ಶಿವಮೊಗ್ಗ

ದಿಲ್ಲಿ ಆಯ್ತು, ಇನ್ನು ಹಳ್ಳಿ ಮಾತು

Published On :

ಶಿವಮೊಗ್ಗ: ದಿಲ್ಲಿ ಗದ್ದುಗೆ ಹಣಾಹಣಿಯಾದ ಲೋಕಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಇದರ ಬೆನ್ನಲ್ಲೇ ಹಳ್ಳಿಯ ಗದ್ದುಗೆಗಾಗಿ ಗ್ರಾಮ ಪಂಚಾಯಿತಿ ನಡೆಸುವ ತಯಾರಿ ಈಗಾಗಲೇ ಆರಂಭವಾಗಿದೆ.
ಲೋಕಸಭೆ, ವಿಧಾನಸಭೆ ಚುನಾವಣೆಯನ್ನು ನಾಚಿಸುವಂತೆ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಲೇ ಕಣ ಸಿದ್ಧಗೊಳಿಸುವ ಕಾರ್ಯವನ್ನು ಸದಸ್ಯ ಆಕಾಂಕ್ಷಿಗಳು ಮಾಡಿಕೊಳ್ಳುತ್ತಿದ್ದರೆ, ಇತ್ತ ಜನರ ಪ್ರತಿನಿಧಿಗಳ ಆಯ್ಕೆಯನ್ನು ಆರಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ತಯಾರಿ ಆರಂಭ: ನವೆಂಬರ್‌ನಲ್ಲಿ ಹಾಲಿ ಅಧಿಕಾರದಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿಯಲಿದ್ದು, ನವೆಂಬರ್ ಒಳಗಾಗಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಾಗಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಗೆ ಅಧಿಕೃತ ತಯಾರಿ ಪ್ರಾರಂಭಿಸಲಾಗಿದೆ.
ಆಯೋಗಕ್ಕೆ ದಾಖಲೆ: ಶಿವಮೊಗ್ಗ ಜಿಲ್ಲೆಯಲ್ಲಿ 260 ಗ್ರಾಮ ಪಂಚಾಯಿತಿಗಳಿದ್ದು, ಹಾಲಿ 2804 ಸದಸ್ಯರಿದ್ದಾರೆ. ಇವರಲ್ಲಿ 1375 ಮಹಿಳಾ ಪ್ರತಿನಿಧಿಗಳು, 1429 ಪುರುಷ ಪ್ರತಿನಿಧಿಗಳಿದ್ದಾರೆ. ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ರಾಜ್ಯ ಚುನಾವಣಾ ಆಯೋಗವು ಸೂಕ್ತ ತಯಾರಿಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. 2011ರ ಜನಗಣತಿ ಆಧಾರದ ಮೇಲೆ  ಗ್ರಾಮ ಪಂಚಾಯಿತಿ ವಾರ್ಡ್ ನಿಗದಿ ಮಾಡುವಂತೆ ನಿರ್ದೇಶಿಸಲಾಗಿದೆ. ಎಷ್ಟು ಪ್ರತಿನಿಧಿಗಳ ಆಯ್ಕೆ ನಡೆಯಬೇಕಾಗುತ್ತದೆ, ಎಷ್ಟು ಮಂದಿ ಮತದಾನ ಅರ್ಹತೆ ಪಡೆಯುತ್ತಾರೆ ಎಂಬಿತ್ಯಾದಿ ಸಂಗತಿಯ ದಾಖಲೆಯನ್ನು ಆಯೋಗ ತರಿಸಿಕೊಳ್ಳಲಾರಂಭಿಸಿದೆ.
ಸದಸ್ಯರ ಸಂಖ್ಯೆ ಇಳಿಕೆ: ಈ ಬಾರಿ ಚುನಾವಣೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಲವು ಬದಲಾವಣೆ?: 2011ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಯುವುದಾದರೆ ಕೆಲವು ಪಟ್ಟಣಗಳು ಗ್ರಾಮ ಪಂಚಾಯಿತಿಯಿಂದ ಮೇಲ್ಮಟ್ಟಕ್ಕೇರುತ್ತವೆ. ಇವುಗಳಿಗೆ ಪಟ್ಟಣ ಪಂಚಾಯಿತಿ ಸ್ಥಾನಮಾನ ಸಿಗಬೇಕಾಗುತ್ತದೆ. ಸದ್ಯದ ಮಾಹಿತಿಯಂತೆ ಕುಂಸಿ, ಹೊಳೆಹೊನ್ನೂರು, ರಿಪ್ಪನ್ ಪೇಟೆ ಸೇರಿದಂತೆ ಕೆಲವು ಊರುಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಬೇಕು ಮತ್ತು ಅವುಗಳಿಗೆ ಪ್ರತ್ಯೇಕ ಚುನಾವಣೆಯಾಗಬೇಕು. ಅವು ಪಟ್ಟಣ ಪಂಚಾಯಿತಿ ಎಂದು ಗುರುತಿಸಿಕೊಂಡ ನಂತರ, ಅವುಗಳಿಂದ ಹೊರತಾದ ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ಗ್ರಾಮ ಪಂಚಾಯಿತಿ ಸ್ಥಾನ ನೀಡಬೇಕಾಗುತ್ತದೆ. ಕುಂಸಿ, ಹೊಳೆಹೊನ್ನೂರು, ರಿಪ್ಪನ್ ಪೇಟೆ ಸೇರಿ ಕೆಲವು ಪ್ರಮುಖ ಊರುಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರ ಮುಂದಿದ್ದು, ಸದ್ಯವೇ ಘೋಷಿಸುವ ಸಾಧ್ಯತೆಯೂ ಇದೆ. ಹೀಗಾಗಿ ಕಳೆದ ಬಾರಿ ಇದ್ದ 2804 ಗ್ರಾಮ ಪಂಚಾಯಿತಿ ಸ್ಥಾನಗಳು ಈ ಬಾರಿ ಇರುವುದಿಲ್ಲ.
ವಿಧಾನ ಬದಲು: ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರತಿ 400 ಮತದಾರರಿಗೆ ಒಂದು ಸ್ಥಾನವೆಂದು ನಿಗದಿಪಡಿಸಲಾಗಿತ್ತು. ಆದರೆ, ಈ ಬಾರಿ ಈ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಪ್ರತಿನಿಧಿಯನ್ನು ಆಯ್ಕೆ ಮಾಡುವವರ ಸಂಖ್ಯೆ ಕೂಡ ಶೇ. 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.
ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಸಿರುವ ಆಡಳಿತ ಯಂತ್ರ ಇನ್ನು ಮುಂದೆ ಗ್ರಾಮ ಪಂಚಾಯಿತಿ ವಾರ್ಡ್ ಗುರುತಿಸಿ ನಿಗದಿ ಮಾಡುವ ಕೆಲಸಕ್ಕೆ ಕೈ ಹಾಕಬೇಕಾಗಿದೆ. ಇದೊಂದು ದೊಡ್‌ಡ ಪ್ರಕ್ರಿಯೆಯಾಗಿದ್ದು ಸದ್ಯವೇ ಆರಂಭವಾಗಲಿದೆ.


ಶ್ರೀಕಾಂತ್ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.