ಮುಖಮಂಟಪ ಗೋಪುರ ದುರಸ್ತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಸಾಗರ, ಫೆ.1
ಇಲ್ಲಿನ ಐತಿಹಾಸಿಕ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಗೋಪುರ ಕುಸಿದು ವರ್ಷ ಕಳೆದರೂ ಆಡಳಿತ ಪುನರ್ ನಿರ್ಮಾಣ ಮಾಡಲು ಸೂಕ್ತ ಕ್ರಮ ಜರುಗಿಸದೆ ಇರುವುದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದರು.
ದೇವಸ್ಥಾನದ ತೇರುಮನೆ ಎದುರು ಮಹಾಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ದೇವಸ್ಥಾನ ಮುಖಮಂಟಪ ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಮುಖಮಂಟಪವನ್ನು ಪುನರ್ ನಿರ್ಮಾಣ ಮಾಡುವಂತೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗೋಪುರ ಕುಸಿದು ಬಿದ್ದಿರುವುದು ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಹದ್ದಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಹಣ ತೆಗೆದಿರಿಸಿದ್ದರೂ ಅದರ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿ ಬಾರಿ ಮನವಿ ಸಲ್ಲಿಸಿದ್ದಾಗಲೂ ಸಬೂಬು ಹೇಳುತ್ತಿದ್ದಾರೆ. ತಕ್ಷಣ ಗೋಪುರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಸಾಗರ ಬಂದ್ನಂತಹ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ರೂಪುರೇಷೆ: ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಲು ನಗರವ್ಯಾಪ್ತಿಯ ಎಲ್ಲಾ ದೇವಸ್ಥಾನ ಆಡಳಿತ ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯ ಯೋಜನೆ ಕುರಿತು ರೂಪುರೇಷೆ ಸಿದ್ಧಪಡಿಸುವುದು, ಮುಖಮಂಟಪ ಪುನರ್ ನಿರ್ಮಾಣ ಸಂದರ್ಭದಲ್ಲಿ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನ ರಸ್ತೆಯಿಂದ ದೇವಸ್ಥಾನಕ್ಕೆ ಮಾರ್ಗ ನಿರ್ಮಾಣ, ಹಳೆ ತಾಲೂಕು ಕಚೇರಿ ತೆಗೆದು ಅಲ್ಲಿಂದಲೆ ದೇವಸ್ಥಾನ ಕಾಮಗಾರಿ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಮುಖಮಂಟಪ ಪುನರ್ ನಿರ್ಮಾಣ ಸಂದರ್ಭದಲ್ಲಿ ದೇವಸ್ಥಾನದ ವಾಸ್ತು ತಜ್ಞರಾದ ಜಗದೀಶ್ ಅವರ ಸಲಹೆ ಪಡೆಯುವುದು, ಕಾಮಗಾರಿಯನ್ನು ತಕ್ಷಣದಿಂದಲೆ ಕೈಗೆತ್ತಿಕೊಳ್ಳುವುದು, ಹಾಲಿ ಕಾರ್ಯ ನಿರ್ವಹಿಸುತ್ತಿರುವ ದೇವಸ್ಥಾನ ಹಿತರಕ್ಷಣಾ ಸಮಿತಿಗೆ ಇನ್ನಷ್ಟು ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷತೆಯನ್ನು ದಾನಿ ಸಿ. ಗೋಪಾಲಕೃಷ್ಣರಾವ್ ವಹಿಸಿದ್ದರು. ಸಮಿತಿ ಸಂಚಾಲಕ ಐ.ವಿ. ಹೆಗಡೆ, ಪ್ರಮುಖರಾದ ಯು.ಎಚ್. ರಾಮಪ್ಪ, ಅ.ಪು. ನಾರಾಯಣಪ್ಪ, ಟಿ.ಡಿ. ಮೇಘರಾಜ್, ಚೇತನರಾಜ್ ಕಣ್ಣೂರು, ಪುರುಷೋತ್ತಮ, ವಿ.ಕೆ. ವಿಜಯಕುಮಾರ್, ಗೋಪಾಲಕೃಷ್ಣ ಶ್ಯಾನಭಾಗ್, ಅರುಣ ಘಾಟೆ, ರಾಜು ಮಡಿವಾಳ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

