ಚುನಾವಣೆಗೆ ಸ್ಪರ್ಧಿಸಲು ಭಯಪಡುವಂತಾಗಿದೆ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.15
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಆಮಿಷಗಳಿಗೆ ಬಲಿಯಾಗಿರುವುದನ್ನು ಗಮನಿಸಿದರೆ ಮುಂದಿನ ಬಾರಿಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೇ ಬೇಡ ಎನ್ನುವ ಆಲೋಚನೆ ಮೂಡುತ್ತಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಗಾಜನೂರಿನಲ್ಲಿ ಭಾನುವಾರ ಸುವರ್ಣ ಗ್ರಾಮ ಯೋಜನೆಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು, ನಾವು ಮೊದಲಿನಿಂದಲೂ ವ್ಯವಸ್ಥೆಯ ಲೋಪಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಕಳೆದ ಚುನಾವಣೆಯಲ್ಲಿ ಬೇರೆ ಯಾರೇ ಆಗಿದ್ದರೂ ನೇಣು ಬಿಗಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲಿಯೂ ಗಾಜನೂರು ಭಾಗದ ಚುನಾವಣೆಯನ್ನು ನೋಡಿದರಂತೂ ಹೆದರಿಕೆಯೇ ಆಗುತ್ತದೆ ಎಂದು ಹೇಳಿದರು.
ಶ್ರೀಮಂತರೇ ಆಮಿಷಗಳಿಗೆ ಬಲಿ: ಚುನಾವಣೆ ಸಂದರ್ಭದಲ್ಲಿ ಬಡವರು ಆಮಿಷಗಳಿಗೆ ಬಲಿಯಾಗುವುದು ಸಹಜ. ಆದರೆ ಶ್ರೀಮಂತರೇ ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಅವರೂ ಆಮಿಷಗಳ ದಾರಿಯನ್ನೇ ಆಯ್ದುಕೊಂಡಿದ್ದಾರೆ. ಅದರಲ್ಲಿಯೂ ಲೋಕಕ್ಕೇ ಬುದ್ಧಿವಾದ ಹೇಳುವ ಸ್ಥಿತಿಯಲ್ಲಿರುವ ವಿಚಾರವಂತರೇ ದಾರಿ ತಪ್ಪುತ್ತಿರುವುದನ್ನು ಗಮನಿಸಿದರೆ ಆಘಾತವಾಗುತ್ತದೆ. ಹಾಗಾಗಿ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂದೇ ಅನ್ನಿಸುತ್ತಿದೆ ಎಂದರು.
ಸನ್ಮಾನ ಬೇಡ: ರಾಜಕಾರಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸನ್ಮಾನ ಮಾಡುವುದರಿಂದ ಯಾವುದೇ ಸಾಧನೆಯಾಗುವುದಿಲ್ಲ. ಸನ್ಮಾನ ಮಾಡುವುದರಿಂದ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ.ಅದನ್ನು ಬಿಟ್ಟು ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ರಾಜಕಾರಣಿಗಳಾದವರು ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಹಾರ-ತುರಾಯಿಗಳಿಂದ ಸನ್ಮಾನ ಮಾಡುತ್ತಿದ್ದರೆ ಅಟ್ಟಕ್ಕೆ ಏರಿ ಕೂರುತ್ತಾರೆ. ಹಾಗಾಗಿ ಹೆಚ್ಚಿನ ಕಾಲವನ್ನು ಸನ್ಮಾನಗಳಲ್ಲಿ ಕಳೆಯುವುದು ಬೇಡ. ಇನ್ನು ಚುನಾವಣೆಗಳಲ್ಲಿ ಆಮಿಷಗಳ ಮುಖಾಂತರ ಗೆಲುವು ಸಾಧಿಸಿದವರು ಶಾಸನ ಸಭೆಗಳಲ್ಲಿ ಏನು ಮಾಡುತ್ತಾರೆ ಎಂಬ ಬಗ್ಗೆ ವಿಚಾರಿಸುವುದಕ್ಕೂ ಹೋಗುವುದಿಲ್ಲ. ಬದಲಾಗಿ ತಮ್ಮ ಮನೆಯ ಯಾವುದೋ ಶುಭ ಸಮಾರಂಭಗಳಿಗೆ ಬಾರದಿರುವುದನ್ನೇ ದೊಡ್ಡ ವಿಷಯವಾಗಿ ಪರಿಗಣಿಸುವ ಸ್ಥಿತಿ ತಲುಪಿದೆ ಎಂದು ಬೇಸರವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗಾಜನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಿಮ್ಮನೆ ರತ್ನಾಕರ್ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಗಾಜನೂರು ಗ್ರಾ.ಪಂ ಅಧ್ಯಕ್ಷೆ ಶಿವಲಿಂಗಮ್ಮ, ಜಿಪಂ ಸದಸ್ಯ ಸುಂದರೇಶ್, ಮಾಜಿ ಜಿಪಂ ಸದಸ್ಯ ಪ್ರೇಂಕುಮಾರ್, ಗಣೇಶ್ ಮತ್ತಿತರರು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

