20 ನಿಮಿಷ 20 ಸುದ್ದಿ
ಉತ್ತಮ ಶೈಕ್ಷಣಿಕ ಪದ್ಧತಿ ಹೊಂದಿರುವ ಭಾರತ
ಸಾಗರ: ವಿದೇಶಿ ಸ್ಥಿತಿಗತಿಗೆ ಹೋಲಿಕೆ ಮಾಡಿಕೊಂಡಾಗ ಭಾರತೀಯ ಶೈಕ್ಷಣಿಕ ಪದ್ಧತಿ ಹಾಗೂ ಪರಿಸ್ಥಿತಿ ಉತ್ತಮವಾಗಿದೆ. ಕೆಲವು ಲೋಪದೋಷಗಳಿದ್ದರೂ ಅದನ್ನು ಚರ್ಚೆ ಮೂಲಕ ಸರಿಪಡಿಸುವ ಎಲ್ಲಾ ಅವಕಾಶಗಳಿವೆ ಎಂದು ನ್ಯಾಯವಾದಿ ಟಿ.ಎಸ್. ರಮಣ ಹೇಳಿದರು. ಇಲ್ಲಿನ ಎಲ್.ಬಿ. ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರ ಕಾಲೇಜುಗಳ ಸಾಂಸ್ಕೃತಿಕ ಹಬ್ಬ ಅಭ್ಯುದಯ-2014 ಕಾರ್ಯಕ್ರಮ ಉದ್ಘಾಟಿಸಿ, ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವ ಮನೋಭಾವ ನಮ್ಮಿಂದ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಬಿ.ಸಿ. ಶಶಿಧರ್ ಪದವಿ ಪಡೆಯುವ ಉದ್ದೇಶಕ್ಕೆ ಕಾಲೇಜು ವಿದ್ಯಾಭ್ಯಾಸ ಎಂಬ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬರಬೇಕು ಎಂದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ..ಪ್ರಕಾಶ್ ಇತರರು ಇದ್ದರು.
ಅಭಿವೃದ್ಧಿ ನೆಪದಲ್ಲಿ ಪರಿಸರ ಅಧೋಗತಿ: ಆತಂಕ
ಸಾಗರ: ಅಭಿವೃದ್ಧಿಯ ನೆಪದಲ್ಲಿ ಪರಿಸರ ಅಧೋಗತಿಗೆ ಹೋಗುತ್ತಿದ್ದು ಇದರಿಂದ ಜನಸಾಮಾನ್ಯನ ಬದುಕು ತಲ್ಲಣಗೊಂಡಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು. ತಾಲೂಕಿನ ಕೆಳದಿ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ, ಪರಿಸರ ಅಸಮತೋಲನದಿಂದ ತಾಪಮಾನ ಏರಿಕೆ, ವಾಯುಮಾಲಿನ್ಯ, ನೀರಿನ ಸಮಸ್ಯೆಗಳಿಂದ ಮುಂದಿನ ಪೀಳಿಗೆಯ ಬದುಕು ಶೋಚನೀಯವಾಗಬಹುದು ಎಂದು ಎಚ್ಚರಿಸಿದರು. ಮುಂದಿನ ಕೆಲವೇ ವರ್ಷಗಳಲ್ಲಿ ನೀರಿನ ಬಳಕೆ ಹೆಚ್ಚಾಗಿ ಜನರು ಶುದ್ಧನೀರು ಪಡೆಯಲು ಹರಸಾಹಸಪಡಬೇಕಾದ ಸಂದರ್ಭ ಸೃಷ್ಟಿಯಾಗಬಹುದು. ವಿದ್ಯಾರ್ಥಿಗಳು ಪರಿಸರ ಪ್ರೇಮಿಯಾದರೆ ಮಾತ್ರ ಈ ಗಂಡಾಂತರದಿಂದ ಪಾರಾಗಬಹುದು ಎಂದು ಹೇಳಿದರು. ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಮಾ.26ರಂದು ಉಚಿತ ಸರಳ ಸಾಮೂಹಿಕ ವಿವಾಹ
ಶಿವಮೊಗ್ಗ: ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನವು ರಾಮಮನೋಹರ ಲೋಹಿಯರ ಜನ್ಮದಿನದ ಅಂಗವಾಗಿ 4ನೇ ವರ್ಷದ ಉಚಿತ ಸರಳ ಸಾಮೂಹಿಕ ವಿವಾಹವನ್ನು ನಗರದ ಲಗನ ಕಲ್ಯಾಣ ಮಂದಿರದಲ್ಲಿ ಮಾರ್ಚ್ 26ರಂದು ಏರ್ಪಡಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಹನುಮಂತಪ್ಪ, ಇಂದು ವಿವಾಹ ಎಂಬುದು ಅದ್ಧೂರಿಯಿಂದ ಕೂಡಿದ್ದು ರೈತರು ಸಾಕಷ್ಟು ಸಾಲಸೂಲ ಮಾಡಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾದ್ಯವಾದಷ್ಟು ಸಮಸ್ಯೆಯನ್ನು ನೀಗಿಸಬೇಕೆಂಬ ಉದ್ದೇಶದಿಂದ ಪ್ರತಿಷ್ಠಾನವು ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಸುತ್ತಾ ಬಂದಿದೆ ಎಂದರು.. ಹೆಸರು ನೋಂದಾಯಿಸಲು ಮಾರ್ಚ್ 15 ಕೊನೆಯದಿನವಾಗಿರುತ್ತದೆ ಎಂದು ಹನುಮಂತಪ್ಪ ತಿಳಿಸಿದರು. ಸಂಪರ್ಕ ಸಂಖ್ಯೆ- 91649 97980. ಜಯದೇವಪ್ಪ, ಅತಿಯಾ ಬೇಗಂ, ಮಸಿಯಪ್ಪ ಇದ್ದರು.
ಜ್ಞಾನದೀಪ ಶಾಲೆಯಲ್ಲಿ 15ನೇ ವಾರ್ಷಿಕೋತ್ಸವ
ಶಿವಮೊಗ್ಗ: ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ 15ನೇ ವಾರ್ಷಿಕೋತ್ಸವವನ್ನು ವರ್ಣರಂಜಿತವಾಗಿ ಆಚರಿಸಲಾಯಿತು. ಪ್ರತಿವರ್ಷ ಶಾಲೆಯು ಒಂದು ಧ್ಯೇಯ ವಾಕ್ಯವನ್ನಿಟ್ಟುಕೊಂಡು ಅದರಡಿಯಲ್ಲಿ ಕಾರ್ಯಕ್ರಮ ರೂಪಿಸಿ, ಪ್ರಚುರಪಡಿಸುವುದು ಪದ್ಧತಿ. ಈ ಹಿನ್ನೆಲೆಯಲ್ಲಿ ಈ ವರ್ಷ ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸಿ ಎಂಬ ಧ್ಯೇಯವಾಕ್ಯದೊಂದಿಗೆ ನಮ್ಮ ಸಿಹಿಮೊಗೆ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯಿಕ, ಪ್ರಾಕೃತಿಕ, ಐತಿಹಾಸಿಕ, ಪೌರಾಣಿಕ ವೈಭವಗಳನ್ನು ಸುಮಾರು 800 ವಿದ್ಯಾರ್ಥಿಗಳ ಪ್ರತಿಭೆಯ ಮೂಲಕ ಅನಾವರಣಗೊಳಿಸಲಾಯಿತು. ಮಕ್ಕಳಿಂದ ನೃತ್ಯ, ನಾಟಕ, ಯಕ್ಷಗಾನ, ಡೊಳ್ಳುಕುಣಿತ ಮುಂತಾದ ವರ್ಣರಂಜಿತ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದ್ಮಭೂಷಣ ಡಾ. ಸುರೇಶ್ ಅವರು ಮಾತನಾಡಿದರು.
ಸರ್ಕಾರಿ ನಿಯಮದಂತೆ ಮನೆ ನಿರ್ಮಿಸಿದರೆ ಮಾತ್ರ ಅನುದಾನ
ಹೊಸನಗರ: ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣಕ್ಕೆ ಜಿಪಿಎಸ್ ಅಳವಡಿಸಿರುದರಿಂದ ಸರ್ಕಾರಿ ನಿಯಮದಂತೆ ಮನೆಗಳನ್ನು ನಿರ್ಮಿಸಬೇಕು. ಇಲ್ಲವಾದರೆ ಅನುದಾನ ಮಂಜೂರಾತಿ ಅಸಾಧ್ಯ ಎಂದು ವಸತಿ ಯೋಜನೆ ನೋಡೆಲ್ ಅಧಿಕಾರಿ ಎಂ. ಮಂಜುನಾಥ್ ಎಚ್ಚರಿಕೆ ನೀಡಿದರು. ತಾಪಂ ಆಶ್ರಯದಲ್ಲಿ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು. ಮನೆ ನಿರ್ಮಿಸಲು ಸರ್ಕಾರ 1.20 ಸಹಾಯಧನ ನೀಡಲಿದೆ. ಬ್ಯಾಂಕ್ 20 ಸಾವಿರ ಸಾಲ ಹಾಗೂ ಸ್ವಂತ ಬಂಡವಾಳ 10 ಸಾವಿರ ಸೇರಿದಂತೆ ಒಟ್ಟು 1.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ಅವಕಾಶ ಇದೆ ಎಂದರು. ಮನೆ ನಿರ್ಮಾಣದ ಪ್ರತಿ ಹಂತದ ಚಿತ್ರಗಳನ್ನು ಜಿಪಿಎಸ್ ಅಪ್ಲೋಡ್ ಮಾಡಬೇಕು. ಕಡ್ಡಾಯವಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುಂತೆ ಫಲಾನುಭವಿಗಳಿಗೆ ಚಿತ್ರಸಹಿತ ಮಾಹಿತಿ ನೀಡಿದರು.
'ಸಾಹಿತ್ಯ ಅಭ್ಯಾಸದಿಂದ ಜ್ಞಾನಕಣಜ ವೃದ್ಧಿ'
ಶಿವಮೊಗ್ಗ: ಸತ್ಯ ಎಂಬುದು ಅಖಂಡವಾದುದು. ಸತ್ಯಕ್ಕೆ ಜ್ಞಾನದ ಶಾಖೆಗಳು ಸ್ಪರ್ಶಿಸುತ್ತವೆ ಎಂದು ಸಂಲನ್ಮೂಲ ವ್ಯಕ್ತಿ ಪ್ರೊ. ಎಸ್.ಚಂದ್ರಶೇಖರ್ ಹೇಳಿದರು. ನಗರದ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಗುರುವಾರ ಇತಿಹಾಸ ಮತ್ತು ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಅವರು-ಸಾಹಿತ್ಯ ಮತ್ತು ಚರಿತ್ರೆ' ವಿಷಯವಾಗಿ ಉಪನ್ಯಾಸ ನೀಡಿದರು. ಸಾಹಿತ್ಯ ಕೃತಿಗಳು ಕಣಜವಿದ್ದಂತೆ. ಇವುಗಳನ್ನು ಬಗೆದಷ್ಟೂ ಜ್ಞಾನ ಲಭ್ಯವಾಗುತ್ತದೆ. ಇವುಗಳನ್ನು ಸಮಕಾಲೀನವಾಗಿ ಅಭ್ಯಾಸ ಮಾಡಿದರೆ ನಮ್ಮ ಜ್ಞಾನದ ಕಣಜ ವೃದ್ಧಿಯಾಗುತ್ತದೆ ಎಂದರು. ಚರಿತ್ರೆಯಲ್ಲಿ ಭಿನ್ನವಾದ ಸೃಜನಶೀಲತೆಯಿದೆ. ಇದನ್ನು ಪ್ರತಿಯೊಬ್ಬ ಚರಿತ್ರೆ ವಿದ್ಯಾರ್ಥಿಯೂ ಗಮನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ್, ಕೆ.ಜಿ.ವೆಂಕಟೇಶ್, ಕುವೆಂಪು ವಿವಿ ಇತಿಹಾಸ ಪ್ರಾಧ್ಯಾಪಕ ಪ್ರೊ. ರಾಜಾರಾಮ್ ಹೆಗಡೆ ಇದ್ದರು.
ವಿಜ್ಞಾನ ಬರವಣಿಗೆ ತರಬೇತಿ
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರಿಗೆ ಮಾ. 6ರಿಂದ 10ರವರೆಗೆ ಗುಲ್ಬರ್ಗ ಜಿಲ್ಲೆ ಮರತೂರಿನ ವಿಜ್ಞಾನೇಶ್ವರ ಭವನದಲ್ಲಿ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಈ ಶಿಬಿರದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರೂ ಭಾಗವಹಿಸಬಹುದು. ಶಿಬಿರದಲ್ಲಿ ನುರಿತ ವಿಜ್ಞಾನ ಬರಹಗಾರರು, ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತು ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ, ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ಫೆ. 20ರೊಳಗಾಗಿ ಡಾ. ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24,2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು -560070
ಅಥವಾ ್ಞ್ಠಢಠ.್ಝಟಿಜ್ಟಿಅ್ಜಟಛ್ಝಟ.್ಛ್ಟಟ ವಿಳಾಸಕ್ಕೆ ಸಲ್ಲಿಸಬೇಕು. ಡಾ. ಸಂಗಮೇಶ್ ಎಸ್. ಹಿರೇಮಠ್, ಸಂಯೋಜಕರು, ಮೊ. 9448219830
ಕೂಡಲೇ ಸಾಗುವಳಿ ಪತ್ರ ವಿತರಿಸುವಂತೆ ಒತ್ತಾಯ
ಶಿವಮೊಗ್ಗ: 1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ, ದಾಖಲೆ ಇರುವ ಸಾಗುವಳಿದಾರರನ್ನು ತಕ್ಷಣ ಗುರುತಿಸಿ ಅವರಿಗೆ ಸಾಗುವಳಿ ಪತ್ರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ, ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಕಾರ್ಯಕರ್ತರು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.ಇಂತಹ ಸಾಗುವಳಿದಾರರಿಗೆ 3 ಎಕರೆ ಮಂಜೂರು ಮಾಡುವುದಕ್ಕೆ ಅವಕಾಶವಿದೆ. ಈಗಾಗಲೇ ಜಿಲ್ಲೆಯಲ್ಲಿ ಮೂರೂವರೆ ಸಾವಿರ ಅರಣ್ಯ ಒತ್ತುವರಿದಾರರನ್ನು ಗುರುತಿಸಲಾಗಿದ್ದು, ಇವರಿಗೆ ಇದುವರೆಗೆ ಜಮೀನು ಮಂಜೂರು ಮಾಡಿರುವುದಿಲ್ಲ. ಸಾವಿರಾರು ರೈತರು ಭೂ ಸ್ವಾದೀನ ಹೊಂದಿದ್ದು, ಪಹಣಿ, ಟಿಟಿ ಇದೆ. ಇವರನ್ನು ತಕ್ಷಣ ಗುರುತಿಸಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಮಂಗಳವಾರ ಅವರು ಸಚಿವರಿಗೆ ಮನವಿ ಸಲ್ಲಿಸಿ, ಅರಣ್ಯ ಒತ್ತುವರಿ ಮಾಡಿದವರಿಗೆ 10 ಎಕರೆ ಜಮೀನು ಮಂಜೂರು ಮಾಡಲು ಅವಕಾಶವಿದೆ. . ಆದರೆ ಜಿಲ್ಲೆಯ ಅನೇಕ ಭಾಗದಲ್ಲಿ ಜಮೀನು ಗುರುತಿಸಿದ್ದರೂ ಅವರಿಗೆ ಮಂಜೂರಾಗಿಲ್ಲ ಎಂದಿದ್ದಾರೆ.ಾಂಗ್ರೆಸ್ ಪ್ರಮುಖರಾದ ನಗರದ ಮಹದೇವಪ್ಪ, ತೀ.ನಾ. ಶ್ರೀನಿವಾಸ್, ಧರ್ಮರಾಜ್, ಶಿವಲಿಂಗಮೂರ್ತಿ ಇತರರು ಇದ್ದರು.
'ಸಾಹಿತ್ಯ ಅಭ್ಯಾಸದಿಂದ ಜ್ಞಾನಕಣಜ ವೃದ್ಧಿ'
ಶಿವಮೊಗ್ಗ: ಸತ್ಯ ಎಂಬುದು ಅಖಂಡವಾದುದು. ಸತ್ಯಕ್ಕೆ ಜ್ಞಾನದ ಶಾಖೆಗಳು ಸ್ಪರ್ಶಿಸುತ್ತವೆ ಎಂದು ಸಂಲನ್ಮೂಲ ವ್ಯಕ್ತಿ ಪ್ರೊ. ಎಸ್.ಚಂದ್ರಶೇಖರ್ ಹೇಳಿದರು. ನಗರದ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಗುರುವಾರ ಇತಿಹಾಸ ಮತ್ತು ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಅವರು-ಸಾಹಿತ್ಯ ಮತ್ತು ಚರಿತ್ರೆ' ವಿಷಯವಾಗಿ ಉಪನ್ಯಾಸ ನೀಡಿದರು. ಸಾಹಿತ್ಯ ಕೃತಿಗಳು ಕಣಜವಿದ್ದಂತೆ. ಇವುಗಳನ್ನು ಬಗೆದಷ್ಟೂ ಜ್ಞಾನ ಲಭ್ಯವಾಗುತ್ತದೆ. ಇವುಗಳನ್ನು ಸಮಕಾಲೀನವಾಗಿ ಅಭ್ಯಾಸ ಮಾಡಿದರೆ ನಮ್ಮ ಜ್ಞಾನದ ಕಣಜ ವೃದ್ಧಿಯಾಗುತ್ತದೆ ಎಂದರು. ಚರಿತ್ರೆಯಲ್ಲಿ ಭಿನ್ನವಾದ ಸೃಜನಶೀಲತೆಯಿದೆ. ಇದನ್ನು ಪ್ರತಿಯೊಬ್ಬ ಚರಿತ್ರೆ ವಿದ್ಯಾರ್ಥಿಯೂ ಗಮನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ್, ಕೆ.ಜಿ.ವೆಂಕಟೇಶ್, ಕುವೆಂಪು ವಿವಿ ಇತಿಹಾಸ ಪ್ರಾಧ್ಯಾಪಕ ಪ್ರೊ. ರಾಜಾರಾಮ್ ಹೆಗಡೆ ಇದ್ದರು.
ಎನ್. ಗಿರಿಯಪ್ಪಗೆ ಶ್ರದ್ಧಾಂಜಲಿ
ಭದ್ರಾವತಿ: ಬುಧವಾರ ನಿಧನರಾದ ದಸಂಸ ಸಂಸ್ಥಾಪಕ ಅಧ್ಯಕ್ಷ ಗಿರಿಯಪ್ಪ ಅವರಿಗೆ ಕ.ದ.ಸಂ.ಸ ಭದ್ರಾವತಿ ಘಟಕವು ಪಟ್ಟಣದ ಜೈಭೀಮ ನಗರದಲ್ಲಿರುವು ಕೇಂದ್ರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಮಾತನಾಡಿದ ಕ.ದ.ಸಂ.ಸ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಅವರು, 1974-75ರಲ್ಲಿ ಪ್ರೊ. ಕೃಷ್ಣಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ದಲಿತ ಕಾರ್ಮಿಕರಲ್ಲಿ ಮತ್ತು ತಾಲೂಕಿನಲ್ಲಿ ದಲಿತರಲ್ಲಿ ಹೋರಾಟದ ಜಾಗೃತಿ ಮೂಡಿಸುವುದರೊಂದಿಗೆ ಕ.ದ.ಸಂ.ಸ ಸ್ಥಾಪನೆ ಮಾಡುವುದರಲ್ಲಿ ಗಿರಿಯಪ್ಪ ಪ್ರಮುಖ ಪಾತ್ರ ವಹಿಸಿದ್ದರೆಂದು ತಿಳಿಸಿದರು. ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾದ ಗಿರಿಯಪ್ಪ ಜಿಲ್ಲೆಯಾದ್ಯಂತ ದಲಿತರ ಮೇಲಾಗುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ ಮತ್ತು ಅತ್ಯಾಚಾರ ಪ್ರಕರಣಗಳ ವಿರುದ್ಧ ಹೋರಾಟ ರೂಪಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗಿಂತಲೂ ಮಿಗಿಲಾದ ಸಂಘಟನೆಯನ್ನು ಅವರು ಕಟ್ಟಿದ್ದರು. ಬುಧವಾರ ಅವರು ವಿಧಿವಶರಾಗಿರುವುದು ದಲಿತ ಸಮುದಾಯಕ್ಕೆ ದುಃಖಕರ ಸಂಗತಿ ಎಂದು ಸತ್ಯ ಭದ್ರಾವತಿ ನುಡಿದರು. ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿದರು. ಜಿಲ್ಲಾ ಖಜಾಂಚಿ ನರಸಿಂಹಶೆಟ್ಟಿ, ಜಿಲ್ಲಾ ಸಂಘಟನಾ ಸಂಚಾಲಕ ಎಂ. ಪಳನಿರಾಜ್, ಈಶ್ವರಪ್ಪ, ಕೆ. ಸುರೇಶ್, ಅಬ್ದುಲ್ ಖಲೀಲ್ ಇತರರು ಇದ್ದರು.
ಕ್ರೀಡಾಭಾರತಿಗೆ ವಿಧ್ಯುಕ್ತ ಚಾಲನೆ
ಶಿವಮೊಗ್ಗ: ಕ್ರೀಡಾಭಾರತಿ ರಾಷ್ಟ್ರೀಯ ಸಂಸ್ಥೆಯ ಶಿವಮೊಗ್ಗ ಘಟಕಕ್ಕೆ ಇತ್ತಿಚೇಗೆ ವಿಧ್ಯುಕ್ತ ಚಾಲನೆ ದೊರೆಯಿತು. ಇಲ್ಲಿನ ಕೋಟೆ ರಸ್ತೆ ವಾಸವಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎನ್.ಎಲ್. ನಾಯಕ್ ಕ್ರೀಡಾಭಾರತಿ ಘಟಕ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 6ರಿಂದ ಯೋಗ ಶಿಕ್ಷಣ ಸಮಿತಿ, ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಸೂರ್ಯನಮಸ್ಕಾರ ಯಜ್ಞ ನಡೆಯಿತು. ನೂರಾರು ಮಂದಿ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಘಟಕದ ಅಧ್ಯಕ್ಷ ಸಿ.ಎಂ.ನಾಗರಾಜ್, ರಾಘವೇಂದ್ರ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು. ಕ್ರೀಡಾ ಭಾರತಿಯು ಪ್ರತಿ ವರ್ಷ ರಥಸಪ್ತಮಿಯಂದು ಸೂರ್ಯ ನಮಸ್ಕಾರ ದಿನ, ಹನುಮಜ್ಜಯಂತಿಯಂದು ಕ್ರೀಡಾಭಾರತಿ ದಿನ, ಧ್ಯಾನ್ ಚಂದ್ ಅವರ ಜನ್ಮ ದಿನ ಆ.27ರಂದು ರಾಷ್ಟ್ರೀಯ ಕ್ರೀಡಾದಿನ, ಕ್ರೀಡೆಗಳ ಬಗ್ಗೆ ಚರ್ಚೆ, ಕ್ರೀಡಾಪಟುಗಳ ಪೋಷಕರಿಗೆ ವೀರಮಾತೆ ಜೀಜಾಬಾಯಿ ಪುರಸ್ಕಾರ ಪ್ರದಾನ ಇತ್ಯಾದಿ ಚಟುವಟಿಕೆಯನ್ನು ನಡೆಸಲಾಗುತ್ತದೆ.
ಲಯನ್ಸ್ನಿಂದ ಇಸಿಜಿ ಯಂತ್ರ ವಿತರಣೆ
ಕಟ್ಟೆಹಕ್ಲು: ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಬೆಂಗಳೂರು ಲಯನ್ಸ್ ಸೇವಾ ಸಂಸ್ಥೆ ಕಾರ್ಯಕರ್ತೆ ಡಾ. ಸರೋಜ ನಾಯ್ಡು ಅವರು ಕೊಡಮಾಡಿದ ಮೂರು ಲಕ್ಷ ಮೌಲ್ಯದ ಇಸಿಜಿ ಯಂತ್ರದ ವಿತರಣಾ ಕಾರ್ಯಕ್ರಮ ನೆರವೇರಿತು. ಸರೋಜಾ ನಾಯ್ಡು ಅವರು ಈಗಾಗಲೇ 50 ಇಸಿಜಿ ಯಂತ್ರವನ್ನು ವಿವಿಧ ಊರುಗಳಲ್ಲಿ ವಿತರಿಸಿದ್ದು, ಇದು 51ನೇ ಯಂತ್ರವಾಗಿದೆ. ಹಾಗೆಯೇ ಅವರು 6 ಆಂಬ್ಯುಲೆನ್ಸ್ಗಳನ್ನೂ ಸಹ ಸಾರ್ವಜನಿಕ ಸೇವೆಗೆ ಕೊಡಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸರೋಜಾ ನಾಯ್ಡು ಅವರು, ಉಳ್ಳವರು ತಮ್ಮ ಗಳಿಕೆಯಲ್ಲಿ ಶೇ.1ರಷ್ಟನ್ನಾದರೂ ಬಡವರಿಗೆ ದಾನಮಾಡಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ತಾಪಂ ಸದಸ್ಯ ಕಟ್ಟೆಹಕ್ಲು ಕಿರಣ್ ಮಾತನಾಡಿ, ಹಣ ಇದ್ದವರು ಸರೋಜ ನಾಯ್ಡು ಅವರ ರೀತಿ ಯೋಚನೆ ಮಾಡಿದ್ದೇ ಆದರೆ, ಸಮಾಜದಲ್ಲಿ ಯಾವುದೇ ಕೊರತೆ ಇರುತ್ತಿರಲಿಲ್ಲ ಎಂದರು. ಕಟ್ಟೆಹಕ್ಲು ಆರೋಗ್ಯ ಕೇಂದ್ರ ವೈದ್ಯರಾದ ಡಾ. ಅರವಿಂದ ಅವರ ಸರಳ, ಸಜ್ಜನಿಕೆ ಮತ್ತು ಈ ಕೇಂದ್ರ ಶುಶ್ರೂಶಕರ ಸೇವೆ ಗಮನಾರ್ಹ. ಇಲ್ಲಿ ಉತ್ತಮ ಸೇವೆ ದೊರೆಯುತ್ತಿದೆ ಎಂದು ಶ್ಲಾಘಿಸಿದರು.
ಸಾಂಭಾಜೀ ಪಾಟೀಲ್ ಗಡೀಪಾರು ಮಾಡಿ
ಶಿವಮೊಗ್ಗ: ಕನ್ನಡಿಗರ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಎಂಇಎಸ್ ಶಾಸಕ ಸಾಂಭಾಜೀ ಪಾಟೀಲ್ ಅವರ ವಿನಧಾನಸಭೆ ಸದಸ್ಯತ್ವವನ್ನು ರದ್ದುಪಡಿಸಿ, ಗಡಿಪಾರು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ. ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು. ಹಾಗೆಯೇ ಸಾಂಭಾಜೀ ಪಾಟೀಲ್ ಅವರ ಪ್ರತಿಕೃತಿಯನ್ನು ಗೋಪಿ ವೃತ್ತದಲ್ಲಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆ, ಸಾಂಭಾಜೀ ಪಾಟೀಲ್ ಪದೇ ಪದೇ ಎಂ. ರವಿಪ್ರಸಾದ್, ಎಂ.ಆರ್. ವೆಂಕಟೇಶ ಹೆಗ್ಡೆ, ಧನಂಜಯಕುಮಾರ್, ನೂತನ್ ಕುಮಾರ್, ರಾಜೇಂದ್ರ ಕುಮಾರ್, ಕೃಷ್ಣ, ಮೋಹನ್ ಕುಮಾರ್, ಮಧು ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ಹಿರೇಮಠ್ ಮೊಕದ್ದಮೆಗೆ 10ರಂದು ಪ್ರಮಾಣಪತ್ರ: ರೈ
ಶಿವಮೊಗ್ಗ: ಎಸ್.ಆರ್. ಹಿರೇಮಠ್ ಅವರು ಹೈಕೋರ್ಟ್ಗೆ ಸಲ್ಲಿಸಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಮಾರ್ಚ್ 10ರಂದು ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸುತ್ತಾ, ರಾಜ್ಯದಲ್ಲಿ 2.05 ಲಕ್ಷ ಎಕರೆ ಅರಣ್ಯ ಒತ್ತುವರಿ ಆಗಿದೆ. ಈ ಒತ್ತುವರಿ ತೆರವಿಗೆ ಮಾಸ್ಟರ್ ಪ್ಲಾನ್ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು. ಅರಣ್ಯ ಹಾಗೂ ಕಂದಾಯ ಇಲಾಖೆಗಳು ಗಡಿ ಗುರುತಿಸುವಿಕೆಗೆ ಜಂಟಿ ಸಮೀಕ್ಷೆ ನಡೆಸಲು ಮುಂದಾಗಿವೆ. ಈ ಕಾರ್ಯ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದ ಸಚಿವರು, ಸಿ ಮತ್ತು ಡಿ ಭೂಮಿ, ಬಗರ್ ಹುಕುಂ ಹಾಗೂ ಒತ್ತುವರಿ ಸಮಸ್ಯೆ ಪರಿಶೀಲನೆಗೆ ಸರ್ಕಾರವು ಈಗಾಗಲೇ ಸಂಪುಟ ಉಪ ಸಮಿತಿ ರಚಿಸಿದೆ ಎಂದು ತಿಳಿಸಿದರು.
ಶಿಕ್ಷಕಿ ಸಾವಿತ್ರಿ ಹೆಗಡೆಗೆ ಸನ್ಮಾನ
ಸಾಗರ: ತಾಲೂಕಿನ ಗಡಿಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 19 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆಸಲ್ಲಿಸಿ ಈಗ ವರ್ಗಾವಣೆಗೊಂಡಿರುವ ಸಾವಿತ್ರಿ ಹೆಗಡೆಯವರನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಶಿಕ್ಷಕಿಯನ್ನು ಗೌರವಿಸಿ ಇಷ್ಟು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಸಾವಿತ್ರಿ ಹೆಗಡೆ, ತಮಗೆ ಸಹಕಾರ ನೀಡಿದ ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಪೂರ್ವಾಗ್ರಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಕಲಿಸಲು ಮನಸ್ಸು ಮಾಡಬೇಕು ಎಂದು ಹೇಳಿದರು.
ಶ್ರೀ ಮಾರ್ಕಾಂಡೇಯ ಅವಧಾನಿಗಳಿಗೆ ಅಭಿನಂದನೆ
ಶಿವಮೊಗ್ಗ: ಕುಮಾರ ವ್ಯಾಸ ಪ್ರಶಸ್ತಿಗೆ ಭಾಜನರಾದ ಶ್ರೀ ಮಾರ್ಕಾಂಡೇಯ ಅವಧಾನಿಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಶೃಂಗೇರಿ ಶಂಕರ ಮಠ ಸಾಗರ ಮತ್ತು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು ಮಂಗಳವಾರ ಸಂಜೆ ಅಭಿನಂದಿಸಿತು. ಶಿವಮೊಗ್ಗ ಸಮೀಪದ ಮತ್ತೂರಿನ ಶ್ರೀ ಮಾರ್ಖಂಡೇಯ ಅವಧಾನಿಗಳ ಸ್ವಗೃಹದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಚೊಚ್ಚಲ ಕುಮಾರ ವ್ಯಾಸ ಪ್ರಶಸ್ತಿಯನ್ನು ಪಡೆದಿದ್ದ ಎಚ್ ಆರ್. ಕೇಶವಮೂರ್ತಿಯವರನ್ನೂ ಅಭಿನಂದಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಎಲ್.ಟಿ ಹೆಗಡೆಯವರು ಅಧ್ಯಕ್ಷತೆ ವಹಿಸಿದ್ದರು. ವೇದವಿದರು ಗಮಕಿಗಳು, ವಿದ್ವಾಂಸರು, ಸಂಸ್ಕೃತ ತಜ್ಞರು ಹಾಗೂ ಮಾತೆಯರು ಸೇರಿದ್ದ ಸಭೆಯಲ್ಲಿ ಅನೇಕ ಮಹನೀಯರು ಅವಧಾನಿಗಳ ಸಾಧನೆಯನ್ನು ಕೊಂಡಾಡಿ, ಅವರಿಗೆ ಬಂದಿರುವ ಕುಮಾರ ವ್ಯಾಸ ಪ್ರಶಸ್ತಿಯು ಅತ್ಯಂತ ಯೋಗ್ಯವಾಗಿದೆ ಎಂದು ಅಭಿನಂದಿಸಿದರು. ಈ ಅಶ್ವಿನ್ಕುಮಾರ್, ಶ್ರೀಧರ ಭಟ್, ಆರ್. ಅಚ್ಯುತ ರಾವ್ ಇದ್ದರು. ಅಖಿಲ ರ್ಕಾಟಕ ಬ್ರಾಹ್ಮಣ ಮಹಾಸಭಾದ ಮಾ.ಸ. ನಂಜುಂಡ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧಾರಿಣಿ ಪ್ರಾರ್ಥಿಸಿದರು. ಜಿ.ಎಸ್. ಅನಂತ ಸ್ವಾಗತಿಸಿದರು. ಮುರಳೀಧರ್ ಹತ್ವಾರ್ ವಂದಿಸಿ, ಎಚ್.ಕೆ. ಕೇಶವಮೂರ್ತಿ ನಿರೂಪಿಸಿದರು.
ಕೈತೋಟ, ತಾರಸಿ ತೋಟ ಅನುಷ್ಠಾನ
ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮವನ್ನು ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮದಡಿ ತರಕಾರಿ, ಹಣ್ಣು ಉತ್ಪಾದನೆ ಬಗ್ಗೆ ನಗರವಾಸಿಗಳಿಗೆ ಮಾಹಿತಿ ನೀಡಿ ತರಕಾರಿ ಬೆಳೆಯಲು ಸೂಕ್ತ ತಾಂತ್ರಿಕ ಮಾರ್ಗದರ್ಶನ ನೀಡಿ ಇಲಾಖೆಯಿಂದಲೇ ಸಣ್ಣ ಪ್ರಮಾಣದಲ್ಲಿ ತರಕಾರಿ ಬೀಜಗಳು ಮತ್ತು ಬಯೋವುಕ್ಸ್ (ಪಾಟಿಂಗ್ ಮಿಕ್ಸರ್) ನೀಡಲಾಗುವುದು. ಮನೆಯ ಹತ್ತಿರ ಕೈತೋಟಗಳಲ್ಲಿ ಅಥವಾ ತಾರಸಿ ಮೇಲೆ ತರಕಾರಿ ಬೆಳೆಯಲಿಚ್ಛಿಸುವ ಅವಕಾಶವಿರುವ ಆಸಕ್ತ ನಗರವಾಸಿಗಳು ತಮ್ಮ ಹೆಸರನ್ನು ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ತಾಂತ್ರಿಕ ಸಹಾಯಕ ವೆಂಕಟೇಶ್ ಭದ್ರಾವತಿ, ಮೊ. 9900046094, ನಂದಿನಿ ಶಿವಮೊಗ್ಗ, ಮೊ. 9900046115 ಅಥವಾ ದಿನಕರ ಜಾಧವ್, ಮೊ. 7259032362 ಸಂಪರ್ಕಿಸಬಹುದು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಿಸಿ: ಮನವಿ
ಭದ್ರಾವತಿ: ದೇಶದ ಕಾಲೇಜು, ಶಾಲೆಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ವ್ಯಾಲೆಂಟೈನ್ ಡೇ ಆಚರಣೆ ಮಾಡುವುದನ್ನು ನಿಷೇಧಿಸಬೇಕು ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ನಫೀಸಾ ಬೇಗಂ ಅವರಿಗೆ ಮನವಿ ಸಲ್ಲಿಸಿದರು. ಫೆ.14ರಂದು ವ್ಯಾಲೆಂಟೈನ್ ದಿನಾಚರಣೆ ಆಚರಿಸುವಂತಹ ವಿಕೃತ ರೂಢಿಯು ಭಾರತದಲ್ಲಿ ಪ್ರಾರಂಭವಾಗಿದ್ದು ವಿದೇಶಿ ಕಂಪನಿಗಳು ತಮ್ಮ ಸ್ವಂತದ ಲಾಭ ಗಳಿಕೆಗಾಗಿ ಈ ಸಂದರ್ಭದಲ್ಲಿ ಉಡುಗೊರೆಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿವೆ. ಇದನ್ನು ತಡೆಗಟ್ಟಲು ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಜನಜಾಗೃತಿಯನ್ನು ಮೂಡಿಸಿ ಇಂತಹ ದಿನಗಳನ್ನು ಆಚರಿಸದಂತೆ ನಿಷೇಧಿಸಿ ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

