ಹದಗೆಟ್ಟ ನಗರ- ಮಾಸ್ತಿಕಟ್ಟೆ ರಸ್ತೆ
ಕ. ಪ್ರ.ವಾರ್ತೆ ಹೊಸನಗರ ಜ.16
ತಾಲೂಕಿನ ನಗರ- ಮಾಸ್ತಿಕಟ್ಟೆ ರಸ್ತೆ ಸಂಪೂರ್ಣ ಹದಗೆಟ್ಟು ಬಹಳ ಸಮಯ ಕಳೆದರೂ ಹೊಸ ಡಾಂಬರೀಕರಣ ಹಾಗಿರಲಿ, ದುರಸ್ತಿ ಬಗ್ಗೆ ಕೂಡ ಅಧಿಕಾರಿಗಳು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಮಳೆಗಾಲದಲ್ಲಿ ಹೊಂಡ, ಗುಂಡಿ ತುಂಬಿದ ರಸ್ತೆಯಲ್ಲಿ ವಾಹನಗಳು ಸಂಚಾರಕ್ಕೆ ಪರದಾಡಿದ್ದು ಅಷ್ಟಿಷ್ಟಲ್ಲ.
ಮಳೆ ಬಿಡುವು ನೀಡುತ್ತಿದ್ದಂತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿ ಸ್ಥಳೀಯರನ್ನು ಸಮಾಧಾನಪಡಿಸಿದ್ದು ಬಿಟ್ಟರೆ ಕೆಲಸ ಮಾತ್ರ ಪ್ರಾರಂಭವಾಗಿಲ್ಲ.
ಎರಡು ತಿಂಗಳ ಹಿಂದೆ ಸಚಿವ ಕಿಮ್ಮನೆ ರತ್ನಾಕರ್ ರಸ್ತೆ ಅಭಿವೃದ್ಧಿ ಹಣ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದ್ದು, ಮಂಜೂರಾಗುವ ಒಳಗೆ ದುರಸ್ತಿ ಕಾರ್ಯ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು ಕೂಡ ಪ್ರಯೋಜನವಾಗಿಲ್ಲ. ನಂತರ ಇತ್ತೀಚೆಗಷ್ಟೆ ನಗರದಲ್ಲಿ ನಡೆದ ಬಗರ್ಹುಕುಂ ಸಮಾವೇಶದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಲೋಕೋಪಯೋಗಿ ಅಧಿಕಾರಿಯನ್ನು ವೇದಿಕೆ ಕರೆಸಿಕೊಂಡು ತರಾಟೆ ತೆಗೆದುಕೊಂಡಿದ್ದು ಮಾತ್ರವಲ್ಲ ಕೂಡಲೇ ದುರಸ್ತಿ ಕಾರ್ಯ ನಡೆಸುವಂತೆ ಆದೇಶಿಸಿದ್ದರು. ಆದರೆ, ದುರಸ್ತಿ ಕಾಮಗಾರಿ ಮಾತ್ರ ಇನ್ನು ಪ್ರಾರಂಭಗೊಂಡಿಲ್ಲ.
ನಗರ- ಮಾಸ್ತಿಕಟ್ಟೆ ರಸ್ತೆ ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆ. ವಾಹನ ಸವಾರರಿಗೆ ಇಲ್ಲಿನ ಸಂಚಾರ ಸವಾಲಿನ ಕೆಲಸವಾಗಿದೆ ಮಾತ್ರವಲ್ಲ. ರಸ್ತೆಯಲ್ಲಿ ತುಂಬಿರುವ ಹೊಂಡಗುಂಡಿಯ ಮೇಲಿನ ವಾಹನದ ಓಡಾಟದಲ್ಲಿ ರಸ್ತೆಪಕ್ಕದ ಜನ ರಾತ್ರಿ ನಿದ್ದೆಯಿಂದ ಎದ್ದುಕೂರುವಂತಾಗಿದೆ.
ಅಧಿಕಾರಿಗಳು ಏನಂತಾರೆ?
ನಗರದಿಂದ ಕಾನುಗೋಡುವರೆಗಿನ ರಸ್ತೆ ದುರಸ್ತಿಗೆ 6.50 ಲಕ್ಷ ಅನುದಾನ ಕೋರಿ ಪ್ರಸ್ತಾವ ಮಾಡಲಾಗಿದ್ದು, ಇನ್ನು ಮಂಜೂರಾತಿ ದೊರಕಿಲ್ಲ. ಅಲ್ಲದೆ, ಈ ಹಣಕ್ಕೆ ಸಂಪೂರ್ಣ ಹದಗೆಟ್ಟಿರುವ ರಸ್ತೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಆದರೂ ಈ ಸಂಬಂಧ ಗುತ್ತಿಗೆಗಾರರೊಬ್ಬರಿಗೆ ಕೂಡಲೇ ದುರಸ್ತಿ ಕಾರ್ಯ ನಡೆಸಲು ಸೂಚಿಸಲಾಗಿದೆ. ಒಟ್ಟಾರೆ ನಾಲ್ಕು ದಿನದೊಳಗೆ ಕಾಮಗಾರಿ ಪ್ರಾರಂಭಗೊಳ್ಳುತ್ತದೆ.
- ಲೋಕೇಶ್, ಎಇಇ,
ಲೋಕೋಪಯೋಗಿ ಇಲಾಖೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

