ಶಿವಮೊಗ್ಗ

ಬಗರ್‌ಹುಕುಂ ರೈತರ ಒಕ್ಕಲೆಬ್ಬಿಸಲು ಬಿಡಲ್ಲ

Published On :

ಶಿರಾಳಕೊಪ್ಪ: ತಾಲೂಕಿನ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಹಕ್ಕು ಪತ್ರಕೊಡಿಸಲು ಕಾನೂನು ಚೌಕಟ್ಟಿನಡಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಯಡಿಯೂರಪ್ಪ ಹೇಳಿದರು.
ತಾಲೂಕಿನ ಶಿರಾಳಕೊಪ್ಪ ಭಾಗದ ವಿವಿಧ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿದ ಅವರು, ಈ ಹಿಂದೆ ಬಗರ್‌ಹುಕುಂ ರೈತರ ಸಮಸ್ಯೆ ಬಂದಾಗ ನನ್ನ ಪ್ರಾಣದ ಹಂಗು ತೊರೆದು ಹೋರಾಡಿದ್ದೇನೆ. ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಿಮ್ಮ ಯಾವುದೇ ಸಮಸ್ಯೆ ಮತ್ತು ಕೆಲಸ ಕಾರ್ಯಗಳಿಗೆ ಚುನಾವಣೆಗೆ ಸ್ಪರ್ಧಿಸಿರುವ ನಿಮ್ಮ ರಾಘಣ್ಣ ಸ್ಪಂದಿಸುತ್ತಾರೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಕಡಿಮೆ ಖರ್ಚಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ತೆಗೆಯುವ ಬಗ್ಗೆ ಚಿಂತನೆ, ದೇಶದಲ್ಲಿ ಬೃಹತ್ ಕೈಗಾರಿಕೆ ತರುವ ಮುಖಾಂತರ ದೇಶದ ಯುವಪೀಳಿಗೆಗೆ ಕೆಲಸ ಕೊಡಿಸುವ ಆಸೆ ಹೊಂದಿದ್ದಾರೆ ಎಂದು ತಿಳಿಸಿದರು.
ಮಾದರಿ ತಾಲೂಕು ಗುರಿ: ತಾಲೂಕನ್ನು ಮಾದರಿ ಮಾಡಬೇಕೆಂಬ ಗುರಿ ಇಟ್ಟುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ನಾನು 5 ವರ್ಷ ಪೂರ್ಣ ಅವಧಿ ಮುಖ್ಯಮಂತ್ರಿ ಆಗಿರುತ್ತಿದ್ದರೆ ಯಾವುದೇ ಕೆಲಸ ಕಾರ್ಯ ಬಾಕಿ ಉಳಿಯದಂತೆ ಮಾಡುತ್ತಿದ್ದೆ. ನಾನು ಮತ್ತು ಚುನಾವಣೆಗೆ ಸ್ಪರ್ಧಿಸಿರುವ ರಾಘವೇಂದ್ರ ನಿಮ್ಮ ಯಾವುದೇ ಕೆಲಸ ಕಾರ್ಯ ಮಾಡಲು ಸಿದ್ದರಿದ್ದೇವೆ. ಚುನಾವಣೆಯಲ್ಲಿ ಯಾರೇ ಸ್ಪರ್ಧಿಸಲಿ ನೀವು ತಲೆಕೆಡಿಸಿಕೊಳ್ಳದೇ ಲೋಕಸಭೆ ಚುನಾವಣೆಯಲ್ಲಿ ಕೊಟ್ಟ ಬಹುಮತಕ್ಕಿಂತ ಹೆಚ್ಚು ಮತಕೊಟ್ಟು ಚುನಾವಣೆಯಲ್ಲಿ ನಿಮ್ಮ ರಾಘಣ್ಣನನ್ನು ಗೆಲ್ಲಿಸಿ ಎಂದು ಕೋರಿದರು.
ಬೆರಳು ತೋರಿಸದಂತೆ: ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ನಾನು ಯಾರೊಬ್ಬರೂ ಬೆರಳು ಮಾಡಿ ತೋರಿಸದ ಹಾಗೆ ಸಂಸದನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಹಿಂದೆ ಯಡಿಯೂರಪ್ಪನವರು ರೈತರಿಗಾಗಿ ಸಾಕಷ್ಟು ಶ್ರಮವಹಿಸಿ ಎರಡು ಬಾರಿ ಸಾಲಮನ್ನಾ ಮಾಡಿಸಿದರು. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಶಿರಾಳಕೊಪ್ಪ ಭಾಗದಲ್ಲಿ ಯಾವುದೇ ನೀರಾವರಿ ಸೌಲಭ್ಯವಿಲ್ಲ- ಯಾವುದೇ ಡ್ಯಾಂಮ್ ಇಲ್ಲದೇ ಇರುವುದನ್ನು ಅರಿತು 220ಕೆವಿ ವಿದ್ಯುತ್ ಸ್ಥಾವರ ನಿರ್ಮಿಸಿ ವಿದ್ಯುತ್ ವೈಫಲ್ಯ ಇಲ್ಲದಹಾಗೆ ಹಾಗೂ ಓಲ್ಟೇಜ್ ಕುಸಿಯದ ಹಾಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗೆಯೇ ಎಲ್ಲ ಜನಾಂಗಕ್ಕೂ ರಾಜ್ಯದ ಎಲ್ಲ ಜನರಿಗೂ ಒಂದಲ್ಲ ಒಂದು ಸೌಲತ್ತು ದೊರಕುವ ಹಾಗೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಇತರರ ಅಪಪ್ರಚಾರಕ್ಕೆ ಕಿವಿಗೊಡದೇ ಪ್ರತಿ ಗ್ರಾಮದಲ್ಲಿ ಅತಿಹೆಚ್ಚು ಮತ ಬೀಳುವಂತೆ ಪ್ರಯತ್ನಿಸಿ ಎಂದರು.
ವಿವಿಧ ಕಡೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಸುಣ್ಣದಕೊಪ್ಪ ಪರಮೇಶ್ವರಪ್ಪ, ಕೊರಟಿಕೆರೆ ಗ್ರಾಪಂ ಉಪಾಧ್ಯಕ್ಷ ಮಂಜಾನಾಯ್ಕ್, ದೇಸ್ಯಾನಾಯ್ಕ್, ಬೆಲವಂತನಕೊಪ್ಪದ ಜೆಡಿಎಸ್ ಮುಖಂಡ ರಾಘು, ಶಿರಾಳಕೊಪ್ಪ ಪಪಂ ಮಾಜಿ ಸದಸ್ಯೆ ಜಯಶ್ರೀ ಹಾಗೂ ನೂರಾರು ಮುಸ್ಲಿಂ ಮುಖಂಡರು ಬಿಜೆಪಿ ಸೇರಿದ್ದಾಗಿ ತಿಳಿಸಿದರು.
ಮಾಜಿ ಶಾಸಕ ಮಹಲಿಂಗಪ್ಪ, ಅಗಡಿ ಅಶೋಕ, ಜಿಪಂ ಸದಸ್ಯ ಬಂಗಾರ ನಾಯ್ಕ, ಈಶ್ವರಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ, ತಾಪಂ ಅಧ್ಯಕ್ಷೆ ಸವಿತಾ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ರೇವಣಪ್ಪ, ಸಣ್ಣ ಹನುಮಂತಪ್ಪ, ತಡಗಣಿ ಗ್ರಾಪಂ ಅಧ್ಯಕ್ಷ ಮಂಜಣ್ಣ, ಜಿರೇಜಂಬೂರ ಬಸವನಗೌಡ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ರಾಜು, ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್ ಪ್ರಮುಖರು ಹಾಜರಿದ್ದರು.
ಚುನಾವಣೆ
ವೀಕ್ಷಕರ ನೇಮಕ
ಶಿಕಾರಿಪುರ: ಉಪಚುನಾವಣೆಯಲ್ಲಿನ ದೂರು ಮತ್ತಿತರ ಸಮಸ್ಯೆ ಬಗ್ಗೆ ಚುನಾವಣಾ ವೀಕ್ಷಕರನ್ನು ಕೇಂದ್ರ ಚುನಾವಣಾ ಆಯೋಗ ನೇಮಕಗೊಳಿಸಿದ್ದು, 9483182249ಕ್ಕೆ  ಸಂಪರ್ಕಿಸುವಂತೆ ಚುನಾವಣಾಧಿಕಾರಿ ಡಾ.ಉದಯಕುಮಾರ್ ತಿಳಿಸಿದ್ದಾರೆ. ಇದೇ 21ರಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರ 115ಕ್ಕೆ ನಡೆಯಲಿರುವ ಉಪಚುನಾವಣೆಗೆ ಸಂಬಂದಿಸಿದಂತೆ ಭಾರತ ಚುನಾವಣಾ ಆಯೋಗದಿಂದ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಸುನೀಲ್ ಕೇಂದ್ರೇಕರ್ ಅವರನ್ನು ನೇಮಕಗೊಳಿಸಲಾಗಿದೆ. ಚುನಾವಣೆಗೆ ಸಂಬಂದಿಸಿದ ದೂರು ಮತ್ತಿತರ ಸಮಸ್ಯೆ ಬಗ್ಗೆ ಬರಹದಲ್ಲಿ ಅಥವಾ ಖುದ್ದು ಪ್ರವಾಸಿ ಮಂದಿರದಲ್ಲಿ ಅಥವಾ 08187-222387 ಅಥವಾ ಮೊಬೈಲ್ 9483182249ಕ್ಕೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.