ವೀಕ್ಷಕರ ಲೆಕ್ಕಾಚಾರ ತಲೆಕೆಳಗು
ಶಿವಮೊಗ್ಗ: ಮತದಾರರ ಓಲೈಸಲು ಅತಿಯಾಗಿ ಹಣ ಹಂಚುವ ಕ್ಷೇತ್ರಗಳ ಪೈಕಿ ಚುನಾವಣಾ ಆಯೋಗ ಗುರುತು ಮಾಡಲ್ಪಟ್ಟ ಸೂಕ್ಷ್ಮ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು.
ಚುನಾವಣಾ ದಿನಾಂಕ ಘೋಷಣೆಯಾದಾಗಲೇ ಈ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಸದ್ಯದವರೆಗೆ ಚುನಾವಣಾ ಉದ್ದೇಶಕ್ಕೆ ಹಣ ಸಾಗಿಸುವ ಮತ್ತು ಹಣ- ವಸ್ತುಗಳನ್ನು ಹಂಚುವ ಪ್ರಕರಣ ಪತ್ತೆಯಾಗದೇ ಇರುವುದರಿಂದ ಚುನಾವಣಾ ವೀಕ್ಷಕರು ಅವಕ್ಕಾಗಿ ಹೋಗಿದ್ದಾರೆ.
ಈ ಮಾತಿಗೆ ಪುಷ್ಟಿ ನೀಡುವಂತಹ ಬೆಳವಣಿಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಈ ಬಾರಿ ಚುನಾವಣೆಯನ್ನು ಚುನಾವಣಾ ಆಯೋಗವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚುನಾವಣಾ ದಿನಾಂಕ ಘೋಷಣೆ ಆದಾಗಿನಿಂದ ಪ್ರತಿ ಹಂತವನ್ನು ಗಂಭೀರವಾಗಿ ಪರಿಗಣಿಸಿದ್ದು ದಾಖಲಿಸುತ್ತಿದೆ. ಹಾಗೆಯೇ ರಾಜಕೀಯ ಪಕ್ಷಗಳು, ಕಾರ್ಯಕರ್ತರಿಂದ ಪಾರದರ್ಶಕ ಚುನಾವಣೆಗೆ ಭಂಗ ತರುವಂತಹ ಸನ್ನಿವೇಶಗಳು ನಿರೀಕ್ಷೆ ಮಾಡುತ್ತಲೇ ಇದೆ. ಶಿವಮೊಗ್ಗ ಕ್ಷೇತ್ರವನ್ನೂ ತೀರಾ ಸನಿಹದಿಂದ ಬಗೆಬಗೆಯ ಮಾಧ್ಯಮಗಳ ವೀಕ್ಷಿಸುವ ಪ್ರಯತ್ನ ನಡೆಸಿದೆ. ಆದರೆ, ಆಯೋಗ ನೇಮಿಸಿದ ಅಧಿಕಾರಿಗಳ ನಿರೀಕ್ಷೆ ತಲೆಕೆಳಗಾಗಿದೆ.
ಸೂಚನೆ: ಹೀಗಾಗಿ, ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿ ಅವರ ಮೇಲೆ ಒತ್ತಡ ಹೇರಿದ್ದು, ಜಾಗೃತ ದಳದ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಲು ಸೂಚಿಸಿದ್ದಾರೆ.
ಅಂದರೆ, ಚುನಾವಣೆಗೆ ಹಣದ ಬಳಕೆ ತಡೆಗಟ್ಟುವುದು ಮತ್ತು ಈ ಸಂಬಂಧ ಪ್ರಕರಣ ದಾಖಲಿಸುವುದನ್ನು ವೀಕ್ಷಕರ ತಂಡ ಎದುರು ನೋಡುತ್ತಿದೆ. ಈ ಹಿನ್ನೆಲೆ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಅವರಿಂದ ತಾಲೂಕುಮಟ್ಟ ಹಾಗೂ ವಿಭಾಗಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಜಾಗೃತ ದಳ ಕಾರ್ಯವೈಖರಿ ಚುರುಕುಗೊಳಿಸಲು ಸೂಚಿಸಲಾಗಿದೆ.
ಶಂಕೆ: ಚುನಾವಣೆಗಾಗಿ ಹಣ ಅಥವಾ ವಸ್ತುಗಳ ಸಾಗಣೆ ಕುರಿತಂತೆ ಯಾವುದೇ ಪ್ರಕರಣ ದಾಖಲಿಸದೇ ಇರುವುದು ಒಂದರ್ಥದಲ್ಲಿ ಬಿಗಿ ಕ್ರಮ ಎಂದಾದರೂ ಒಂದೇ ಒಂದು ಪ್ರಕರಣ ದಾಖಲಿಸದೇ ಇರುವುದು ಅನುಮಾನಕ್ಕೆ ಕಾರಣ ಎಂಬುದು ವೀಕ್ಷಕರಾಗಿ ಬಂದಿರುವ ಅಧಿಕಾರಿಗಳ ಸಾರಾಸಗಟು ಅಭಿಪ್ರಾಯ.
'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ವೀಕ್ಷಕರಿಬ್ಬರು ನಾವು ಈ ವಿಚಾರದಲ್ಲಿ ಮಾತನಾಡುವ ಹಾಗಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ವೀಕ್ಷಕರಾಗಿ ಹಿರಿಯ ಅಧಿಕಾರಿಗಳಾದ ಅನುರಾಗ್, ಬಿ.ಶ್ರೀನಿವಾಸನ್, ಪಿ.ವಿ. ಸುಬ್ಬರಾವ್ ಜಿಲ್ಲೆಯಲ್ಲಿ ಸುತ್ತಾಟ ನಡೆಸಿದ್ದಾರೆ. ವಿವಿಧ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದು ಪರಿಶೀಲನೆ ನಡೆಸಿದ್ದಾರೆ.
ಹಾಗೆಯೇ, ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆ ತೊಡಗಿಕೊಂಡಿರುವ ರೀತಿಯನ್ನು ನೋಡಿ ಸ್ಥಳೀಯ ಅಧಿಕಾರಿಗಳ ಬಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮೂರಿನ ಚುನಾವಣೆ ಹಾಗೂ ಇಲ್ಲಿನ ಚುನಾವಣಾ ವೈಖರಿಯನ್ನು ತುಲನೆ ಮಾಡಿದ್ದಾರೆ. ಚುನಾವಣಾ ಅಬ್ಬರ ಕಾಣದಿರುವ ಬಗ್ಗೆಯೂ ಅಭಿಪ್ರಾಯಿಸಿದ್ದಾರೆ.
ಕಟ್ಟಾಜ್ಞೆ: ಈಗಾಗಲೇ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮಾದರಿ ನೀತಿ ಸಂಹಿತೆ ತಂಡ, ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರ ತಂಡ, ವಿಧಾನಸಭಾ ಕ್ಷೇತ್ರಕ್ಕೆ 2 ವಿಡಿಯೋ ಕಣ್ಗಾವಲು ಮತ್ತು ಅವಲೋಕನ ತಂಡ ರಚಿಸಲಾಗಿದೆ.
ಅದೇ ರೀತಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಕೌಂಟಿಂಗ್ ತಂಡ, ಎಂಸಿಎಂಸಿ ಲೈಸನಿಂಗ್ ಅಧಿಕಾರಿಯನ್ನು ನೇಮಿಸಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ತಡೆಯುವುದು ಮತ್ತು ಪಾರದರ್ಶಕತೆಯಿಂದ ಚುನಾವಣೆ ನಡೆಸುವ ಉದ್ದೇಶದಿಂದ 38 ಜಾಗೃತ ದಳಗಳನ್ನು ರಚಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 5 ತಂಡ, ಭದ್ರಾವತಿಯಲ್ಲಿ 3, ಶಿವಮೊಗ್ಗದಲ್ಲಿ 4, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರ 5, ಸೊರಬದಲ್ಲಿ 6, ಸಾಗರದಲ್ಲಿ 7 ಜಾಗೃತ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು 29 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನೂ ನೇಮಿಸಲಾಗಿದೆ.
ನಿರ್ದೇಶನ: ಚೆಕ್ ಪೋಸ್ಟ್ಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಚುನಾವಣಾ ವೀಕ್ಷಕರು ಕೊಂಚ ಅಸಮಾಧಾನ ಹೊರಹಾಕಿದ್ದಾರೆ ಎಂದು ಗೊತ್ತಾಗಿದೆ. ವಾಹನಗಳ ತಪಾಸಣೆ ಪರಿಪೂರ್ಣರೀತಿಯಲ್ಲಿ ಆಗುತ್ತಿಲ್ಲ.
ಈ ಕಾರಣಕ್ಕೆ ಪರಿಶೀಲನೆಯ ಕ್ರಮವನ್ನು ಇನ್ನಷ್ಟು ಪರಿಪಕ್ವವಾಗಿ ಮಾಡುವಂತೆ ಜಿಲ್ಲಾಡಳಿತದ ಮೂಲಕ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅದೇ ರೀತಿ ಜಾಗೃತ ದಳಗಳು ಕೇವಲ ಸುತ್ತಾಟ ನಡೆಸುವ ಜೊತೆ ಜೊತೆಗೆ ಅರಣ್ಯ ತನಿಖಾ ಠಾಣೆ, ಎಪಿಎಂಸಿ ತನಿಖಾ ಠಾಣೆಗಳಿರುವ ಕಡೆ ಚೆಕ್ ಪೋಸ್ಟ್ ರೀತಿ ಕಾರ್ಯನಿರ್ವಹಿಸುವಂತೆಯೂ ಸೂಚಿಸಲಾಗಿದೆ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

