ಶ್ರಮದ ದುಡಿಮೆಗೆ ಬೆನ್ನು ತೋರಿಸುತ್ತಿರುವ ಯುವಜನ
ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಫೆ. 24 ಬಸವಾನಿ- ದೇವಂಗಿ ಪ್ರಫುಲ್ಲಚಂದ್ರ ವೇದಿಕೆ: ಇಂದು ರೈತರು ತಮ್ಮ ಕೃಷಿ ಬದುಕಿಗೆ ವಿದಾಯ ಹೇಳುವ ಸ್ಥಿತಿ ಬಂದಿದ್ದು, ಶ್ರಮದ ದುಡಿಮೆಗೆ ಬೆನ್ನು ತೋರಿಸಿದ ಗ್ರಾಮೀಣ ಜನತೆ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಹೀಗಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಿನ ಬಸವಾನಿಯಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ತಾಲೂಕು ಮಟ್ಟದ ಕೃಷಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಧ.ಗ್ರಾ.ಯೋ. ಸಂಸ್ಥೆ ತೀರ್ಥಹಳ್ಳಿ ತಾಲೂಕಿಗೆ ಪದಾರ್ಪಣೆ ಮಾಡಿ ಅತ್ಯಲ್ಪ ಅವಧಿಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು, ಕೃಷಿ ಬಗ್ಗೆ ಅರಿವು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇಂದಿನ ಕೃಷಿ ಕೆಲಸಗಳಲ್ಲಿ ತಿಳಿವಳಿಕೆ ಹೆಚ್ಚಿಸಿ ರೈತರನ್ನು ಕೃಷಿಯತ್ತ ಬದಲಾಯಿಸುವ ಮಾನಸಿಕ ಶಕ್ತಿ ನಿರ್ಮಿಸುತ್ತಿದೆ ಎಂದು ಹೇಳಿದರು.
ನಗರದತ್ತ ಆಕರ್ಷಣೆ: ವಲಸೆ ಸಮಸ್ಯೆಯಿಂದ ರೈತರ ಮಕ್ಕಳೆಲ್ಲ ನಗರಗಳತ್ತ ಆಕರ್ಷಿತರಾಗುತ್ತಿದ್ದು, ಹಳ್ಳಿಗಳಲ್ಲಿ ವಯಸ್ಸಾದವರೇ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾದರೆ ಮುಂದೆ ಅನ್ನ ಕೊಡುವವರು ಯಾರು ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾವಂತರು ಕೃಷಿ ಕೆಲಸಕ್ಕೆ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಪುಷ್ಟಪೋದ್ಯಮದತ್ತ ರೈತರು ಒಲವು ತೋರಿಸುತ್ತಿದ್ದಾರೆ. ಆದರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಂದಾಗಿ ಹಳ್ಳಿಗಳಲ್ಲಿ ಸದ್ದಿಲ್ಲದೇ ಕ್ರಾಂತಿಯಾಗುತ್ತಿದೆ. ಕೃಷಿ ಒಂದು ಸಂಸ್ಕೃತಿ. ಪರಂಪರಾಗತ ಕೃಷಿ ಬದುಕಿನ ಕೃಷಿಯೂ ಹೌದು. ವಿದ್ಯಾವಂತರು ಮರಳಿ ಕೃಷಿಗೆ ಬರಬೇಕು ಎಂದು ಹೇಳಿದರು.
ಪ್ರಗತಿ ಸಾಧ್ಯ: ವಸ್ತು ಪ್ರದರ್ಶನ ಉದ್ಘಾಟಿಸಿ, ಕೃಷಿ ಉತ್ಸವದ ಆಶಯ ಭಾಷಣ ಮಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ಎಲ್. ಮಂಜುನಾಥ್ ಗುರಿ ಹಾಕಿಕೊಳ್ಳುವ ಕಾರ್ಯಕ್ರಮಗಳಿಂದ ಸ್ಪಷ್ಟ ಕಲ್ಪನೆ ಮೂಡಿ, ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಸಮೃದ್ಧ ಬದುಕಿದೆ. ರೈತರ ಮಕ್ಕಳು ಹಳ್ಳಿಗಳಲ್ಲಿ ಉಳಿಯುವ ಹಾಗೆ ಮಾಡಬೇಕು. ಅಗತ್ಯವಿರುವ ಕೌಶಲ್ಯಗಳನ್ನು ಒದಗಿಸಿಕೊಡಬೇಕು. ಈ ಮಣ್ಣಿನಿಂದ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದರು. ಕೃಷಿ ಬೆಲೆ ಆಯೋಗ ರಚಿಸಿ, ಜಾರಿಗೆ ತರಬೇಕು ಎಂದರು.
ಅವರು ಪ್ರಾದೇಶಿಕವಾಗಿ ಪ್ರತ್ಯೇಕಗೊಳಿಸಿ ರೈತ ಬೆಳೆದ ಬೆಳೆಗಳಿಗೆ ಬೆಲೆ ಕೊಡಬೇಕು ಎಂದು ಹೇಳಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಕೃಷಿ ಕೆಲಸಗಳಿಗೆ ಕೊಡುವಂತೆ ಆಗಬೇಕು ಎಂದ ಅವರು, ಕೃಷಿಗೆ ನಿರಾಶೆ ಆಗುತ್ತಿಲ್ಲ. ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.
ಯೋಜನಾಧಿಕಾರಿ ಚಂದ್ರಶೇಖರಶೆಟ್ಟಿ ಸ್ವಾಗತಿಸಿದರು. ಕೃಷಿ ಉತ್ಸವದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೂಳೂರು ಸತ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ರೇಣುಕಾ ನಾಗರಾಜ್, ಸುಧೀರ್ ಕುಮಾರ್ ಬಂಟ್ವಾಳ್, ಬಸವಾನಿ ಗ್ರಾಪಂ ಅಧ್ಯಕ್ಷೆ ಶಾರದಾ ಗೋಪಾಲ್, ಜೆಡಿಎಸ್ ಮುಖಂಡ ಆರ್. ಮದನ್, ಭುಜಂಗಶೆಟ್ಟಿ, ಕೆಸ್ತೂರು ಮಂಜುನಾಥ್, ತುಂಬ್ರಮನೆ ಚಂದ್ರಶೇಖರ್, ಡಾ. ಮಂಜುನಾಥ್ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

