ಸಮ್ಮೋಹನಗೊಳಿಸಿದ 'ಭಾವ ಭೃಂಗ'
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 23
ಭಾನುವಾರ ಇಳಿಹೊತ್ತಿನಲ್ಲಿ ಇಲ್ಲಿನ ಕುವೆಂಪು ರಂಗಮಂದಿರ ಭಾವ ಸಮ್ಮೋಹನಕ್ಕೊಳಗಾಗಿತ್ತು. ಒಂದೆಡೆ ನಾಡಿನ ಕವಿದ್ವಯರು ತಮ್ಮ ಪ್ರಸಿದ್ಧ ಕವಿತೆ ಹಿಂದಿನ ಗೂಡಾರ್ಥ, ಕವಿತೆ ಬರೆದ ಸಂದರ್ಭವನ್ನು ಪ್ರಸ್ತುತಪಡಿಸಿದರೆ, ಪ್ರಸಿದ್ಧ ಗಾಯಕ ರವಿಮರೂರು ತಮ್ಮ ಸುಮಧುರ ಕಂಠದಿಂದ ಕವಿತೆಗಳನ್ನು ಹಾಡಿ ಮೋಡಿ ಮಾಡಿದರು.
ನಿನಾದ ಸಂಸ್ಥೆ 2 ದಿನಗಳ ದಾಸ ಶೃಂಗ ಭಾವ ಭೃಂಗ ಕಾರ್ಯಕ್ರಮ ಆಯೋಜಿಸಿತ್ತು. ಇದರಡಿ ಅಪರೂಪದ ಕಾವ್ಯ ವಾಚನ, ಗಾಯನ ಕಾರ್ಯಕ್ರಮ ಭಾನುವಾರ ನಡೆಯಿತು.
ಮಾಧುರ್ಯಕ್ಕೆ ಸೋಲುವ ಮನ: ಆರಂಭದಲ್ಲಿ ಕಾರ್ಯಕ್ರಮದ ಪೀಠಿಕೆ ಹಾಕಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು, ಭಾವಗೀತ ಗಾಯನ ಕಾರ್ಯಕ್ರಮದಲ್ಲಿ ಗಾಯನದ ಮಾಧುರ್ಯಕ್ಕೆ ಮನ ಸೋಲುತ್ತೇವೆಯೇ, ಕವಿತೆಯ ಅಂತರಾರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತೇವೆ.
ಭಾವಗೀತೆ ಕೇಳುವಾಗ ಸಂಗೀತ ಪ್ರಧಾನವಾಗುತ್ತದೆ, ಸಾಹಿತ್ಯ ಹಿಂದೆ ನಿಲ್ಲುತ್ತೆ ಎಂಬ ಮಾತಿದೆ. ಹೀಗಾಗಿ ಭಾವಗೀತೆಯ ಹಿನ್ನೆಲೆಯನ್ನು ಒಂದೆರಡು ಮಾತಲ್ಲಿ ಅರ್ಥೈಸಿಕೊಂಡು ಭಾವಗೀತೆ ಕೇಳಿದರೆ ಪರಿಣಾಮ ಅದ್ಭುತವಾಗಿರುತ್ತದೆ. ಪರಿಣಾಮ, ಸಂಗೀತ- ಸಾಹಿತ್ಯ ಸಮ್ಮಿಲನಗೊಂಡು ಸಮ್ಮೋಹನಗೊಳ್ಳುವ ಸಾಧ್ಯವಿದೆ ಎಂದು ವಿವರಿಸಿದರು.
ಕಲಾವಿದರ ಕೆಲಸ: ಶಬ್ದ ಸಮಾಜದಲ್ಲಿದೆ. ಶಬ್ದದ ಹಿಂದಿರುವ ನಿನಾದ ಹುಡುಕುವುದು ಕಲಾವಿದರ ಕೆಲಸ. ಮಾತಿನ ಹಿಂದಿರುವ ಧ್ವನಿ ಹುಡುಕುವುದು ಕವಿಗಳ ಕೆಲಸ, ನೋಟದ ಹಿಂದಿನ ಒಳನೋಟ ಹುಡುಕುವುದು ಕಲಾವಿದನ ಕೆಲಸ. ಆ ಶಬ್ದ, ಆ ನೋಟ, ಮಾತಿನ ಒಳಗಿರುವ ನಿಗೂಢವಾದ ಅರ್ಥಪೂರ್ಣ ಒಳ ಧ್ವನಿ ಹುಡುಕುವ ಕೆಲಸ ಮಾಡುತ್ತೇವೆ, ಇದಕ್ಕೆ ಸಾಹಿತ್ಯ- ಸಂಗೀತ ಮುಖ್ಯವಾಗುತ್ತದೆ ಎಂದು ಹೇಳಿದರು.
ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್ ಅವರು ತಮ್ಮ ಕವನದ ಹಿಂದಿನ ಗೂಡಾರ್ಥ ಮತ್ತು ಬರೆದ ಸಂದರ್ಭವನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟರೆ, ರವಿ ಮರೂರು ಅವರ ದನಿಯಲ್ಲಿ ಹಾಡಿ ವೀಕ್ಷಕರನ್ನು ಮರಳು ಮಾಡಿದರು.
ಒಂದು ಹಾಡಿಗೆ ರಂಗಮಂದಿರದಲ್ಲಿದ್ದವರು ಖುಷಿಪಟ್ಟರೆ, ಮತ್ತೊಂದು ಹಾಡಿಗೆ ಸಂಭ್ರಮಿಸಿದರು ಆದರೆ, ಹೇಳಿಹೋಗು ಕಾರಣ... ಹಾಡು ಹಾಡುತ್ತಿದ್ದಂತೆ ಇಡೀ ರಂಗಮಂದಿರ ಭಾವಪರವಶವಾಯಿತು. ರವಿಮರೂರು ಕೂಡ ಒಂದ ಕ್ಷಣ ಭಾವೋದ್ವೇಗಕ್ಕೊಳಗಾಗಿ ಸಿ.ಅಶ್ವತ್ ಅವರನ್ನು ನೆನಪಿಸೊಕಂಡು ಬಿಕ್ಕಿದರು.
ನಂತರ ವೀಕ್ಷಕರ ಮನಸ್ಸು ಹುಚ್ಚೆದ್ದು ಕುಣಿವಂತೆ ಮಾಡಿದ್ದು ಜಾಲಿ ಬಾರಿನಲ್ಲಿ ಪೋಲಿ ಗೆಳೆಯರು... ಹಾಡು. ತಮ್ಮ ಚಾಕಚಕ್ಯತೆ ಪ್ರದರ್ಶಿಸಿ ರವಿಮರೂರು, ವಿಷಾದದಲ್ಲಿದ್ದ ರಂಗಮಂದಿರದ ವಾತಾವರಣವನ್ನೇ ಬದಲಿಸಿದರು.
ವೈದ್ಯ, ತುಷಾರ ಗೌರಿಗೆ ಸನ್ಮಾನ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿಯಾಗಿ ಭಾಗವಹಿಸಿ ಜಿಲ್ಲೆಗೆ ಗರಿ ತಂದುಕೊಂಡ ರಂಗಕರ್ಮಿ ಹಾಗೂ ಪತ್ರಕರ್ತ ವೈದ್ಯ ಮತ್ತು ನೂರಕ್ಕೂ ಹೆಚ್ಚು ಕಥಾಕೀರ್ತನ ಕಾರ್ಯಕ್ರಮ ನೀಡಿದ ಬಾಲ ಕಲಾವಿದೆ ತುಷಾರ ಗೌರಿಯವರನ್ನು ನಿನಾದ ಪ್ರತಿಷ್ಠಾನ ಗೌರವಿಸಿತು. ಕಾರ್ಯಕ್ರಮದಲ್ಲಿ ನಿನಾದ ಪ್ರತಿಷ್ಠಾನದ ಅಧ್ಯಕ್ಷ ಮಧುಸೂಧನ್, ಪ್ರಸನ್ನ, ಉದ್ಯಮಿ ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

