ಶಿವಮೊಗ್ಗ

ವಚನ ಸಾಹಿತ್ಯ ಜನರ ತಲುಪಲಿ: ಕಾಗೋಡು

Published On :

ಶಿವಮೊಗ್ಗ: ಶರಣ ಸಾಹಿತ್ಯ ಪರಂಪರೆ ಸಮಾಜಕ್ಕೆ ಮಾರ್ಗದರ್ಶಕ. ಹಾಗೆಯೇ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಶ್ರೀಗುರುಬಸವ ಸ್ವಾಮಿಯವರ 102ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.
ಯುವಜನರಿಗೆ ತಲುಪಿಸಿ:  ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನ ಸಾಹಿತ್ಯ ರಚನೆಗೊಂಡಿದ್ದರಿಂದಾಗಿ ಅದು ಅನೇಕರನ್ನು ತಲುಪಿದೆ. ಆದರೆ ಇಂದಿನ ಪೀಳಿಗೆಗೆ ಅದನ್ನು ಅಷ್ಟಾಗಿ ಗಮನಿಸುತ್ತಿಲ್ಲ ಎಂದು ಬೇಸರಿಸಿದರು. ವಚನ ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗಿದ್ದರಿಂದಲೇ ಮತ್ತೋರ್ವ ಅಕ್ಕಮಹಾದೇವಿ ಹುಟ್ಟಿಬರಲು ಸಾಧ್ಯವಿಲ್ಲ. ಇಂತಹ ಸಂದರ್ಭ ವಚನ ಸಾಹಿತ್ಯವನ್ನು ಯುವ ಜನರಿಗೆ ಹೆಚ್ಚೆಚ್ಚು ತಲುಪಿಸುವ ಪ್ರಯತ್ನ ಮಾಡಬೇಕಾಗಿದೆ. ಬೆಕ್ಕಿನ ಕಲ್ಮಠವು ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಹಾಕಿಕೊಟ್ಟ ಮೇಲ್ಪಂಕ್ತಿ ಇಂದಿಗೂ ನಮ್ಮ ಕಣ್ಣಮುಂದಿದೆ. ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಶರಣರ ಕೊಡುಗೆ ಅಪಾರ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಸಂಸ್ಕೃತಿ, ಜನಜೀವನ ಕ್ರಮ ಎಲ್ಲವನ್ನೂ ಒಟ್ಟಿಗೆ ಕೊಂಡುಹೋಗುವುದೇ ಭಾವೈಕ್ಯತೆ ಎಂಬುದು ನನ್ನ ಭಾವನೆ, ಬೆಕ್ಕಿನ ಕಲ್ಮಠವು ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿ ಮುಳುಗಿರುವ ಇಂದಿನ ಜನಾಂಗ ತಮ್ಮ ತಮ್ಮ ವೈಯಕ್ತಿಕ ಜೀವನದಲ್ಲಿ ಏರುಪೇರಾದಾಗ ಧರ್ಮ, ದೇವರು, ಮಠ ಎಂದು ಓಡಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗುವ ಬದಲು ಸಣ್ಣ ವಯಸ್ಸಿನಿಂದಲೇ ಧಾರ್ಮಿಕತೆ ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಸಂಕಷ್ಟಗಳನ್ನೂ ಎದೆಗುಂದದೆ ಎದುರಿಸಬಹುದು ಎಂದುತಿಳಿಸಿದರು.
ಮೂರುಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಸ್ವಾಮೀಜಿ, ಜಿ.ಪಂ.ಸದಸ್ಯ ಕಲಗೋಡು ರತ್ನಾಕರ್, ಡಾ. ಮಲ್ಲೇಶ್ ಹುಲುಮನಿ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.