ಶಿವಮೊಗ್ಗ

ಸಾಕಷ್ಟು ಪುರಾವೆ: ಎಸ್ಪಿ ಕೌಶಲೇಂದ್ರ ಕುಮಾರ್

Published On :


ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಶಾಖೆಯ ಸಾಲ ನೀಡಿಕೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಶಾಮೀಲಾಗಿದ್ದಾರೆ ಎಂಬುದಕ್ಕೆ ಪುರಾವೆ ಇದೆ. ಹಣದ ವಹಿವಾಟಿನಲ್ಲಿ ಅವರ ಸಂಬಂಧವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಅವ್ಯವಹಾರದ ಶೇ.50ರಷ್ಟು ಪಾತ್ರ ಸಿಬ್ಬಂದಿಯದಾದರೆ ಶೇ.50ರಷ್ಟು ಆಡಳಿತ ಮಂಡಳಿಗೆ ಸೇರಿದ ಕೆಲವರಿಗೆ ಸೇರಿದೆ ಎಂಬ ಅಂಶ ಹೊರಗೆಡಹಿದ್ದಾರೆ.
ತುರ್ತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಅವ್ಯವಹಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೊಳಪಡಿಸಲಾಯಿತು. ಈ ವೇಳೆ ತನಿಖಾಧಿಕಾರಿ ಅನೇಕ ಮಾಹಿತಿ ಕಲೆಹಾಕಿದ್ದು, ಮಂಜುನಾಥ ಗೌಡರು ಮೋಸ, ವಂಚನೆ, ಅಧಿಕಾರ ದುರುಪಯೋಗ, ಬ್ಯಾಂಕ್ ವಿಶ್ವಾಸಕ್ಕೆ ದ್ರೋಹ ಎಸಗಿರುವುದು ಕಂಡುಬಂದಿದೆ. ಹೀಗಾಗಿಯೇ  ಐಪಿಸಿ 420, 406, 408, 409, 120(ಬಿ), 34 ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಅಪರಾಧ ಪತ್ತೆದಳಕ್ಕೆ ತನಿಖೆ:   ಜು.18ರಂದು ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ರು. 1.79 ಕೋಟಿ ನಗದು ಅವ್ಯವಹಾರವಾಗಿದೆ. ಈ ಪ್ರಕರಣದಲ್ಲಿ ಶಾಖಾ ವ್ಯವಸ್ಥಾಪಕರು ಮತ್ತು ನಗದು ಗುಮಾಸ್ತರ ಮೇಲೆ ಅನುಮಾನವಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
   ದೊಡ್ಡಪೇಟೆ ಇನ್ಸ್‌ಪೆಕ್ಟರ್ ತನಿಖೆ ಕೈಗೊಂಡರು. ಆದರೆ, ಅವ್ಯವಹಾರದ ವ್ಯಾಪ್ತಿ ದೊಡ್ಡದಿದೆ ಎನ್ನಿಸಿದ್ದರಿಂದ ಜಿಲ್ಲಾ ಅಪರಾಧ ಪತ್ತೆದಳಕ್ಕೆ ತನಿಖೆ ವಹಿಸಿದೆ ಎಂದು ಕೌಶಲೇಂದ್ರ ಕುಮಾರ್ ವಿವರಿಸಿದರು.
ಹಗರಣದ ತನಿಖೆ ನಡೆಸುತ್ತಾ ಹೋದಂತೆ ಡಿಸಿಸಿಬಿ ನಗರ ಶಾಖೆಯಲ್ಲಿ ಸುಮಾರು ರು. 62 ಕೋಟಿ ಮೊತ್ತದ ಸಾಲವನ್ನು ನಕಲಿ ಚಿನ್ನಾಭರಣ ಅಡವಿಟ್ಟು, ಆಭರಣ ಇಲ್ಲದೇ ನೀಡಿರುವುದು ಪತ್ತೆಯಾಯಿತು. ಅಲ್ಲದೆ ಸಾಲ ನೀಡಿಕೆಯಲ್ಲಿಯೂ ನೀತಿ - ನಿಯಮ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದು ಕಂಡುಬಂದಿತ್ತು. ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಬ್ಯಾಂಕ್ ವ್ಯವಸ್ಥಾಪಕಿ ಶೋಭಾ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿತ್ತು.  ಬಂಧಿತ ಆರೋಪಿಗಳು ನೀಡಿರುವ ಸುಳಿವಿನ ಮೇರೆಗೆ ಗುರುವಾರ ರಾತ್ರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಡಿ.ಸಿ.ಸಿ. ಬ್ಯಾಂಕ್ ಕೇಂದ್ರ ಕಚೇರಿ ವ್ಯವಸ್ಥಾಪಕ ನಾಗಭೂಷಣ ಹಾಗೂ ಪ್ರಕರಣದ ಮುಖ್ಯ ಆರೋಪಿ ಬ್ಯಾಂಕ್ ಮ್ಯಾನೇಜರ್ ಶೋಭಾ ತಂದೆ ಬಸಪ್ಪರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.