ಗೂಗಲ್ನಲ್ಲಿ ಬಿಎಸ್ವೈ ಹ್ಯಾಂಗೌಟ್
ಶಿವಮೊಗ್ಗ: ಹಲವು ಚುನಾವಣೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಡ್ಡಿಕೊಂಡ ಹಿರಿಯ ರಾಜಕಾರಣಿ ಬಿ.ಎಸ್. ಯಡಿಯೂರಪ್ಪನವರು ಜನರನ್ನು ತಲುಪುವ ವಿಚಾರದಲ್ಲಿ ಇತರೆ ಅಭ್ಯರ್ಥಿಗಳಿಗಿಂತ ಮುಂದಿದ್ದಾರೆ.
ಬಿಜೆಪಿಯ ಥಿಂಕ್ ಥ್ಯಾಂಕರ್ಸ್ ತಂಡ ಯಡಿಯೂರಪ್ಪನವರಿಗೆ ಹೊಸ ಹೊಸ ಅವಕಾಶಗಳನ್ನು ಮಾಡಿಕೊಡುತ್ತಲೇ ಇದೆ. ಫೇಸ್ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಜೊತೆ ಜೊತೆಗೆ ಯಡಿಯೂರಪ್ಪನವರು ಹೊಸ ಮಾರ್ಗವಾದ ಗೂಗಲ್ ಹ್ಯಾಂಗೌಟ್ ಮೂಲಕವೂ ಒಂದು ಸುತ್ತು ಪ್ರಚಾರ ಮಾಡಿದರು.
ಲೈವ್ ಮಾಧ್ಯಮವಾದ ಗೂಗಲ್ ಹ್ಯಾಂಗ್ ಔಟ್ನಲ್ಲಿ ನೇರವಾಗಿ ಸಂವಾದ ನಡೆಸಿದ ಬಿಎಸ್ವೈ, ಶಿವಮೊಗ್ಗದ ಅಭಿವೃದ್ಧಿಗಾಗಿ ತಮ್ಮ ಕನಸನ್ನು ಬಿಚ್ಚಿಡುವ ಜೊತೆಗೆ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸವನ್ನೂ ತೋರ್ಪಡಿಸಿದರು.
ತಮ್ಮ ವೈಯಕ್ತಿಕ ವಿಚಾರವನ್ನು ಆರಂಭದಲ್ಲಿ ಪ್ರಸ್ತುತಪಡಿಸಿದ ಅವರು, ನನ್ನ ಬದುಕು ಸಮಾಜಕ್ಕೆ ಅರ್ಪಿಸಿದ್ದೇನೆ. ಜನ ಸಾಮಾನ್ಯರೂ ಸಹ ನನಗೆ ಶಾಸಕ, ಮುಖ್ಯಮಂತ್ರಿ ಸ್ಥಾನ ಕಲ್ಪಿಸಿದರು. ನಾನು ಬದುಕಿರುವವರೆಗೂ ಸಮಾಜ ಸೇವೆಗೆ ತೊಡಗಿಕೊಳ್ಳುತ್ತೇನೆ ಎಂದರು.
ಏನೆಲ್ಲಾ ಪ್ರಶ್ನೆಗಳು? ಮೈಸೂರು, ಬೆಂಗಳೂರು ಸೇರಿದಂತೆ ಶಿವಮೊಗ್ಗದ ವಿವಿಧ ಕ್ಷೇತ್ರದ ಸುಮಾರು 15ಕ್ಕೂ ಹೆಚ್ಚು ಮಂದಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಸಿಕ್ಕಿತ್ತು. ಸಾಕಷ್ಟು ಮಂದಿ ಆನ್ಲೈನ್ನಲ್ಲಿ ಸಿಕ್ಕಿದ್ದರೂ ಕಾರ್ಯಕ್ರಮದ ಕಾಲಾವಕಾಶ ಒಂದು ಗಂಟೆಯಾಗಿದ್ದರಿಂದ ಅನೇಕರು ಕೇವಲ ಸಂವಾದ ಆಲಿಕೆಯಲ್ಲಷ್ಟೇ ತೃಪ್ತಿಪಟ್ಟರು.
ವಿದ್ಯಾರ್ಥಿಗಳು, ವೈದ್ಯರು, ಉದ್ಯಮಿಗಳು, ಐಟಿ ಕ್ಷೇತ್ರದಲ್ಲಿರುವವರು ಹೀಗೆ ಬೇರೆ ಬೇರೆ ಕ್ಷೇತ್ರದವರು ತಮ್ಮ ಪ್ರಶ್ನೆಗಳನ್ನು ಪ್ರಸ್ತುತಪಡಿಸಿ ಉತ್ತರ ಪಡೆದುಕೊಂಡರು.
ಕಾರ್ಯಗತ ಆಗದ ಯೋಜನೆಗಳು, ಕೈಗಾರಿಕೆಗಳ ಸ್ಥಾಪನೆ, ರೇಲ್ವೆ ವಿಸ್ತರಣೆ, ಅರಣ್ಯ ಹಕ್ಕು ಸಮಸ್ಯೆ, ಅಡಕೆ ನಿಷೇಧ ವಿಚಾರ ಸೇರಿದಂತೆ ಅನೇಕ ವಿಚಾರ ಪ್ರಸ್ತಾಪವಾದವು. ಕೇಂದ್ರದಲ್ಲೂ ಕೃಷಿ ಬಜೆಟ್ ಮಾಡಿಸ್ತೀರಾ ಎಂಬ ಪ್ರಶ್ನೆಯೂ ತೂರಿಬಂತು.
ಕೆಜೆಪಿ ಮತ್ತು ಭ್ರಷ್ಟಾಚಾರ ಕುರಿತೂ ಸಹ ಪ್ರಶ್ನೆಗಳನ್ನು ಬಿಎಸ್ ವೈ ಎದುರಿಸಿದರು.
ಯಡಿಯೂರಪ್ಪ ಉತ್ತರಗಳು...
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ನನ್ನದು. ಕೇಂದ್ರ ಸರ್ಕಾರದ ವೈಫಲ್ಯತೆ, 10-11 ತಿಂಗಳ ಅಭಿವೃದ್ಧಿ ಶೂನ್ಯ ದಿನಗಳು ಸೇರಿದಂತೆ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಜನ ಗುರುತಿಸಿದ್ದಾರೆ. ಇದು ತಮಗೆ ಶ್ರೀರಕ್ಷೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಗೊಂಡು ಇದೀಗ ಅರ್ಧಕ್ಕೆ ನಿಂತ ಯೋಜನೆಗಳನ್ನು ಸಂಸದನಾದ ನಂತರ ಪೂರ್ತಿಗೊಳಿಸುತ್ತೇನೆ. ಅದೇ ರೀತಿ ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನೂ ಒಂದೆರಡು ರೈಲು ಹೆಚ್ಚುವರಿಯಾಗಿ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಶಿವಮೊಗ್ಗ ಜಿಲ್ಲೆಯ ವಿವಿಧ ಕ್ಷೇತ್ರಕ್ಕೆ ವಿಸ್ತರಣೆಯಾಗಬೇಕಾಗಿದೆ ಎಂದು ವಿವರಿಸಿದರು.
ಕೈಗಾರಿಕೆಗೂ ಮಹತ್ವ ಕೊಡಬೇಕೆಂಬುದು ಮೋದಿಯವರ ಆಶಯ. ಅದರಂತೆ ಕೈಗಾರಿಕೆಗಳನ್ನು ಶಿವಮೊಗ್ಗಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದ ಅವರು, ಐಟಿ ಬಿಟಿ ಕ್ಷೇತ್ರ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲು ಅಗತ್ಯವಾದ ಎಲ್ಲಾ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಅಡಕೆ ನಿಷೇಧ ಪ್ರಸ್ತಾಪ ಕುರಿತು ಮೋದಿಯವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಅಡಕೆ ನಿಷೇಧಕ್ಕೆ ಅವಕಾಶ ಕೊಡದಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ.
ಹಾಗೆಯೇ ಅರಣ್ಯ ಭೂಮಿಯಲ್ಲಿ ಎರಡು ಹೊತ್ತಿನ ಗಂಜಿಗಾಗಿ ಕೃಷಿ ಮಾಡುವವರ ಹಿತರಕ್ಷಣೆಗೆ ತಾವು ಬದ್ಧರಾಗಿದ್ದು, ಕಾನೂನು ತಿದ್ದುಪಡಿ ಮಾಡಲಾಗುತ್ತದೆ ಎಂದು ಉತ್ತರಿಸಿದರು.
ಬೆಂಗಳೂರಿನಿಂದ ಸತ್ಯನಾರಾಯಣ, ಉದ್ಯಮಿ ಗೋಪಿನಾಥ್, ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ವಾಸುದೇವ್, ಗೃಹಿಣಿ ಆಶಾ, ವಿದ್ಯಾರ್ಥಿ ಶ್ರೀಹರಿ, ಅಡಕೆ ಮಂಡಿ ವರ್ತಕ ಸೋಮಣ್ಣ ಸೇರಿದಂತೆ ಅನೇಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

