ಶಿವಮೊಗ್ಗ

ಕಾಂಗ್ರೆಸ್ ಇಬ್ಬಂದಿತನ ಬಹಿರಂಗ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.1
ಭ್ರಷ್ಟಾಚಾರದ ವಿರುದ್ಧ ರಾಹುಲ್ ಗಾಂಧಿಯವರು ಮಾತನಾಡುತ್ತಿದ್ದಾರೆ, ಇತ್ತ ರಾಜ್ಯದಲ್ಲಿ ಕಳಂಕಿತರನ್ನು ಸಚಿವ ಸಂಪುಟದೊಳಗೆ ಸೇರಿಸಿಕೊಳ್ಳುತ್ತಿರುವುದು ಹೊಸ ವರ್ಷಕ್ಕೆ ಕಾಂಗ್ರೆಸ್‌ನ ದುರದೃಷ್ಟಕರ ಕಾಣಿಕೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಅಕ್ರಮ ಕುರಿತು ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಸದನದಲ್ಲಿ ವೀರಾವೇಶದ ಮಾತನ್ನಾಡಿ, ತೊಡೆತಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಗಣಿ ಅಕ್ರಮ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟಕ್ಕೆ ಬರ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯವ್ಯಾಪಿ ಹೋರಾಟ: ಈ ಬೆಳವಣಿಗೆಯ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಹೇಳಿದ ಅವರು, ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯನವರು ಗಣಿ ಹಗರಣ ಆರೋಪಿ ಡಿ.ಕೆ. ಶಿವಕುಮಾರ್ ಹಾಗೂ ಬಿಡಿಎ ಹಗರಣ ಆರೋಪಿ ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದಾ ಮುಂದಾಲೋಚನೆ ಇಲ್ಲದ ನಿರ್ಧಾರಗಳನ್ನು ತೆಗೆದುಕೊಂಡು ಆ ನಂತರ ಅವುಗಳನ್ನು ಹಿಂದಕ್ಕೆ ಪಡೆಯುವ ಸಿದ್ದರಾಮಯ್ಯ ಆತುರಪಟ್ಟು ಇಬ್ಬರು ಕಳಂಕಿತರನ್ನು ಸಂಪುಟಕ್ಕೆ  ನೇಮಿಸಿಕೊಂಡು ನಂತರ ಅವರನ್ನು ಸಂಪುಟದಿಂದ ಕೈಬಿಟ್ಟು ಅಪಹಾಸ್ಯಕ್ಕೆ ಒಳಗಾಗುವುದು ಬೇಡ ಎಂಬುದು ಸಲಹೆ ಎಂದರು.
ಅಸಹಾಯಕ ಸಿಎಂ: ಸಿದ್ದರಾಮಯ್ಯನವರು ಸರ್ಕಾರ ರಚನೆಯ ಪ್ರಾರಂಭದಲ್ಲೇ ಎಡವಿ, ನಂತರ ತಮ್ಮ ಅಸಹಾಯಕತೆ ತೋರ್ಪಡಿಸಿದರು. ಸಂತೋಷ್ ಲಾಡ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಜನರಿಂದ ತೀವ್ರ ಅಸಮಾಧಾನ ಎದುರಿಸಿದರು. ಸ್ವಾತಂತ್ರ್ಯ ಹೋರಾಟಗಾರರೂ ಸಹ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದಲ್ಲೂ ಬಿಜೆಪಿ ಮುನ್ನೆಚ್ಚರಿಕೆ ನೀಡಿತ್ತು. ನಂತರ ಹೋರಾಟ ನಡೆಸಿತು. ಈಗ ಇದೇ ತಪ್ಪು ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದರು.

ಸಂತೋಷ್ ಹೆಗ್ಡೆಯವರೇ ಈಗ ಮಾತನಾಡಿ
ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿಗೆ ಆಗಿರುವ ಹಾನಿಯನ್ನು ಸಂತೋಷ್ ಹೆಗ್ಡೆಯವರು ತುಂಬಿಕೊಡಲು ಸಾಧ್ಯವೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಕ್ರಮ ಗಣಿಗಾರಿಕೆ ತಡೆದಿದ್ದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ. ಈ ಸಂದರ್ಭದಲ್ಲೇ ಅವರ ಮೇಲೆ ಆರೋಪ ಹೊರಿಸಲಾಯಿತು.
ಲೋಕಾಯುಕ್ತದಂತಹ ಸಂಸ್ಥೆಯೇ ಆರೋಪ ಮಾಡಿತೆನ್ನುವ ಕಾರಣಕ್ಕೆ ಪಕ್ಷದ ಮುಖಂಡರು ಬಿಎಸ್‌ವೈ ಅವರ ರಾಜಿನಾಮೆ ಪಡೆಯುವ ನಿರ್ಧಾರಕ್ಕೆ ಬಂದರು. ಆದರೆ, ಇಂದು ಗಣಿ ಅಕ್ರಮಗಳಿಗೆ ಯಾರು ಕಾರಣ ಎಂಬ ಮಾಹಿತಿ ದಾಖಲೆ ಸಹಿತ ಹೊರಬರುತ್ತಿದೆ, ಈಗ ಸತ್ಯ ಹೊರಜಗತ್ತಿಗೆ ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಮ್ಮನಿರುವ ಸಂತೋಷ್ ಹೆಗ್ಡೆಯವರು ಪ್ರತಿಕ್ರಿಯೆ ನೀಡಲಿ. ಯಾವ ಕಾರಣಕ್ಕೆ ಅಂದು ಸಿಕ್ಕಿಸಲಾಯಿತು ಎಂಬ ಸಂಗತಿಯೂ ಹೊರಬರಬೇಕಾಗಿದೆ ಎಂದು ತಿಳಿಸಿದ ಅವರು, ಪಕ್ಷಕ್ಕಾದ ಹಾನಿಯನ್ನು ಮಾತ್ರ ಯಾರೂ ತುಂಬಿಕೊಡಲು ಸಾದ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.