿಸಿಕೊಳ್ಳಬೇಕು. ಆದರೆ, ಅದು ಸ್ವೇಚ್ಚಾಚಾರ ಆಗಬಾರದು.
 ಹೀಗಾಗಿ 97ನೇ ತಿದ್ದುಪಡಿಯ ಆಶಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಸಹಕಾರ ಕ್ಷೇತ್ರದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
 ಸಂವಿಧಾನಗಳ ಆಶಯದಂತೆ ನಾವು ನಡೆದುಕೊಳ್ಳೋಣ. 97ನೇ ತಿದ್ದುಪಡಿಯ ಅನುಷ್ಠಾನ ಹಾಗೂ ನಮ್ಮ ಎಲ್ಲಾ ಜಿಲ್ಲಾ ಸಹಕಾರಿ ಕೇಂದ್ರಗಳ ಬ್ಯಾಂಕ್‌ಗಳು ಹಾಗೂ ಅಪೆಕ್ಸ್ ಬ್ಯಾಂಕ್ ವಿರೋಧಿಸಿರುವ ಜುಲೈ 22ರ ನಬಾರ್ಡ್‌ನ ಸುತ್ತೋಲೆಯ ಬಗ್ಗೆ ವಿಶೇಷವಾದ ಚರ್ಚೆ ನಡೆಯುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
 ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಿರ್ದೇಶಕಿ ಸರಸ್ವತಿ, ಅಗಡಿ ಅಶೋಕ್, ಎನ್.ಎಚ್. ಶ್ರೀಪಾದರಾವ್, ಎಚ್.ಎನ್. ವಿಜಯದೇವ್, ಕೆ.ಪಿ. ದುಗ್ಗಪ್ಪಗೌಡ, ಎಂ.ಎಂ.ಪರಮೇಶ್, ಜೆ.ಪಿ.ಯೋಗೀಶ್ ಮತ್ತು ನಬಾರ್ಡ್ ಎಂಜಿಎಂ ರಾಘವೇಂದ್ರ ಮತ್ತಿತರರು ಇದ್ದರು.ನಿರ್ದೇಶಕ ಎಂ.ಬಿ. ಚನ್ನವೀರಪ್ಪ ಸ್ವಾಗತಿಸಿದರು. ಪ್ರಭಾರ ವ್ಯವಸ್ಥಾಪಕ ನಿರ್ದೇಶಕ. ಎನ್.ಜಿ. ನಾಗಭೂಷಣ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.