ಶಿವಮೊಗ್ಗ

ಅಪ್ಪ- ಮಕ್ಕಳ ಬಣ್ಣ ಬಯಲು: ಶಕುಂತಲಾ

Published On :

ಕ.ಪ್ರ.ವಾರ್ತೆ, ಸೊರಬ, ಏ. 12
ಸಂಸದ ಹಾಗೂ ಶಾಸಕ ಎರಡೂ ಸ್ಥಾನಗಳನ್ನು ಒಂದೇ ಪಕ್ಷಕ್ಕೆ ನೀಡಿದಾಗ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತದೆ ಎಂದು ಶಕುಂತಲಾ ಬಂಗಾರಪ್ಪ ಹೇಳಿದರು.
ಶನಿವಾರ ಸಂಜೆ ಬಂಗಾರಧಾಮಕ್ಕೆ ಆಗಮಿಸಿ ದಿ. ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿ, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.  
ನಲವತ್ತು ವರ್ಷಗಳ ಸುದೀರ್ಘ ಕಾಲ ಬಂಗಾರಪ್ಪನವರಿಗೆ ನೀಡಿದ ಆಶೀರ್ವಾದ ಹಾಗೂ ಸಹಕಾರವನ್ನು ಗೀತಾ ಶಿವರಾಜ್‌ಕುಮಾರ್ ಅವರಿಗೆ ನೀಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಮಧು, ಗೀತಾ ಅವರಿಬ್ಬರೂ ಒಟ್ಟಾಗಿ ಜನತೆಯ ಕೆಲಸ ಮಾಡಲು ಸದಾ ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.  
ಶಾಸಕ ಮಧು ಬಂಗಾರಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಂಗಾರಪ್ಪನವರ ಅನಾರೋಗ್ಯದ ಕಾರಣ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡು ಯಡಿಯೂರಪ್ಪ ಪಟಾಲಂ ಸೂಟ್‌ಕೇಸ್‌ಗಳಲ್ಲಿ ಹಣ ತುಂಬಿಕೊಂಡು ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರನ್ನು ಖರೀದಿಸಿ ಚುನಾವಣೆ ನಂತರದಲ್ಲಿ ಕೈಬಿಟ್ಟಿದ್ದರು. ಚುನಾವಣೆ ನಂತರ ಅಪ್ಪ-ಮಕ್ಕಳ ನಿಜವಾದ ಬಣ್ಣ ಬಯಲಾಗಿದ್ದು, ಅಂದು ಅನಿವಾರ್ಯವಾಗಿ ಯಡಿಯೂರಪ್ಪನವರನ್ನು ಬೆಂಬಲಿಸಿದವರು ಈ ಚುನಾವಣೆಯಲ್ಲಿ ಅವರನ್ನು ಕೈಬಿಡಲಿದ್ದಾರೆ ಎಂದು ಹೇಳಿದರು.
ಮತದಾರ ಪ್ರಜ್ಞಾವಂತನಾಗಿದ್ದು, ಆಸೆ ಆಮಿಷಗಳಿಗೆ ಬಲಿಯಾಗದೆ ಮತ ಚಲಾವಣೆ ಮಾಡಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.  
ಸಭೆಯಲ್ಲಿ ಪಪಂ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತ್ರಿ, ಸೊರಬ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಮುಖಂಡರಾದ ನಾಗಪ್ಪ ಮೇಸ್ಟ್ರು, ಕೆ.ವಿ. ಗೌಡ, ಕಲ್ಲಂಬಿ ಹಿರಿಯಪ್ಪ, ಕೋಲಾರ ಕೃಷ್ಣಪ್ಪ, ಸಂಜೀವ್ ಲಕ್ಕವಳ್ಳಿ, ಪಿ.ಎಸ್. ಮಂಜುನಾಥ್, ಜರ್ಮಲೆ ಚಂದ್ರಶೇಖರಪ್ಪ, ಶೇಖರ್ ಎಂ.ಡಿ., ಪಪಂ ಸದಸ್ಯ ಡಿ.ಆರ್. ಸುರೇಶ್, ತಾಪಂ ಸದಸ್ಯೆ ರಾಜೇಶ್ವರಿ ರಾಜಪ್ಪ, ಬರಗಿ ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.  

ಗೀತಾ ಬೆಂಬಲಿಸಲು ಮನವಿ
ಹೊಸನಗರ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆಶಯ ಈಡೇರಿಸಲು ಜೆಡಿಎಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಿ ಎಂದು ಚಿತ್ರನಟ ಮತ್ತು ಉದ್ಯಮಿ ನಗರ ನಾಗರಾಜ ಶೆಟ್ಟಿ ಮನವಿ ಮಾಡಿದರು.
ತಾಲೂಕಿನ ನಗರ ಹೋಬಳಿ ವ್ಯಾಪ್ತಿಯಲ್ಲಿ ಗೀತಾ ಶಿವರಾಜಕುಮಾರ್ ಪರ ಮನೆಮನೆಗೆ ತೆರಳಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗೀತಕ್ಕ ಲೋಕಸಭೆಗೆ ಹೋಗುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಬರಲಿದೆ ಎಂದರು.
ಸಣ್ಣತನದವರು ಮಾತ್ರ ಇಂತಹ ಟೀಕೆ ಮಾಡಲು ಸಾಧ್ಯ. ಎಲ್ಲ ಪಕ್ಷಗಳಲ್ಲೂ ಚಿತ್ರರಂಗದವರು ಇದ್ದಾರೆ. ಹಿರಿಯ ರಾಜಕಾರಣಿ ಎನಿಸಿಕೊಂಡವರು ಕಲಾವಿದರ ಬಗ್ಗೆ ಕೀಳುಮಟ್ಟದ ಟೀಕೆ ಮಾಡಿದರೆ ಅದೇ ಪಕ್ಷದಲ್ಲಿರುವ ಕಲಾವಿದರು ಮುಜುಗರವಾಗುವುದಿಲ್ಲವೇ ಎಂದರು ಪ್ರಶ್ನಿಸಿದರು.
ಚಿತ್ರನಟ ಶ್ರೀಕಾಂತ್, ಹೊನ್ನವಳ್ಳಿ, ಕೃಷ್ಣ, ನಾಗರಾಜ ಮೈಸೂರು, ಜಗದೀಶ್, ಶ್ರೀಧರನಾಯ್ಕ, ಗಣೇಶ್, ಅಣ್ಣು ಡಿಸೋಜ, ಪ್ರಭಾಕರ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.