ಶಿವಮೊಗ್ಗ

ಡಾ. ಪಟ್ಟಣಶೆಟ್ಟಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಪ್ರದಾನ ಇಂದು

Published On :

ಶಿವಮೊಗ್ಗ: ಕರ್ನಾಟಕ ಸಂಘದ ವತಿಯಿಂದ ಕೊಡಮಾಡುವ ಡಾ. ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಈ ಬಾರಿ ಕವಿ, ಕಥೆಗಾರ, ವಿಮರ್ಶಕ, ಅಂಕಣಕಾರ, ಅನುವಾದಕ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಏ. 19ರ ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ನಡೆಯಲಿದ್ದು, ಗದಗದ ಸಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಪಟ್ಟಣ ಶೆಟ್ಟಿ ಅವರನ್ನು ಕುರಿತು ಅಭಿನಂದನಾ ಭಾಷಣ ಮಾಡಲಿದ್ದಾರೆ. ಪ್ರಶಸ್ತಿಯನ್ನು ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯೊಂದಿಗೆ ಪ್ರದಾನ ಮಾಡಲಿದ್ದಾರೆ.
60 ಕೃತಿ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಜತೆಗೆ ಕಥೆಗಾರ, ವಿಮರ್ಶಕ, ಅಂಕಣಕಾರ, ಅನುವಾದಕರಾಗಿಯೂ ಗಮನ ಸೆಳೆದವರು. ಧಾರವಾಡದ ಕರ್ನಾಟಕ ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು, 60ಕ್ಕೂ ಹೆಚ್ಚು ಕೃತಿಗಳಲ್ಲದೇ ಹಿಂದಿ ಭಾಷೆಯಲ್ಲಿಯೂ ಆರು ಕೃತಿಗಳನ್ನು ರಚಿಸಿದ್ದಾರೆ.
ಪಿಎಚ್‌ಡಿ ಪದವಿಗಾಗಿ ಅವರು ಗಿರೀಶ್ ಕಾರ್ನಾಡ ಮತ್ತು ಮೋಹನ್ ರಾಕೇಶ್ ಅವರ ನಾಟಕಗಳ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದಾರೆ. ಕಳೆದ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ನೀನಾ, ಔರಂಗಜೇಬ, ಪರದೇಸಿ ಹಾಡುಗಳು, ಅಯಸ್ಕಾಂತ, ಇಷ್ಟು ಹೇಳಿದ ಮೇಲೆ, ಅಪರಂಪಾರ ಮೊದಲಾದ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕವಿತೆಗಳು ದೇಶದ ವಿವಿಧ ಭಾಷೆಗಳಿಗೆ ಅನುವಾದಗೊಂಡಿರುವುದು ಗಮನಾರ್ಹ.
ದುಬೈನಲ್ಲಿ ನಡೆದ 6ನೇ ವಿಶ್ವ ಕನ್ನಡ ಸಮ್ಮೇಳನ ಹಾಗೂ ಅಲ್ಲಿಯ ಕರ್ನಾಟಕ ಸಂಘದ ರಜತ ಮಹೋತ್ಸವದ ಸರ್ವಾಧ್ಯಕ್ಷರಾಗಿದ್ದ ಇವರು, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರಥಮ ಕನ್ನಡ ಸಾಂಸ್ಕೃತಿಕ ಸಮಾವೇಶ- ನಾವಿಕದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಅಲ್ಲದೆ, ಭಾರತೀಯ ನಿಯೋಗದ ಪ್ರತಿನಿಧಿಯಾಗಿ ಚೀನಾ, ಯೂರೋಪ್ ಪ್ರವಾಸ ಕೈಗೊಂಡು ಕನ್ನಡ ಸಾಹಿತ್ಯ ಪರಂಪರೆಯನ್ನು ಪಸರಿಸಿದ ಹೆಗ್ಗಳಿಕೆ ಇವರದ್ದು.
ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಫೆಲೋಷಿಪ್ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಪ್ರಸ್ತುತ ಕರ್ನಾಟಕ ಸಂಘವು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ಕಾವ್ಯದಲ್ಲಿನ ಜೀವಮಾನ ಸಾಧನೆಗಾಗಿ ವರಕವಿ ಡಾ. ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ ಎಂದು ಕಾರ್ಯದರ್ಶಿ ಡಾ. ನಾಗಭೂಷಣ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.