ಸ್ವಚ್ಛತಾ ಯಂತ್ರ ಸೇವೆಗೆ ಚಾಲನೆ
ಕ.ಪ್ರ.ವಾರ್ತೆ, ಸಾಗರ, ಏ.22
ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು, ಖಾಸಗಿ ಖಾಲಿ ನಿವೇಶನಗಳಲ್ಲಿ ಗಿಡಗಳನ್ನು ಬೆಳೆಸಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುವ ರೀತಿಯಲ್ಲಿ ವರ್ತಿಸುವವರ ವಿರುದ್ಧ ನಗರಸಭೆ ಕಾಯ್ದೆ ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ ಹೇಳಿದರು.
ನಗರಸಭೆಯಲ್ಲಿ ಮಂಗಳವಾರ ನಗರ ಸ್ವಚ್ಛತೆಗಾಗಿ ಖರೀದಿಸಲಾಗಿರುವ ವಿವಿಧ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆಯಿಂದ ಪ್ರತಿದಿನ ಕಸ ಸಂಗ್ರಹಣೆಗೆ ಆಟೋ ಟಿಪ್ಪರ್ ಬಿಟ್ಟಿದ್ದು, ಅದಕ್ಕೆ ಕಸ ಹಾಕುವ ಮೂಲಕ ನಗರ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಈಗಾಗಲೇ ನಗರದ ಜನಸಂಖ್ಯೆ 60 ಸಾವಿರ ದಾಟಿದೆ. ಜನರಿಗೆ ಸಮರ್ಪಕ ಕುಡಿಯುವ ನೀರು, ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಕಸ ಸಂಗ್ರಹಣೆಗೆ 6 ಆಟೋ ಟಿಪ್ಪರ್, 4 ಟ್ಯಾಕ್ಟರ್ಗಳಿದ್ದು, ಗುತ್ತಿಗೆ ಹಾಗೂ ಕಾಯಂ ಪೌರ ಕಾರ್ಮಿಕರು 3 ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನಗರಸಭೆ ವತಿಯಿಂದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪೌರಕಾರ್ಮಿಕರಿಗೆ ಕೆಲಸ ಸುಲಭಗೊಳಿಸುವ ಉದ್ದೇಶದಿಂದ ಹೊಸದಾಗಿ ಸುಮಾರು 2 ಲಕ್ಷ ವೆಚ್ಚದಲ್ಲಿ ವೀಡ್ ಕಟ್ಟರ್ ಮತ್ತಿತರ ಯಂತ್ರಗಳನ್ನು ಖರೀದಿಸಲಾಗಿದೆ. ಉದ್ಯಾನವನದಲ್ಲಿ ಹುಲ್ಲುಗಳನ್ನು ಕತ್ತರಿಸಲು, ರಸ್ತೆ ಬದಿಯಲ್ಲಿರುವ ಮರಗಳಲ್ಲಿನ ಅಪಾಯಕಾರಿ ಟೊಂಗೆಗಳನ್ನು ಕತ್ತರಿಸಲು ಈ ಯಂತ್ರ ಉಪಯೋಗಿಸಲಾಗುತ್ತದೆ. ಈ ಯಂತ್ರಗಳ ಮೂಲಕ ತ್ವರಿತಗತಿಯಲ್ಲಿ ಕೆಲಸಗಳನ್ನು ನಿರ್ವಹಿಸಲು ಸಾಧ್ಯ ಎಂದರು.
ಸದಸ್ಯ ತೀ.ನ. ಶ್ರೀನಿವಾಸ್ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ತ್ವರಿತಗತಿಯ ಚಾಲನೆ ನೀಡುವ ಉದ್ದೇಶದಿಂದ ಕೆಲವು ಮಾರ್ಪಾಡುಗಳನ್ನು ಕಾಂಗ್ರೆಸ್ ಆಡಳಿತ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಸಭೆ ವ್ಯಾಪ್ತಿಯ ಜನರು ನಮ್ಮ ನಗರಸಭೆ ಆಡಳಿತ ವೈಖರಿಯನ್ನು ಪ್ರಶಂಸಿಸುವ ನಿಟ್ಟಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ಉದ್ಯಾನವನ ನಿರ್ವಹಣೆ, ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಪೌರಾಯುಕ್ತ ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ನಗರಸಭೆ ಸದಸ್ಯರಾದ ಗಣಾಧೀಶ್, ಮೋಹನ್, ಉಮೇಶ್, ನಾಗರತ್ನ ಸಿ., ಶ್ರೀನಿವಾಸ್ ಮೇಸ್ತ್ರಿ, ಸಿ.ಅರವಿಂದ್, ಶ್ರೀನಾಥ್, ಜಿ.ಕೆ.ಭೈರಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

