ಎನ್ಪಿಎ ಹೊರೆ ಇಳಿಸಲು ಕೆನರಾ ಬ್ಯಾಂಕ್ ಹೊಸ ತಂತ್ರ
ಶಿವಮೊಗ್ಗ: ಅನುತ್ಪಾದಕ ಆಸ್ತಿ ಪರಿಣಾಮ ಸಾರ್ವಜನಿಕ ರಂಗದ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವ ಸನ್ನಿವೇಶ ಎದುರಾಗಿದೆ. ಇದು ಶುಕ್ರವಾರದ ಬೆಳವಣಿಗೆ. ಆದರೆ, ಎನ್ಪಿಎ ಹೊರೆ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಶಿವಮೊಗ್ಗ ವೃತ್ತ ದೇಶಕ್ಕೆ ಮಾದರಿಯಾಗಿದ್ದು, ಇಲ್ಲಿ ಕೈಗೊಂಡ ಕಾರ್ಯವನ್ನು ದೇಶವ್ಯಾಪಿ ವಿಸ್ತರಿಸಲು ಕೆನರಾ ಬ್ಯಾಂಕ್ ಮುಂದಾಗಿದೆ.
ಸಾಲ ವಸೂಲಾತಿ ಪೂರ್ಣ ಪ್ರಮಾಣದಲ್ಲಿ ವಸೂಲಾಗದ ಪರಿಣಾಮ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಿದ ಕಾರಣ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರೇ ತಮ್ಮ ಹುದ್ದೆಯಿಂದಲೇ ನಿರ್ಗಮಿಸಿದ್ದಾರೆ. ಅದೇ ರೀತಿ ಪ್ರತಿ ಬ್ಯಾಂಕ್ಗಳಲ್ಲೂ ಅನುತ್ಪಾದಕ ಆಸ್ತಿ ಎಂಬುದು ಬ್ಯಾಂಕ್ ಬೆಳವಣಿಗೆಗೆ ಕಂಟಕ. ಈ ಕಂಟಕವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ವೃತ್ತ ಕಚೇರಿ ದಾರಿ ಕಂಡುಕೊಂಡಿದ್ದು, ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಮೂಲಕ ಎಂದರೆ ತಪ್ಪಾಗಲಿಕ್ಕಿಲ್ಲ.
ಇದೇ ಮೊದಲು: ಸಾಮಾನ್ಯವಾಗಿ ಜನತಾ ನ್ಯಾಯಾಲಯಗಳು ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಈ ರೀತಿ ಜನತಾ ನ್ಯಾಯಾಲಯವನ್ನು ಜನರ ಬಳಿ ಮುಟ್ಟಿಸುವ ಉದ್ದೇಶದಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶರಶ್ಚಂದ್ರ ಬ ಅಂಗಡಿ ಮತ್ತು ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎಂ. ನಂಜುಂಡಸ್ವಾಮಿ ಹೊಸ ಚಿಂತನೆ ಹರಿಯಬಿಟ್ಟರು. ಇದರ ಪರಿಣಾಮ ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆನರಾ ಬ್ಯಾಂಕ್ನ ಬಾಕಿ ವ್ಯಾಜ್ಯ ಪರಿಹಾರ ಮಾಡುವ ಉದ್ದೇಶದಿಂದ ವಿಶೇಷ ಜನತಾ ನ್ಯಾಯಾಲಯವನ್ನು ಒಂದು ವಾರ ಕಾಲ ನಡೆಸಲಾಗುತ್ತಿದೆ. ಈ ರೀತಿ ನಡೆದಿರುವುದು ಇದೇ ಮೊದಲು ಎಂದು ನ್ಯಾಯಾಧೀಶರೇ ಅಭಿಪ್ರಾಯಪಡುತ್ತಾರೆ.
ಹೇಗಿದೆ ಚಟುವಟಿಕೆ?: 15 ದಿನದಿಂದ ಬ್ಯಾಂಕ್ ಹಿರಿಯ ಅಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರದವರು ಸೇರಿ ಸಭೆ ನಡೆಸಿ ಒಂದು ವೇದಿಕೆ ಸೃಷ್ಟಿಸಿದ್ದಾರೆ. ಸುಮಾರು 10- 12 ವರ್ಷಗಳ ಹಿಂದೆ ಸಾಲ ಮಾಡಿರುವ ಸುಮಾರು 11 ಸಾವಿರ ರೈತರು, ಉದ್ಯಮಿಗಳಿಗೆ ಕೋರ್ಟ್ ಮುದ್ರೆಯ ಸೀಲ್ ಇರುವ ನೋಟಿಸ್ ತಲುಪಿಸಲಾಗಿದೆ. ಅವರು ಈ ಅದಾಲತ್ನಲ್ಲಿ ಪಾಲ್ಗೊಂಡು ಹಲವು ರಿಯಾಯಿತಿ ಪಡೆದುಕೊಂಡು ಸಾಲ ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಿಯಾಯಿತಿ ನೀಡಿ ಸಾಲ ವಸೂಲಾತಿ: 54 ಶಾಖೆ ಹೊಂದಿರುವ ಕೆನರಾ ವೃತ್ತ ಕಚೇರಿ ಒಂದು ವರ್ಷದಲ್ಲಿ 1500 ಕೋಟಿ ವ್ಯವಹಾರ ನಡೆಸುತ್ತದೆ. ದಶಕದ ಹಿಂದೆ ನೀಡಿದ ಸಾಲದ ಬಾಬ್ತು ಸುಮಾರು 84 ಕೋಟಿ ಎನ್ಪಿಎ ಆಗಿದೆ. ಸರ್ಕಾರಗಳು ಸಾಲ ಮನ್ನಾ ಮಾಡುತ್ತವೆಂದು ಸಾಕಷ್ಟು ರೈತರು ಸಾಲ ಮರುಪಾವತಿ ಮಾಡಲಿಲ್ಲ.
ಕೆಲವರು ಆರ್ಥಿಕ ಕಾರಣದಿಂದ ಸಾಲ ಕಟ್ಟಲಾಗಲಿಲ್ಲ. ಈ ಮೊತ್ತ ಬ್ಯಾಂಕ್ಗೆ ಹೊರೆಯಲ್ಲದಿರಬಹುದು, ಆದರೆ ಅನುತ್ಪಾದಕತೆ ಸಣ್ಣದಿದ್ದುದು ದೊಡ್ಡದಾಗಿ ಬೆಳೆದರೆ ಬ್ಯಾಂಕ್ ಅಸ್ತಿತ್ವಕ್ಕೆ ಕುತ್ತುಬರಬಹುದು. ಹೀಗಾಗಿ ಆದ್ಯತೆ ಮೇಲೆ ರಿಯಾಯಿತಿ ನೀಡಿ ಸಾಲ ವಸೂಲಾತಿ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ನ್ಯಾಯಾಧೀಶರು, ವಕೀಲರು ಸಹಕಾರ ನೀಡುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿ ಪ್ರಬಂಧಕ ಎಂ.ಎಂ. ಚಿನಿವಾರ್ ತಿಳಿಸುತ್ತಾರೆ.
ಇಲ್ಲೇನು ನಡೆಯುತ್ತಿದೆ?: ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪಕ್ಕದ ನಿವೇಶನದಲ್ಲಿ ವಾರ ಕಾಲ ಜನತಾ ನ್ಯಾಯಾಲಯ ಸೃಷ್ಟಿಯಾಗಿದೆ. ಇಬ್ಬರು ನ್ಯಾಯಾಧೀಶರು ಸಮ್ಮುಖದಲ್ಲಿ, 10 ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಸುಸ್ತಿದಾರರು ಮತ್ತು ಬ್ಯಾಂಕ್ ನಡುವೆ ಮಧ್ಯಸ್ಥಿಕೆ ನಡೆಯುತ್ತಿದೆ.
ಅಚ್ಚರಿ ಎಂದರೆ ಕೋರ್ಟ್ ಮೊಹರಿನ ಅದಾಲತ್ ನೋಟಿಸ್ ಬಂಡೊಡನೆ ಸುಮಾರು 25 ಲಕ್ಷ ಸಾಲ ವಸೂಲಾತಿಯಾಗಿದ್ದು, ಬ್ಯಾಂಕ್ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಸುಸ್ತಿದಾರರಿಗೆ ಅನುಕೂಲ: ನೋಟಿಸ್ ಪಡೆದವರು ಅದಾಲತ್ನಲ್ಲಿ ಸಾಲ ಬಾಬ್ತು ಹಣ ಸ್ಥಳದಲ್ಲೇ ಕಟ್ಟಬೇಕೆಂದಿಲ್ಲ. ಹಾಗೆಯೇ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನ್ಯಾಯಾಧೀಶರ ಸಮ್ಮುಖದಲ್ಲಿ ತಮ್ಮ ಆರ್ಥಿಕ ಸಂಕಷ್ಟ ಹೇಳಿಕೊಳ್ಳಬಹುದು. ಈ ಮಧ್ಯೆ ಪ್ರತಿ ಸುಸ್ತಿದಾರರಿಗೂ ಬ್ಯಾಂಕ್ನ ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀಡಬಹುದಾದ ರಿಯಾಯಿತಿ ಪ್ರಕಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಧೀಶರು ಅಂತಿಮವಾಗಿ ಏನು ಆದೇಶ ಕೊಡುತ್ತಾರೋ, ಅದನ್ನು ಬ್ಯಾಂಕ್ನವರೂ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಸುಸ್ತಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜತೆಗೆ ಬಾಕಿ ಸಾಲವನ್ನು ಕಂತುಗಳಲ್ಲಿ ಕಟ್ಟುವ ಅವಕಾಶವೂ ಇಲ್ಲಿದೆ.
ಈ ವಿಶೇಷ ಅದಾಲತ್ ಫೆ. 22ರಿಂದ ಆರಂಭವಾಗಿದ್ದು, 28ರವರೆಗೂ ನಡೆಯುತ್ತಿದೆ. ಶಿವಮೊಗ್ಗ ವೃತ್ತದಲ್ಲಾದ ಈ ಬೆಳವಣಿಗೆಯ ಕಂಡು ಕೆನರಾ ಬ್ಯಾಂಕ್ ದೇಶಾದ್ಯಂತ ತನ್ನ ಎನ್ಪಿಎ ಹೊರೆ ಕಳೆದುಕೊಳ್ಳಲು ಇದೇ ಮಾರ್ಗದ ಮೊರೆ ಹೋಗಲು ನಿರ್ಧರಿಸಿದರೆ, ಎಸ್ಬಿಐ ಕೂಡ ಆಸಕ್ತಿ ತೋರಿಸಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

