ಇಂದಿನಿಂದ ಶ್ರೀ ಮಾರಿಕಾಂಬಾ ಜಾತ್ರೆ
ಕ.ಪ್ರ.ವಾರ್ತೆ, ಸಾಗರ, ಫೆ.17
ಇಲ್ಲಿನ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಫೆ.18 ಮಂಗಳವಾರದಿಂದ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯು ಈ ಬಾರಿ ಫೆ.26 ಬುಧವಾರದವರೆಗೆ ನಡೆಯಲಿದೆ. ಎಂಟು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಜಾತ್ರಾ ಮಹೋತ್ಸವಕ್ಕೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯು ಸಕಲ ಸಿದ್ಧತೆ ಮಾಡಿದೆ.
ಮಂಗಳವಾರ ಬೆಳಗಿನಜಾವ 5ಗಂಟೆಗೆ ಶ್ರೀ ಮಾರಿಕಾಂಬಾ ತವರುಮನೆಯಲ್ಲಿ ಶ್ರೀ ದೇವಿಯ ವಿಗ್ರಹ ಸ್ಥಾಪನೆಯೊಂದಿಗೆ ಜಾತ್ರೆಯ ವಿಧಿ-ವಿಧಾನಗಳು ಆರಂಭವಾಗಲಿದೆ. ಅಂದು ಇಡೀ ದಿನ ಸಾವಿರಾರು ಭಕ್ತರು ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ 9ಗಂಟೆಗೆ ಶ್ರೀ ದೇವಿಯನ್ನು ಮೆರವಣಿಗೆಯ ಮೂಲಕ ಗಂಡನಮನೆಗೆ ಕರೆದೊಯ್ಯಲಾಗುವುದು. ವಿವಿಧ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆಯು ರಾತ್ರಿಯಿಡೀ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಬುಧವಾರ ಬೆಳಗಿನ 6ಗಂಟೆಯ ಹೊತ್ತಿಗೆ ಗಂಡನಮನೆಯನ್ನು ಸೇರಲಿದೆ.
ಅಂಗಡಿ ಸಾಲು: ಜಾತ್ರೆಗಾಗಿ ಇಡೀ ಪಟ್ಟಣ ನವವಧುವಿನಂತೆ ಶೃಂಗಾರಗೊಂಡಿದೆ. ಪೇಟೆ ಪೊಲೀಸ್ ಠಾಣೆ ವೃತ್ತದಿಂದ ಚಾಮರಾಜಪೇಟೆಯವರೆಗೆ ನೂರಾರು ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿದೆ. ಗಾಂಧಿ ಮೈದಾನ ಹಾಗೂ ನೆಹರೂ ಮೈದಾನದಲ್ಲಿ ಮನೋರಂಜನೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗಾಗಿ ದೇವಿಯ ತವರುಮನೆ, ಗಂಡನಮನೆ ದೇವಾಲಯಗಳನ್ನು ಬಣ್ಣ, ವಿದ್ಯುತತ್ದೀಪಗಳಿಂದ ಅಲಂಕರಿಸಲಾಗಿದೆ. ಗಂಡನಮನೆ ಮುಂಭಾಗದಲ್ಲಿ ರಾಜರ ದರ್ಬಾರ್ ನೆನಪಿಸುವ ಹೊನ್ನ ಬಣ್ಣದ ಪೆಂಡಾಲ್ ಜನಾಕರ್ಷಣೆಯ ಕೇಂದ್ರವಾಗಿದೆ. ಜಾತ್ರೆಯ ಅಂಗವಾಗಿ ಫೆ.19ರಿಂದ 26ರವರೆಗೆ ಪ್ರತಿದಿನ ಸಂಜೆ 7ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಂಬಾರರಿಂದ ಉದ್ಘಾಟನೆ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಾತ್ರೆಯ ಪ್ರಯುಕ್ತ ಫೆ.22ರಿಂದ 24ರವರೆಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಪ್ರತಿ ಹಂತದಲ್ಲಿ ಪಾರದರ್ಶಕತೆ ಜಾತ್ರೆಯ ಅಂಗವಾಗಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಶ್ರೀ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಗೌರವಾಧ್ಯಕ್ಷ ಕಾಗೋಡು ಅಣ್ಣಪ್ಪ, ಜಾತ್ರೆಯ ಯಶಸ್ಸಿಗಾಗಿ ಸಮಿತಿಯು ಹಗಲಿರುಳು ಕೆಲಸ ಮಾಡುತ್ತಿದೆ. ಸ್ವಚ್ಛತೆ, ಕುಡಿಯುವ ನೀರು ಇತ್ಯಾದಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಸಮಿತಿಯೊಂದಿಗೆ ಕೈಜೋಡಿಸಿದ್ದು ಸ್ಥಳೀಯ ನಗರಸಭೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ನಾಗೇಂದ್ರ ಕುಮಟ, ರವಿನಾಯ್ಡು, ವಿವಿಧ ಉಪಸಮಿತಿಗಳ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

