ಶಿವಮೊಗ್ಗ

ನಿರ್ಲಕ್ಷಿಸಿದರೆ ಸರ್ಕಾರ ಪತನ

Published On :

ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಫೆ.6
ಮಲೆನಾಡು ಭಾಗದಲ್ಲಿ ಜೀವನಾಧಾರವಾದ ಅಡಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿರುವಾಗ ಸರ್ಕಾರವೇನಾದರೂ ರೈತರ ಪರವಾಗಿ ನಿಲ್ಲದೆ ಇದ್ದರೆ, ಸರ್ಕಾರವೇ ಪತನವಾದೀತು. ಜತೆಗೆ ರಕ್ತಕ್ರಾಂತಿ ನಡೆದೀತು ಎಂದು ಮಲೆನಾಡು ಭಾಗದ ರೈತರು ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘವು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಪ್ರಮುಖರು, ಅಡಕೆ ಬೆಳೆಗಾರರ ಬಗ್ಗೆ ಸರ್ಕಾರ ಉದಾಸೀನ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಿದರಲ್ಲದೆ, ಒಂದು ವೇಳೆ ಉದಾಸೀನ ಮಾಡಿದ್ದೇ ಆದಲ್ಲಿ ಸರ್ಕಾರವೇ ಪತನವಾದೀತು ಎಂದು ಎಚ್ಚರಿಸಿದರು.
ಒತ್ತಡ ಹೇರಿ: ಸಂಘಟನೆಯ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನೆ ಸಂಸ್ಥೆಯಿಂದ ಅಡಕೆಯ ಸಂಶೋಧನಾ ವರದಿ ಪಡೆದು ಇದನ್ನು ಸುಪ್ರಿಂಕೋರ್ಟಿಗೆ ಕೇಂದ್ರ ಸರ್ಕಾರವೇ ಸಲ್ಲಿಸಿ, ಅಡಕೆ ಹಾನಿಕರವಲ್ಲವೆಂದು ಸಾಬೀತುಪಡಿಸುವ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಪರವಾಗಿ ಈಗಾಗಲೇ ಸುಪ್ರಿಂಕೋರ್ಟ್‌ನಲ್ಲಿ ಅಡಕೆ ನಿಷೇಧ ಮಾಡಬೇಕೆನ್ನುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಅಡಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ಸೂಕ್ತ ಭರವಸೆ ನೀಡಿದ್ದರೂ ಸುಪ್ರಿಂಕೋರ್ಟ್‌ನಲ್ಲಿ ಸರ್ಕಾರ ಸಲ್ಲಿಸಿರುವ ಅಡಕೆ ನಿಷೇಧದ ಪ್ರಸ್ತಾವನೆ ಬೆಳೆಗಾರರ ನೆತ್ತಿಯ ಮೇಲೆ ತೂಗಾಡುತ್ತಿರುವ ಕತ್ತಿಯಾಗಿದೆ. ಈ ಮಾರಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ನಿಂದ ಮೊದಲು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜೀವನ ಕಷ್ಟ: ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮಲೆನಾಡು ಪ್ರದೇಶದ ಅಡಕೆ ಬೆಳೆಗಾರರು ಈ ಸಾಲಿನ ಭಾರಿ ಮಳೆಯಿಂದಾಗಿ ಕೊಳೆರೋಗ ಬಾಧೆಯಿಂದ ಬೆಳೆಗಾರರು ಶೇ. 50ರಿಂದ 80ರಷ್ಟು ಅಡಕೆ ನಷ್ಟ ಹೊಂದಿದ್ದು, ಸಾಲ ಮರುಪಾವತಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಂದಿನ ಜೀವನ ನಡೆಸುವುದು ಕಷ್ಟವಾಗಿದೆ. ಆತಂಕದ ಬದುಕು ನಡೆಸುತ್ತಿದ್ದಾರೆ. ಮಲೆನಾಡು ಭಾಗದ ಅಡಕೆ ಬೆಳೆಗಾರರ ಪೈಕಿ ಶೇ. 95ಕ್ಕೂ ಹೆಚ್ಚು ಮಂದಿ ಕೇವಲ ಒಂದು ಹೆಕ್ಟೇರ್‌ಗಿಂತ ಕಡಿಮೆ ಹಿಡುವಳಿ ಹೊಂದಿದವರಾಗಿದ್ದಾರೆ ಎನ್ನುವ ಅಂಶವನ್ನು ಸರ್ಕಾರ ಅರಿಯಬೇಕೆಂದು ಹೇಳಿದರು.
ಗೋರಕ್‌ಸಿಂಗ್ ವರದಿ ಶಿಫಾರಸಿನಂತೆ, ಸಾಲ ಮರುಪಾವತಿ ಮಾಡಲು ಅಶಕ್ತರಾಗಿರುವ ಮಲೆನಾಡು ಭಾಗದ ಅಡಕೆ ಬೆಳೆಗಾರರು, ಬ್ಯಾಂಕ್ ಮತ್ತು ಸಹಕಾರಿ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಾಯ ಮಾಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.