ಬಿಎಸ್ವೈ ಗೆಲ್ಲಿಸಿ: ಅಡಕೆ ಬೆಳೆಗಾರರಿಗೆ ಮನವಿ
ಶಿವಮೊಗ್ಗ: ಅಡಕೆ ಬೆಳೆಗಾರರು ಭವಿಷ್ಯದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರ ಪರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ.ನರಸಿಂಹ ನಾಯಕ್, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅಡಕೆ ಬೆಳೆಗಾರರ ಸಂಘಟನೆಗಳ ಪ್ರಮುಖರು, 2013ರ ಆಗಸ್ಟ್ 6ರಂದು ಕ್ಯಾಂಪ್ಕೋ ನಿಯೋಗ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದಾಗ ಅಡಕೆ ಬೆಳೆಗಾರರ ಪರವಾಗಿ ಭರವಸೆಯ ಮಾತುಗಳನ್ನಾಡಿದ್ದಾರೆ. ತಾವು ಹೋದ ಕಡೆಯೆಲ್ಲಾ ಅಡಕೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ. ಅಡಕೆ ಬೆಳೆಗಾರರಿಗೆ ಇದೊಂದೇ ಆಶಾಕಿರಣ. ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಮತ್ತು ಭಾರತದ ಭವ್ಯ ಭವಿಷ್ಯದ ಹಿತದೃಷ್ಟಿಯಿಂದ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಡಕೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಆಶ್ಚರ್ಯವೆಂದರೆ ಕೇಂದ್ರ ಆರೋಗ್ಯ ಸಚಿವರ ಕಾರ್ಯಾಲಯದಲ್ಲಿ ಮಾ.10ರಂದು ಅಡಕೆ ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಅಧಿಕಾರಿಗಳಲ್ಲದೇ ಸಿಗರೇಟ್ ಲಾಭಿಯ ವ್ಯಕ್ತಿಗಳು ಭಾಗವಹಿಸಿದ್ದಾರೆಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಸಚಿವರು ಈ ಸಭೆ ಏಕೆ ನಡೆಯಿತು, ಯಾರ್ಯಾರು ಭಾಗವಹಿಸಿದ್ದರೆಂದು ಸ್ಪಷ್ಟಪಡಿಸಲಿ ಎಂದು ಸವಾಲೆಸೆದಿದ್ದಾರೆ.
ಈ ಸಭೆಯಲ್ಲಿ ಅಡಕೆ ನಿಷೇಧ ಮಾಡುವರ ಬಗ್ಗೆ ಗಮನ ಹರಿಸಬೇಕೆಂದು ತೀರ್ಮಾನವಾಗಿದೆ ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಆದರೂ ಸಚಿವರು ಸಾವಿರ ಸುಳ್ಳುಗಳನ್ನು ಹೇಳುತ್ತಾ ವೃಥಾ ಕ್ಯಾಂಪ್ಕೋ ಮತ್ತು ಮ್ಯಾಮ್ಕೋಸ್ ಮೇಲೆ ಆಪಾದನೆ ಮಾಡುತ್ತಿರುವುದು ಖೇದಕರ ಎಂದು ನರಸಿಂಹ ನಾಯಕ್, ಪದ್ಮನಾಭ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಲ್ಲ. ಅಡಕೆ ಆರೋಗ್ಯಕ್ಕೆ ಹಾನಿಕರವೆಂಬ ಅಫಿಡೆವಿಟ್ ಹಿಂಪಡೆಯುವ ಕ್ರಮ ಕೈಗೊಂಡಿಲ್ಲ. 2014ರ ಮಾ.27ರಂದು ಮತ್ತೆ ಸುಪ್ರಿಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ಅಡಕೆ ನಿಷೇಧ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿಲುಮೆಯನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.
ಕರ್ನಾಟಕದ 11 ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರ ಮತವೇ ನಿರ್ಣಾಯಕ. ಈ ಬಾರಿ ಕೇಂದ್ರದಲ್ಲಿ ದೇಶದ ಹಿತದೃಷ್ಟಿಯಿಂದ ಹೊಸ ಸರ್ಕಾರ ಬರಬೇಕು, ದೇಶಕ್ಕೊಬ್ಬ ಸಮರ್ಥ ನಾಯಕ ಬೇಕು. ಹೀಗಾಗಿ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಕೆ ಬೆಳೆಗಾರರು ನರೇಂದ್ರ ಮೋದಿಯವರ ಪರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಕೋರುವುದಾಗಿ ನರಸಿಂಹ ನಾಯಕ್, ಕೊಂಕೋಡಿ ಪದ್ಮನಾಭ, ಕೆ.ಸತೀಶ್ಚಂದ್ರ ಭಂಡಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

