ಶಿವಮೊಗ್ಗ

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭಟ್ಟರ ಸಾರಥ್ಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 3
ಮಲೆನಾಡಿನಲ್ಲಿಯೇ ಜನಿಸಿದ ಕವಿಗೆ ಈಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಮೆರಗು. ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದು ಶಿವಮೊಗ್ಗದಲ್ಲಿಯೇ. ಇಂಟರ್ ಮೀಡಿಯಟ್ ವರೆಗೂ ಇಲ್ಲಿಯೇ ವ್ಯಾಸಂಗ.
1936ರ ಅಕ್ಟೋಬರ್ 29ರಂದು ಜನಿಸಿದ ಇವರ ತಂದೆ ನೈಲಾಡಿ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಧೃತಿಗೆಡದೆ, ಬಡತನಕ್ಕೆ ಅಂಜದೆ ಇಂಟರ್ ಮೀಡಿಯಟ್ ಮುಗಿಸಿ ಮೈಸೂರಿನ ಮಹಾರಾಜ ಕಾಲೇಜಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದರು.
ನಗರದ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಹಾಲಿ ಇರುವ ಚಿನ್ಮಯ ಮಿಷನ್ ಪಕ್ಕದಲ್ಲಿಯೇ ಇದ್ದ ಅಮರನಾಥ್ ಅವರ ತಂಗಿ ಜ್ಯೋತಿ ಅವರನ್ನು ಲಕ್ಷ್ಮೀನಾರಾಯಣ ಭಟ್ಟರು ವಿವಾಹವಾಗಿದ್ದಾರೆ. ಈಗಲೂ ಸಹ ಶಿವಮೊಗ್ಗಕ್ಕೆ ಆಗಮಿಸಿದಾಗ ಲಕ್ಷ್ಮೀನಾರಾಯಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಅವರ ಅಕ್ಕನ ಮನೆಯಲ್ಲಿ ವಾಸ್ತವ್ಯ ಮಾಡುತ್ತಾರೆ.
ಶಿವಮೊಗ್ಗದ ನಂಟನ್ನು ಸದಾ ಉಳಿಸಿಕೊಂಡಿರುವ ಇವರು ಕಳೆದ ವರ್ಷ ನಗರಸಭೆ ಆಯೋಜಿಸಿದ್ದ ದಸರಾ ಕಾರ್ಯಕ್ರಮಕ್ಕಾಗಿ “ÈÚßÅæ«ÛsÚ WÞ}æ’ ರಚಿಸಿ ತಮ್ಮ ನೆನಪನ್ನು ತಾಜಾಗೊಳಿಸಿಕೊಂಡಿದ್ದರು.
ಎಂ.ಎ. ಪದವಿ ಪಡೆದ ಬಳಿಕ ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿದರು. ನಂತರ ಕಾಲೇಜು ಅಧ್ಯಾಪಕರಾಗಿ ಸೇರಿದ್ದು ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿಗೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರೊಫೆಸರ್, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಆರ್ಟ್ ಫ್ಯಾಕಲ್ಟಿ ಡೀನ್ ಆಗಿ, ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಸಲ್ಲಿಸಿದ ಇವರು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಇವರು ಶಿವಮೊಗ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಇವರು ಈಗ ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದಾರೆ. ಸಮ್ಮೇಳನವು ನಗರದ ಕುವೆಂಪು ರಂಗಮಂದಿರ ಹಾಗೂ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾರ್ಚ್ 8 ಹಾಗೂ 9ರಂದು ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಆಯ್ಕೆ ಸಂದರ್ಭದಲ್ಲಿ ಡಾ. ಸುಂದರ, ಡಾ. ಎಂ.ಜಿ. ಈಶ್ವರಪ್ಪ, ಎನ್. ಶ್ರೀನಿವಾಸ ಉಡುಪ, ಡಾ. ಜೆ.ಕೆ. ರಮೇಶ್, ಡಾ. ಪದ್ಮಪ್ರಸಾದ್, ಡಾ. ಗುಂಡಾಜೋಯಿಸ್, ಡಾ. ಸ. ಉಷಾ, ವಿಜಯಾಶ್ರೀ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಗೆ ಬಂದವು. ಇವರೆಲ್ಲರೂ ಸಹ ಇದುವರೆಗೆ ನಡೆದ ತಾಲೂಕು ಸಮ್ಮೇಳನಗಳ ಅಧ್ಯಕ್ಷರಾಗಿದ್ದವರು.
ಅವರ ಸಾಹಿತ್ಯ ಸಾಧನೆ, ವಯಸ್ಸು ಎಲ್ಲವನ್ನೂ ಪರಿಗಣಿಸಿ ಕೊನೆಗೆ ಸಭೆಯು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರನ್ನು ಆಯ್ಕೆ ಮಾಡಿದೆ ಎಂದು ಕಸಾಪ ಹೇಳಿದೆ.
ಪ್ರತಿನಿಧಿ ನೋಂದಣಿ: ಜಿಲ್ಲಾ ಸಮ್ಮೇಳನದ ಯಶಸ್ವಿಗೆ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಮತ್ತು ಸಾಹಿತ್ಯ ಆಸಕ್ತರು ನೂರು ರು. ಶುಲ್ಕ ಪಾವತಿಸಿ ಪ್ರತಿನಿಧಿಗಳಾಗುವಂತೆ ಮನವಿ ಮಾಡಲಾಯಿತು. ಎಲ್ಲಾ ತಾಲೂಕು ಸಮಿತಿಗಳು ಪ್ರತಿನಿಧಿ ನೋಂದಣಿ ಕಾರ್ಯದಲ್ಲಿ ಸಹಕರಿಸಲು ಕೇಳಿಕೊಳ್ಳಲಾಯಿತು.
ಸೋಮವಾರದಿಂದಲೇ ನೋಂದಣಿ ಕಾರ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಆರಂಭಿಸಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾದ ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯ ಚಂದ್ರಶೇಖರ ಶೇಟ್ ಅವರು ಒಂದು ಸಾವಿರ ರು. ಪಾವತಿಸಿ ಪ್ರತಿನಿಧಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದರು.
ಎಲ್ಲಾ ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವ ವಿಚಾರವಾಗಿ ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಸಲಹೆಗಳನ್ನು ನೀಡಿದರು.

15ರಂದು ಮಕ್ಕಳ ಸಾಹಿತ್ಯ ಸಮ್ಮೇಳನ
ಸಾಹಿತ್ಯ ಪರಿಷತ್ತು ಇದೂವರೆಗೆ ಭದ್ರಾವತಿ, ಶಿವಮೊಗ್ಗ, ಹೊಸನಗರ, ಸಾಗರ ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಸಂಘಟಿಸಿದೆ. ತೀರ್ಥಹಳ್ಳಿ ತಾಲೂಕು ಸಮ್ಮೇಳನವು ಫೆ.15ರಂದು ನಡೆಯುವುದು.
ಆದರೆ ಶಿಕಾರಿಪುರ ಮತ್ತು ಸೊರಬದಲ್ಲಿ ಮಕ್ಕಳ ಸಮ್ಮೇಳನ ನಡೆಸಲು ಅಲ್ಲಿಯ ಸಮಿತಿಗಳು ಉತ್ಸಾಹ ತೋರುತ್ತಿಲ್ಲದಿರುವ ಬಗ್ಗೆ ಕಸಾಪ ಕಾರ್ಯಕಾರಿ ಸಮಿತಿ ಚರ್ಚಿಸಿದೆ.
ಜಿಲ್ಲಾ ಮಕ್ಕಳ ಸಮ್ಮೇಳನ ಫೆಬ್ರವರಿ 20ರಂದು ನಡೆಸಲು ತೀರ್ಮಾನಿಸಲಾಗಿದ್ದು, ತಾಲೂಕು ಸಮ್ಮೇಳನದಲ್ಲಿ ಆಯ್ಕೆಯಾದ ಪ್ರತಿಭಾವಂತರ ಹೆಸರುಗಳನ್ನು ತಕ್ಷಣ ಜಿಲ್ಲಾ ಸಮಿತಿಗೆ ನೀಡುವಂತೆ ಕೋರಲಾಯಿತು.
ಮುಂದಿನ ಸಾಹಿತ್ಯ ಹುಣ್ಣಿಮೆ ಫೆ.16ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ, ಫೆ.21ರಂದು ಪ್ರಾಚೀನ ಸಾಹಿತ್ಯ ರಸಗ್ರಹಣ ಶಿಬಿರ, ಹೊನ್ನೇಮರಡುವಿನಲ್ಲಿ ಮೂರುದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ, ಸಾಹಿತ್ಯ ಗ್ರಾಮದ ಪ್ರಗತಿ ಕುರಿತ ಮಾಹಿತಿ ನಡೆಯಲಿದೆ ಎಂದು ಮಾಹಿತಿ ನೀಡಲಾಯಿತು.
ಪ್ರಸನ್ನರಿಗೆ ಬೆಂಬಲ: ಕೈಮಗ್ಗ ನೇಕಾರ ಪರವಾಗಿ ಉಪವಾಸ ಸತ್ಯಾಗ್ರಹ ಕುಳಿತಿದ್ದ ಸಾಹಿತಿ, ಚಿಂತಕ ಪ್ರಸನ್ನ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸಿದೆ. ಸರ್ಕಾರ ನೇಕಾರರ ಆತಂಕವನ್ನು ದೂರಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆ ಒಮ್ಮತ ತೀರ್ಮಾನ ಕೈಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.