ಲೋಡ್ ಶೆಡ್ಡಿಂಗ್ಗೆ ವಿರೋಧ
ಸಾಗರ: ತಾಲೂಕಿನಲ್ಲಿ ಅನಿಯಮಿತ ಲೋಡ್ಶೆಡ್ಡಿಂಗ್ ಮಾಡುತ್ತಿರುವ ಕ್ರಮ ಖಂಡಿಸಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪೇಟೆ ಪೊಲೀಸ್ ಠಾಣೆ ವೃತ್ತದಿಂದ ಮೆಸ್ಕಾಂ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕೆಲಹೊತ್ತು ರಾ.ಹೆ.206ರಲ್ಲಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
10 ಎಂ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಹಾಳಾಗಿ ಸುಮಾರು 4 ವರ್ಷ ಕಳೆದಿದ್ದರೂ ಹೊಸ ಪರಿವರ್ತಕ ತಂದು ಅಳವಡಿಸುವ ಕೆಲಸ ಮಾಡದ ಇಲಾಖೆ ಅಧಿಕಾರಿಗಳು ಯಾವುದೇ ಸರ್ಕಾರಿ ಆದೇಶವಿಲ್ಲದಿದ್ದರೂ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ಚರಿಕೆ: ಈ ವರ್ಷ ವ್ಯಾಪಕ ಮಳೆಯಾಗಿ ರಾಜ್ಯದ ಬಹುತೇಕ ಜಲವಿದ್ಯುದಾಗಾರಗಳು ಭರ್ತಿಯಾಗಿದೆ. ಆದರೂ ವಿದ್ಯುತ್ ಬವಣೆ ತಪ್ಪಿಲ್ಲ. ತಾಲೂಕಿನ ಜನರ ತ್ಯಾಗದಿಂದ ನಿರ್ಮಿಸಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದ 40 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ, ತಾಲೂಕಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಬರುವ ಫೆಬ್ರವರಿಯಲ್ಲಿ ಸಾಗರದಲ್ಲಿ ಮಾರಿಜಾತ್ರೆ ನಡೆಯಲಿದ್ದು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಆಗ ಲೋಡ್ ಶೆಡ್ಡಿಂಗ್ನಿಂದ ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ರಾಜ್ಯಕ್ಕೆ ಬೆಳಕು ನೀಡಲು ತ್ಯಾಗ ಮಾಡಿರುವ ತಾಲೂಕಿಗೆ ಲೋಡ್ ಶೆಡ್ಡಿಂಗ್ನಿಂದ ವಿನಾಯ್ತಿ ನೀಡಬೇಕು, ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ಶೇ.50 ರಿಯಾಯ್ತಿ ದರದಲ್ಲಿ ವಿದ್ಯುತ್ ನೀಡಬೇಕು. ಯಾವುದೇ ಸಬೂಬು ನೀಡದೆ ತಾಲೂಕಿಗೆ 24ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಅಸಹಾಯಕತೆ: ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಹಿರಿಯ ಅಧಿಕಾರಿ ದೀಪಕ್ ಕಾಮತ್, ಲೋಡ್ ಶೆಡ್ಡಿಂಗ್ ನಿಲ್ಲಿಸುವ ಅಧಿಕಾರ ತಮ್ಮ ವ್ಯಾಪ್ತಿಯಲ್ಲಿ ಇಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯೇ ಕಡಿಮೆ ಇರುವುದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕೆ.ಪಿ.ಟಿ.ಸಿ.ಎಲ್.ಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದ್ದರೂ, ಈತನಕ ಕ್ರಮ ಕೈಗೊಂಡಿಲ್ಲ. ಈ ವಿಷಯದಲ್ಲಿ ತಾವು ಅಸಹಾಯಕರು ಎಂದರು.
ಸಮಿತಿಯ ಪ್ರಮುಖರು, ಪತ್ರಕರ್ತರ ಸಂಘದ ಹಿತಕರ ಜೈನ್, ಆಮ್ ಆದ್ಮಿ ಪಕ್ಷದ ಪ್ರಮುಖರು, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಮಲೆನಾಡು ಮುದ್ರಕರ ಸಂಘದ ಪ್ರಮುಖರು, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಬಳಕೆದಾರರ ವೇದಿಕೆಯ ಅ.ರಾ. ಲಂಬೋದರ, ಎಚ್.ಎನ್. ಉಮೆಶ್, ಚೇತನರಾಜ್, ಸುಳಗೋಡು ಗಣಪತಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

