ಶಿವಮೊಗ್ಗ

'ಆಪರೇಷನ್ ಕಾಡಾನೆ' ಶೀಘ್ರ ಆರಂಭ

Published On :

ಶಿವಮೊಗ್ಗ: 'ಆಪರೇಷನ್ ಕಾಡಾನೆ' ಪ್ರಾರಂಭವಾಗಲಿದೆ!
ಹೌದು. ಮೈಸೂರು, ಹಾಸನ ಭಾಗದ ಜನರನ್ನು ಇನ್ನಿಲ್ಲದಂತೆ ಕಾಡಿದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಸದ್ಯವೇ ಆರಂಭವಾಗುತ್ತಿದೆ. ಇದೇ ಹೊತ್ತಿನಲ್ಲಿ ಬಂಧನಕ್ಕೊಳಗಾಗುವ ಆನೆಗಳನ್ನು ಪಳಗಿಸುವ ಉದ್ದೇಶದಿಂದ ರಾಜ್ಯದ ಮೂರು ಆನೆ ಬಿಡಾರಗಳಲ್ಲಿ ಪೂರ್ವ ತಯಾರಿ ಆರಂಭವಾಗಿದೆ. ಅಧಿಕಾರಿಗಳು ನೀಡುವ ಮಾಹಿತಿಯಂತೆ ಇನ್ನು 10 ದಿನಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 25 ಕಾಡಾನೆಗಳನ್ನು ಗುರುತಿಸಿ ಹಿಡಿಯಲು ಉದ್ದೇಶಿಸಲಾಗಿದೆ.
ಹಿಡಿದ ಆನೆಗಳನ್ನು ಮತ್ತೆ ಬೇರೆಡೆ ಸ್ಥಳಾಂತರಿಸುವ ಬದಲಾಗಿ ಅವುಗಳನ್ನು ಪಳಗಿಸಿ ಇಲಾಖೆ ಆನೆಗಳಾಗಿ ಪರಿವರ್ತಿಸಲೂ ತೀರ್ಮಾನಿಸಲಾಗಿದೆ. ಹೀಗೆ ಪಳಗಿಸುವ ಉದ್ದೇಶದಿಂದ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರ ಸೇರಿದಂತೆ ರಾಜ್ಯದ ಇತರೆ ಆನೆ ಬಿಡಾರಗಳಾದ ದುಬಾರೆ, ಮತ್ತಿಗೋಡಿನಲ್ಲಿ ಪೂರ್ವತಯಾರಿ ಆರಂಭವಾಗಿದೆ.
ಇನ್ನು 10 ದಿನಗಳಲ್ಲಿ ಎರಡು ಕಾಡಾನೆಗಳನ್ನು ಪಳಗಿಸುವ ಉದ್ದೇಶದಿಂದ ಸಕ್ರೈಬೈಲ್‌ಗೆ ತರಲಾಗುತ್ತಿದೆ. ಕೆಲವು ದಿನಗಳ ನಂತರ ಮತ್ತೆರಡು ಆನೆಗಳನ್ನು ತರಲಾಗುತ್ತದೆ. ಉಳಿದಂತೆ ದುಬಾರೆ ಮತ್ತು ಮತ್ತಿಗೋಡು ಆನೆ ಕ್ಯಾಂಪ್‌ಗಳಲ್ಲಿ ಪಳಗಿಸುವ ಕಾರ್ಯ ನಡೆಯಲಿದೆ.
ಆನೆ ಹಿಡಿಯುವ ಕಾರ್ಯ ಈಗ ಆರಂಭವಾಗಿ ಸುಮಾರು 60 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಸಂಘರ್ಷ ನಡೆಸುವ ಕಾಡಾನೆ ಗುರುತಿಸಿ ಅವುಗಳನ್ನು ಬಂಧಿಸಲಾಗುತ್ತದೆ. ಹಾಸನ, ಸಕಲೇಶಪುರ ಸೇರಿದಂತೆ ಮೈಸೂರು ಭಾಗದ ವಿವಿಧ ಕಡೆ ಮಾನವ-ಆನೆ ಸಂಘರ್ಷ ಹೆಚ್ಚಾಗಿದ್ದರಿಂದ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
ಕಾವಾಡಿ ಟೆಕ್ನಾಲಜಿ: ಆನೆಗಳನ್ನು ಪಳಗಿಸಲು ಸದ್ಯ ಇರುವುದು ಕಾವಾಡಿಗಳದ್ದೇ ಟೆಕ್ನಾಲಜಿ. ಒಂದೇ ಅಳತೆಯ ದೊಡ್ಡ ಗಾತ್ರದ ಮರಗಳಿಂದ ದೊಡ್ಡಿ ನಿರ್ಮಿಸಿ, ಅದರಲ್ಲಿ ಪುಂಡಾನೆಗಳನ್ನು ಕಟ್ಟಿ ಅವುಗಳ ಆಕ್ರೋಶ ತಗ್ಗಿಸಲಾಗುತ್ತದೆ. ಸದ್ಯ ಸಕ್ರೆಬೈಲ್‌ನಲ್ಲಿ ಕ್ರಾಲ್‌ಗಳನ್ನು (ಆನೆ ಪಳಗಿಸುವ ದೊಡ್ಡಿ) ನಿರ್ಮಿಸಲಾಗಿದೆ. ಎರಡು ಕ್ರಾಲ್ ಸಿದ್ಧಗೊಂಡಿದ್ದು, ಮತ್ತೆರಡು ನಿರ್ಮಾಣ ಹಂತದಲ್ಲಿವೆ. ಸುಮಾರು 6ರಿಂದ 8 ಅಡಿ ಆಳದ ಕುಳಿ ತೆಗೆದು ಅದರಲ್ಲಿ ನೀಲಗಿರಿ ಮರದ ದಿಮ್ಮಿಗಳನ್ನು ನಿಲ್ಲಿಸಲಾಗುತ್ತದೆ. ಅದರ ಆಧಾರದಲ್ಲಿ ಸುತ್ತಲೂ ನೀಲಗಿರಿ ಮರಗಳನ್ನು ನಿಲ್ಲಿಸಲಾಗಿದೆ. ನೆಲಕ್ಕೂ ಸಹ ಮರಗಳನ್ನೇ ಸಾಲಾಗಿ ಜೋಡಿಸಲಾಗಿದೆ. ಎಂತಹ ಒತ್ತಡವನ್ನೂ ತಡೆಯುವ ಶಕ್ತಿ ಈ ಕ್ರಾಲ್‌ಗಿದೆ ಎಂಬುದು ಇದನ್ನು ನಿರ್ಮಿಸಿದ ಹಿರಿಯ ಕಾವಾಡಿಗಳ ಮಾತು.
ಎಲ್ಲೂ ಸಿಮೆಂಟ್, ಕಬ್ಬಿಣ ಬಳಸದೇ ಮರದ ಸಹಾಯದಿಂದಲೇ ಕ್ರಾಲ್ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಇದು ಕಾವಾಡಿಗಳ ಟೆಕ್ನಾಲಜಿ ಎಂಬುದು ಅಧಿಕಾರಿಗಳ ವಿವರಣೆ. ಪ್ರತಿ ಕ್ರಾಲ್ ನಿರ್ಮಾಣಕ್ಕೆ 50 ಸಾವಿರ ವೆಚ್ಚ ಮಾಡಲಾಗಿದೆ.

ಪಳಗಿಸೋ ಕಲೆ
ಲಾರಿಗಳಲ್ಲಿ ಬರುವ ಆನೆಗಳನ್ನು ಬಿಡಾರದ ಎರಡು ಆನೆಗಳ ಸಹಕಾರದಿಂದ ಕ್ರಾಲ್ ಒಳಗೆ ತಳ್ಳಲಾಗುತ್ತದೆ. ಆರಂಭದ ಕೆಲವು ದಿನಗಳಲ್ಲಿ ಆನೆ ಸುಲಭವಾಗಿ ಓಡಾಡದಷ್ಟು ಬಿಗಿಯಾಗಿ ಕೂಡಿ ಹಾಕಲಾಗುತ್ತದೆ. ನಂತರ ಬಿಗಿಯನ್ನು ಸಡಿಲಗೊಳಿಸಲಾಗುತ್ತದೆ ಎಂದು ಹಿರಿಯ ಕಾವಡಿ ತಿಳಿಸಿದರು. ಆರಂಭದಲ್ಲಿ ನಿಧಾನವಾಗಿ ಒಗ್ಗಿಕೊಳ್ಳುವ ಕಾಡಾನೆಗಳು ಮಾವುತರು ತೋರಿಸುವ ಪ್ರೀತಿ ವಿಶ್ವಾಸ, ಆಹಾರ ನೀಡಿಕೆಯಿಂದ ಹತ್ತಿರವಾಗುತ್ತವೆ. ಸುಮಾರು 30ರಿಂದ 35 ದಿನಗಳ ತರುವಾಯ ಕಾಡಾನೆಗಳು ಸಾವಧಾನವಾಗುತ್ತಾ ಬರುತ್ತವೆ ಎಂದು ಡಿಎಫ್‌ಓ ರವಿಕುಮಾರ್ ವಿವರಿಸುತ್ತಾರೆ. ಒಟ್ಟಾರೆ 60 ದಿನಗಳಲ್ಲಿ ಒಂದು ಹಂತಕ್ಕೆ ಬರುತ್ತವೆ. ಅಷ್ಟರಲ್ಲಿ ಪ್ರತಿ ದಿನ ಆನೆಗಳಿಗೆ ಇಷ್ಟವಾಗುವ ಕಬ್ಬು, ಅಕ್ಕಿ, ಬೆಲ್ಲ, ಮತ್ತಿತರ ಪದಾರ್ಥಗಳನ್ನು ನೀಡಿ ಮನವೊಲಿಸಿತ್ತಾರೆ. ಅಂತಿಮವಾಗಿ ಪಳಗಿದ ಆನೆಗಳು ಇಲಾಖೆಯ ಆನೆಗಳಾಗಿ ಪರಿವರ್ತನೆಯಾಗುತ್ತವೆ. ಸಕ್ರೆಬೈಲ್‌ನಲ್ಲಿ ಸಾಕಷ್ಟು ಆನೆ ಪಳಗಿಸಲಾಗಿದೆ. ಶಿವು, ತೀರ್ಥರಾಮ, ಸಾಗರ ಇತ್ತೀಚೆಗೆ ಪಳಗಿದ ಆನೆಗಳು. ಕಾಡಾನೆ ಪಳಗಿಸುವ ಕಾರ್ಯಾಚರಣೆ ಉದ್ದೇಶದಿಂದಲೇ ಎಂಟು ಹೊಸ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಳೇ ಕಾವಾಡಿಗಳನ್ನು ಹೊಸ ಆನೆಗಳನ್ನು ಪಳಗಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ದಿನಕ್ಕೆ ಸಾವಿರ ಲೀಟರ್
ಪ್ರತಿ ಆನೆಗೆ ದಿನವೊಂದಕ್ಕೆ ಒಂದು ಸಾವಿರ ಲೀಟರ್ ನೀರಿನ ಅಗತ್ಯವಿರುತ್ತದೆ. ಹೀಗಾಗಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಕ್ರೆಬೈಲು ಅಶ್ವಿನಿ ವನದಿಂದ ಪ್ರತ್ಯೇಕ ನೀರಿನ ಪೈಪ್ ಅನ್ನು ಕ್ರಾಲ್ ಬಳಿಗೆ ತರಲಾಗುತ್ತಿದೆ. ಅದರ ಮೂಲಕ ನಿತ್ಯ ನೀರಿನ ಸಂಗ್ರಹಣೆ ಮಾಡಿಕೊಂಡು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಬಂಧಿತ ಆನೆಗಳ ಹುಚ್ಚಾಟ ತಗ್ಗಿಸಲು ಮಲೆನಾಡಿನ ಮಡಿಲಿನಲ್ಲಿರುವ ಸಕ್ರೆಬೈಲಿನಲ್ಲಿ ಭರ್ಜರಿ ತಯಾರಿ ನಡೆದಿದೆ.

ತಯಾರಿ
10 ದಿನದ ಹಿಂದಷ್ಟೇ ಕ್ರಾಲ್ ಸಿದ್ಧಪಡಿಸಿಕೊಳ್ಳುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಅದರಂತೆ ಸಕ್ರೆಬೈಲು ಕಾವಾಡಿಗಳು ಭರದ ಸಿದ್ಧತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. ಕ್ರಾಲ್ ಸಿದ್ಧತೆಯಲ್ಲಿ ಕಾವಾಡಿಗಳ ಜತೆಗೆ ಬಿಡಾರದ ಆನೆಗಳಾದ ನ್ಯೂಟಸ್ಕರ್, ಸಾಗರ್, ಗಂಗೆ, ಗೀತಾ ಸಹಾಯ ಸಹಕಾರ ಮಾಡಿದ್ದನ್ನು ಅಧಿಕಾರಿಗಳು, ಸಿಬ್ಬಂದಿ ಸ್ಮರಿಸುತ್ತಾರೆ.

10 ದಿನಗಳಲ್ಲಿ ಎರಡು ಕಾಡಾನೆಗಳನ್ನು ಪಳಗಿಸುವ ಉದ್ದೇಶದಿಂದ ಸಕ್ರೆಬೈಲ್‌ಗೆ ತರಲಾಗುತ್ತಿದೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬಿಡಾರದ ಆನೆಗಳ ಸಹಕಾರದಿಂದ ಮಾವುತರು ಕ್ರಾಲ್‌ಗಳನ್ನು ನಿರ್ಮಿಸಿದ್ದಾರೆ.
-ರವಿಕುಮಾರ್, ಡಿಎಫ್‌ಓ (ವನ್ಯಜೀವಿ ವಿಭಾಗ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.