ವರ್ಷವಿಡೀ ಮೈದುಂಬಲಿರುವ ಜೋಗ
ಶಿವಮೊಗ್ಗ/ಜೋಗ್ಫಾಲ್ಸ್: ಜೋಗ ಸಮಗ್ರ ಅಭಿವೃದ್ಧಿಗೆ 600 ಕೋಟಿ ಕ್ರಿಯಾ ಯೋಜನೆಗೆ ಸೋಮವಾರ ನಡೆದ ಜೋಗ್ ನಿರ್ವಹಣಾ ಪ್ರಾಧಿಕಾರ ಅನುಮೋದಿಸಿದೆ.
ವಿಶ್ವವಿಖ್ಯಾತ ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ಕೇಂದ್ರವನ್ನಾಗಿಸಲು ಪ್ರಾಧಿಕಾರ ನಿರ್ಧರಿಸಿದ್ದು, ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಮಳೆಗಾಲ ಹೊರತಾಗಿ ಉಳಿದ ಎಲ್ಲಾ ದಿನಗಳಲ್ಲಿಯೂ ಜಲಪಾತಕ್ಕೆ ನೀರನ್ನು ಬಿಡುವಂತೆ ಕೆಪಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸೂಚಿಸಿದರು.
ಈಗ ಕೇವಲ ಮಳೆಗಾಲದಲ್ಲಿ ಮಾತ್ರ ಜಲಪಾತ ಮೈದುಂಬಿ ಹರಿಯುತ್ತಿದ್ದು, ಬೇಸಿಗೆಯಲ್ಲಿ ನೀರಿಲ್ಲದೆ ಸೊರಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ಬರುತ್ತಿರುವ ಪ್ರವಾಸಿಗರು ನಿರಾಸೆಗೊಳ್ಳುತ್ತಿದ್ದಾರೆ. ವಿದ್ಯುತ್ ಉತ್ಪಾದನೆಯು ಎಷ್ಟು ಮುಖ್ಯವೋ, ಪ್ರವಾಸಿಗರಿಗೆ ನೈಸರ್ಗಿಕ ಪ್ರಗತಿಯನ್ನು ಉಣಬಡಿಸುವುದು ಅಷ್ಟೇ ಮುಖ್ಯ. ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಶೇ.10ರಷ್ಟು ನೀರನ್ನು ಜಲಪಾತಕ್ಕೆ ಬಿಡಬೇಕೆಂಬ ನಿಯಮವಿದ್ದು, ಈ ಬಗ್ಗೆ ಕೆಪಿಸಿಗೆ ಮುಂದಿನ ಸಭೆಯೊಳಗಾಗಿ ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ಜೋಗ್ ಜಲಪಾತವನ್ನು ಮತ್ತಷ್ಟು ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಹಾಗೂ ವರ್ಷದ 12 ತಿಂಗಳೂ ಜೋಗ್ ಜಲಪಾತದಲ್ಲಿ ಸಮಾನ ಆಕರ್ಷಣೀಯವಾಗಿಸಲು ಸಮಗ್ರ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದರು.
ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಜೋಗ್ ಜಲಪಾತಕ್ಕೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಚರ್ಚಿಸಿದರು. ಇದೀಗ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಸುತ್ತಮುತ್ತ ಅಭಿವೃದ್ಧಿ: ಯೋಜನೆಯ ಪ್ರಮುಖ ಭಾಗವಾಗಿ ಜೋಗ್ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಈ ಭಾಗದ ಸುತ್ತಲಿನ ಸುಮಾರು 25 ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೋಗ್ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಈ ಪ್ರವಾಸಿ ತಾಣಗಳನ್ನು ತಂದು ಅಭಿವೃದ್ಧಿ ಪಡಿಸಲಾಗುವುದು. ಹಾಗೂ ಈ ಪ್ರದೇಶಗಳಿಗೆ ತೆರಳಲು ಇರುವ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು ಹಾಗೂ ಬಸ್ ನಿಲ್ದಾಣ, ಕಾರು ನಿಲ್ದಾಣ ಸೇರಿದಂತೆ ಇತರೆ ಕಾಮಗಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದಲೇ ವಾಹನ ಸೌಲಭ್ಯಗಳನ್ನು ಕಲ್ಪಿಸುವ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಬೆಂಗಳೂರಿನ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲರು ಈ ಸಮಗ್ರ ಯೋಜನೆಯನ್ನು ತಯಾರಿಸಿದ್ದು, ಈ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ ವಿದ್ಯುತ್ ನಿಗಮದಿಂದ ಸದ್ಯದಲ್ಲಿಯೇ ಟೆಂಡರ್ ಮತ್ತಿತರ ಯೋಜನಾ ಕಾಮಗಾರಿಗಳು ಆರಂಭವಾಗಲಿದೆ ಎಂದರು.
ಉದ್ಯಾನವನ: ಜೋಗ್ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಲಿಂಗನಮಕ್ಕಿ ಅಣೆಕಟ್ಟೆಯ ಹಿಂಭಾಗದ 60 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಉದ್ಯಾನ ನಿರ್ಮಿಸಲಾಗುವುದು. ಅಲ್ಲದೆ, ದೋಣಿ ವಿಹಾರ, ವನ್ಯಜೀವಿ ವೀಕ್ಷಣೆ, ವಿದ್ಯುತ್ ಉತ್ಪಾದನಾ ಘಟಕಗಳ ವೀಕ್ಷಣೆ, ಗೇರುಸೊಪ್ಪದ ವಿದ್ಯುತ್ ಘಟಕಕ್ಕೆ ನದಿಯಲ್ಲೇ ತೆರಳಲು ಜಲ ಸಾರಿಗೆ, ಮುಂತಾದ ಯೋಜನೆಗಳು ಅನುಷ್ಠಾನವಾಗಲಿವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರವಾಸಿಗರು ತಾಳುಗುಪ್ಪದಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ, ಪ್ರವಾಸೋದ್ಯಮ ಇಲಾಖೆಯ ವಾಹನಗಳ ಮೂಲಕ ಬಂದರೆ ಈ ಪ್ರದೇಶದ ಎಲ್ಲಾ ಪ್ರವಾಸಿ ತಾಣಗಳನ್ನು ವೀಕ್ಷಿಸಿ ತೆರಳಬಹುದಾದ ಸಮಗ್ರ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರದ ಅನುದಾನವನ್ನೂ ಬಳಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾದವ್, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಉಪ ವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ನಿಗಮದ ತಾಂತ್ರಿಕ ನಿರ್ದೇಶಕ ಪಿ. ಭಾಸ್ಕರ್, ಮುಖ್ಯ ಅಭಿಯಂತರ ಜಿ. ಹನುಮಂತಪ್ಪ, ರಾಜಮುಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

