ಶಿವಮೊಗ್ಗ

ಸರ್ಕಾರ ಅಡಕೆ ಬೆಳೆಗಾರರ ರಕ್ಷಿಸಲಿ

Published On :

ತೀರ್ಥಹಳ್ಳಿ:  ಅಡಕೆ ಬೆಳೆಗಾರರನ್ನು ತಲ್ಲಣಗೊಳಿಸುತ್ತಿರುವ ಅಡಕೆ ನಿಷೇಧ ಪ್ರಸ್ತಾವನೆ ಎನ್ನುವುದು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ. ಅಡಕೆಯ ಮಾನ ಉಳಿಸಿಕೊಳ್ಳಲು ಕಳೆದ ದಶಕದಿಂದಲೂ ನಿರಂತರ ಹೋರಾಟ ನಡೆಯುತ್ತಲೇ ಇದೆ. 12 ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಅಡಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬರಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಇತ್ತೀಚೆಗೆ ಕಾರವಾರದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಡಿಶನಲ್ ಅಟಾರ್ನಿ ಜನರಲ್ ಇಂದಿರಾ ಜೈಸಿಂಗ್  ಅಡಕೆ ವಿಚಾರದಲ್ಲಿ ಸುಪ್ರೀಂಕೋರ್ಟಿಗೆ ನೀಡಿರುವ ಹೇಳಿಕೆ ಸಮರ್ಥಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
12 ಜಿಲ್ಲೆ:  ಕೇಂದ್ರ ಸರ್ಕಾರ ಯಾವುದೇ ಲಿಖಿತ ಹೇಳಿಕೆ, ದಾಖಲೆ ನೀಡಿಲ್ಲ ಎಂದು ಮುಖಂಡರು ಅಡಕೆ ಬೆಳೆಗಾರರನ್ನು ಆತಂಕದಿಂದ ದಿನದೂಡುವಂತೆ ಮಾಡಿದ್ದಾರೆ. ಇದು ನಿಲ್ಲಬೇಕು. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ  ಎಲ್ಲ ಸರ್ಕಾರಗಳೂ ಅಡಕೆ ಬೆಳೆಗಾರರಿಗೆ ಮೋಸ ಮಾಡಿವೆ. ರಾಜ್ಯದಲ್ಲಿ 10-12 ಜಿಲ್ಲೆಗಳಲ್ಲಿ ತಮ್ಮ ಬದುಕನ್ನು ನೆಚ್ಚಿಕೊಂಡಿರುವ ಅಡಕೆ ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬರಬೇಕು.  ಸದನದ ಒಳಗೆ ಅಡಕೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.
ನಿಜಚಿತ್ರಣ ದೊರೆಯಲಿ:  ಗೋರಕ್ ಸಿಂಗ್ ವರದಿಯಂತೆ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಇಂದಿರಾ ಜೈಸಿಂಗ್ ಅವರು  ಸುಪ್ರೀಂಕೋರ್ಟಿಗೆ ನೀಡಿದ್ದಾರೆ ಎನ್ನುವ ವರದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಅಡಕೆ ಹಾನಿಕಾರಕ ವರದಿಯ ಆಧಾರ ಎನ್ನಲಾಗಿದೆ. ಈ ವರದಿ ಹಿಂದೆ ಸಿಗರೇಟು ಲಾಬಿ ವ್ಯವಸ್ಥಿತ ಸಂಚು ನಡೆಸಿದೆ. ಈ ಹಿಂದೆ ಮೈಸೂರಿನ ಸಿಎಫ್‌ಟಿಆರ್‌ಐ ಅಡಕೆ ಬಗ್ಗೆ ನೀಡಿರುವ ವರದಿಯಲ್ಲಿ ಅಡಕೆ ಆರೋಗ್ಯಕಾರಿ ಎಂದಿದೆ. ನಮ್ಮ ರೈತರಿಗೆ ವಸ್ತುಸ್ಥಿತಿಯ ನಿಜಚಿತ್ರಣ ದೊರೆಯಬೇಕು ಎಂದು ಹೇಳಿದರು.
ಹೋರಾಟಕ್ಕೆ ಸಂದ ಜಯ:  ಸುಪ್ರೀಂಕೋರ್ಟ್ ಅಡಕೆ ಬಗ್ಗೆ ವ್ಯತಿರಿಕ್ತ ಆದೇಶ ನೀಡಿದರೆ ಆದೇಶ ನೀಡಿದರೆ ಬೆಳೆಗಾರರಿಗೆ ಪರ್ಯಾಯ ದಾರಿಯಿಲ್ಲದೆ ಬಹಳ ತೊಂದರೆ ಆಗುತ್ತದೆ. ಈ ಬಗ್ಗೆ ಸಮರ್ಥ ವಾದ ಮಂಡಿಸಲು ರಾಜ್ಯ ಸರ್ಕಾರ ಹಿರಿಯ ವಕೀಲರನ್ನು ನಿಯೋಜಿಸಬೇಕು. ರಾಜ್ಯ ಸರ್ಕಾರ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿದೆ. ಅಂದಾಜು 350 ಕೋಟಿ ಸಾಲ ಮನ್ನಾ ಮಾಡಲು ಚಿಂತನೆ ನಡೆಸಲಾಗುತ್ತಿರುವುದು ಅಡಕೆ ಬೆಳೆಗಾರರ ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು.
ಕೇಂದ್ರ ಕೃಷಿ ಸಚಿವರ ಭೇಟಿ:  ಜ.16ರಂದು ಈ ವಿಚಾರವಾಗಿಯೇ ಕೇಂದ್ರ ಸಚಿವರಾದ ಶರದ್‌ಪವಾರ್ ಹಾಗೂ ಗುಲಾಂ ನಬಿ ಆಜಾದ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಪರಿಸ್ಥಿತಿ ವಿವರಿಸುವುದಾಗಿ ಹೇಳಿದರು. ಜ.23ರಂದು ಕೇರಳ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿಯೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಹಾಗೇ ಶಿವಮೊಗ್ಗದಲ್ಲಿ ಅಡಕೆಯ ವಿಚಾರವಾಗಿ ವಿಚಾರ ಸಂಕಿರಣ ನಡೆಸಲಾಗುತ್ತದೆ ಎಂದು ಹೇಳಿದರು.
ಸಹ್ಯಾದ್ರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಚ್.ಎನ್. ವಿಜಯದೇವ್, ಸುಷ್ಮಾ ಸಂಜಯ್, ನಾಗೇಂದ್ರ ಜೋಯ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.