ಶಿವಮೊಗ್ಗ

ವಿಲಾಸೀ ಉದ್ಯೋಗದತ್ತ ಆಕರ್ಷಣೆ ಸಲ್ಲ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.22
ಉದ್ಯೋಗ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ಪದವೀಧರರೆಲ್ಲ ಉದ್ಯೋಗ ಬಯಸುವವರಲ್ಲ ನಿಜ. ಆದರೆ, ಕೆಲಸ ಅರಸುವ ಬಹುತೇಕ ನಿರುದ್ಯೋಗಿಗಳು ಶ್ರಮವಿಲ್ಲದೆ ಹಣ ಗಳಿಸುವ, ವಿಲಾಸದ ಹಾಗೂ ಸರಳ ಜೀವನ ಶೈಲಿಯ ಉದ್ಯೋಗಗಳಲ್ಲಿ ಹೆಚ್ಚಿನ ಹಣ ಸಂಪಾದಿಸುವ ಧಾವಂತದಲ್ಲಿರುವುದು ವಿಷಾದದ ಸಂಗತಿ ಎಂದು ಪಿಯರ್ ಲೈಟ್ ಲೈನರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ವೇಣುಗೋಪಾಲ್ ಹೇಳಿದರು.
ಅವರು ಬುಧವಾರ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ನಿಯೋಜಕರುಗಳಿಗಾಗಿ ಏರ್ಪಡಿಸಲಾಗಿದ್ದ ಸಂಖ್ಯಾ ಚಟುವಟಿಕೆಗಳ ಗುಣಮಟ್ಟ ವೃದ್ಧಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ವಾವಲಂಬಿ ಜೀವನ: ಅರ್ಹ ನಿರುದ್ಯೋಗಿಗಳಿಗೆ ಸೂಕ್ತ ತರಬೇತಿ ಹಾಗೂ ಸಕಾಲಿಕ ಮಾರ್ಗದರ್ಶನದಿಂದ ಮಾನವ ಸಂಪನ್ಮೂಲವನ್ನು ಉತ್ತಮವಾಗಿ ಬಳಸಿಕೊಳ್ಳಬಹುದಾಗಿದೆ ಎಂದ ಅವರು, ಇವರಿಂದಾಗಿ ಎಲ್ಲಾ ಕ್ಷೇತ್ರದ ಉದ್ಯೋಗಿಗಳು ಸ್ವಾವಲಂಬಿಯಾಗಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ಎ.ಕೆ. ರಮೇಶ್ ಬಾಬು, ಮಾತನಾಡಿ, ಇಲಾಖೆಗಳಲ್ಲಿನ ಅಧಿಕಾರಿ-ಸಿಬ್ಬಂದಿ ವಿಶ್ವಾಸಾರ್ಹ ಅಂಕಿ-ಅಂಶಗಳ ಸಂಗ್ರಹಣೆಯ ಕಡೆಗೆ ಅಷ್ಟಾಗಿ ಗಮನ ಹರಿಸುತ್ತಿಲ್ಲ. ನಂಬಲರ್ಹ ಅಂಕಿ-ಅಂಶಗಳ ಮಹತ್ವದ ಬಗ್ಗೆ ಹಾಗೂ ಆ ಕುರಿತು ಅನುಸರಿಸಬೇಕಾಗುವ ವಿಧಿವಿಧಾನಗಳ ಬಗ್ಗೆ ಸಂಬಂಧಪಟ್ಟವರಿಗೆ ಮನದಟ್ಟು ಮಾಡಿ ಸಕಾರಾತ್ಮಕ ಒಲವು ಮೂಡಿಸುವ ಅಗತ್ಯವಿದೆ ಎಂದರು.
ನಿರಂತರ ಪ್ರಯತ್ನ: ಇಲಾಖೆಗಳ ಮುಖ್ಯಸ್ಥರು ಅಂಕಿ- ಅಂಶಗಳ ನಿರ್ವಹಣೆಗೆ ಪೂರಕವಾದ ತಾಂತ್ರಿಕತೆ ಮತ್ತು ಕೌಶಲ್ಯ  ವೃದ್ಧಿಸಿಕೊಳ್ಳುವುದರ ಜೊತೆಗೆ ಗುಣಾತ್ಮಕ ಫಲಿತಾಂಶಗಳೆಡೆಗೆ ನಿರಂತರ ಪ್ರಯತ್ನಶೀಲರಾಗಿರಬೇಕು ಎಂದು ಹೇಳಿದರು.
ಖಾಸಗಿ ಸಂಸ್ಥೆಗಳ ಮುಖ್ಯಸ್ಥರು 25ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೊದಲು ಸಂಬಂಧಿಸಿದ ಜಿಲ್ಲಾ ಉದ್ಯೋಗಾಧಿಕಾರಿಗಳೊಂದಿಗೆ ಚರ್ಚಿಸಿ, ಇಲಾಖೆಯ ಸಹಕಾರದೊಂದಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದರು.
ನಿರ್ಲಕ್ಷ್ಯ ಸಲ್ಲ: ನಿರುದ್ಯೋಗಿಗಳು ಅಥವಾ ಪದವೀಧರರು ತಮ್ಮ ಹೆಸರನ್ನು ಉದ್ಯೋಗಾಧಿಕಾರಿಗಳಲ್ಲಿ ನೋಂದಾಯಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಬಾರದು. ಹೆಸರು ನೋಂದಾಯಿಸಿದವರಿಗೆ ಇಲಾಖೆಯಿಂದ ಆಗಾಗ್ಗೆ ಏರ್ಪಡಿಸುವ ಶೈಕ್ಷಣಿಕ ಮತ್ತು ಔದ್ಯೋಗಿಕ ತರಬೇತಿ ಹಾಗೂ ಕಾರ್ಯಾಗಾರಗಳಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದರು. ಉದ್ಯೋಗ ವಿನಿಮಯ ಕೇಂದ್ರಗಳು ಉದ್ಯೋಗ ಸಹಾಯಕದ ಜೊತೆಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ಸಹ ತಮ್ಮ ಜಾಲದ ಮುಖಾಂತರ ಅಭ್ಯರ್ಥಿಗಳಿಗೆ ಒದಗಿಸುತ್ತಿದೆ ಎಂದು ಹೇಳಿದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ್ ಹೆಗ್ಡೆ ಅವರು ಆಗಮಿಸಿದ್ದರು. ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಸ್. ಮಲಕಿನಕೊಪ್ಪ ಸ್ವಾಗತಿಸಿದರು. ಎಚ್.ಜಿ. ಪ್ರಸನ್ನ ಐಯ್ಯಂಗಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.