ಕನಕರ ಸಾಮಾಜಿಕ ಆಶಯ ರಕ್ಷಣೆ ಅವಶ್ಯ
ಕ.ಪ್ರ.ವಾರ್ತೆ, ಸಾಗರ, ಜ.24
ಕನಕದಾಸರ ಕೀರ್ತನೆಯಲ್ಲಿ ಕಾಣುವ ಸಾಮಾಜಿಕ ಆಶಯವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯ ಎಂದು ವಿದ್ವಾಂಸ ಡಾ. ಬಿ.ಜಯಪ್ರಕಾಶ್ ಶೆಟ್ಟಿ ಹೇಳಿದರು.
ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಳೀಯ ಪ್ರಜ್ಞಾ ರಂಗತಂಡದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕನಕದಾಸರ ಸಾಹಿತ್ಯ ಕುರಿತ 'ಮುತ್ತು ಬಂದಿದೆ ಕೇರಿಗೆ' ಉಪನ್ಯಾಸ-ವಾಚನ-ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಯಲಿನಲ್ಲಿದ್ದವರು: ಕನಕದಾಸರು ಗರ್ಭಗುಡಿಯೊಳಗೆ ಇದ್ದವರಲ್ಲ. ಬಯಲಿನಲ್ಲಿ ಇದ್ದವರು. ಅವರನ್ನು ಅಂದಿನ ಕಾಲದಲ್ಲಿ ಬಯಲಿನಲ್ಲಿ ಇದ್ದವರಂತೆ ಸೃಷ್ಟಿಸುವ ಪ್ರಯತ್ನ ಸಹ ನಡೆಯಿತು. ಕರ್ನಾಟಕ ಸಂಗೀತ ಸಂದರ್ಭದಲ್ಲಿ ಪುರಂದರದಾಸರ ಕೀರ್ತನೆಗೆ ಸಿಕ್ಕಷ್ಟು ಪ್ರಾಮುಖ್ಯತೆ ಕನಕದಾಸರ ಕೀರ್ತನೆಗಳಿಗೆ ಸಿಗಲಿಲ್ಲ. ಕನಕದಾಸ ಅವರಂಥವರನ್ನು ಒಳಗಿನಿಂದ ಹೊರತಂದು, ಅವರ ಕೀರ್ತನೆಯ ತತ್ವವನ್ನು ಮನಕ್ಕೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನಾವು ಎಷ್ಟೆ ಪ್ರೌಢರಾಗಿದ್ದರೂ ನಮ್ಮೊಳಗಿನ ಒಳಶ್ರೇಣೀಕರಣ ಮತ್ತು ಒಡಕುಗಳನ್ನು ಮುಚ್ಚುವ ನಿಟ್ಟಿನಲ್ಲಿ ನಾವು ಯಶಸ್ಸು ಕಾಣಲಿಲ್ಲ. ಸಂವಿಧಾನದ ಆಶಯ ಒಂದಾಗಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ಚಿಂತನೆ ನಡೆಸುವವರ ಸಾಲು ದೊಡ್ಡದಾಗುತ್ತಿರುವುದು ವಿಪರ್ಯಾಸ ಎಂದರು.
ಕನಕದಾಸರು ಸಮಾಜದಲ್ಲಿನ ಮೇಲುಕೀಳು ಭಾವನೆ ತೊಡೆದುಹಾಕಿ ಸಮಷ್ಟಿ ಸಮಾಜ ನಿರ್ಮಾಣದ ಕಲ್ಪನೆ ಕಂಡು, ತಮ್ಮ ಕೀರ್ತನೆ ಮೂಲಕ ಅದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಹೂತು ಹೋದ ಇತಿಹಾಸವನ್ನು ಪುನರ್ ಮನನ ಮಾಡಿಸುವ ಕೆಲಸವನ್ನು 'ಮುತ್ತು ಬಂದಿದೆ ಕೇರಿಗೆ' ಕಾರ್ಯಕ್ರಮ ಮಾಡುತ್ತಿದೆ ಎಂದರು.
ಕೀರ್ತನಾ ಶಿಬಿರ ಅಗತ್ಯ: ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಮಾತನಾಡಿ, ಕನಕದಾಸರನ್ನು ಸಮಾಜವಿಜ್ಞಾನಿ, ತತ್ವಶಾಸ್ತ್ರಜ್ಞ, ಕೀರ್ತನಕಾರ, ದಾರ್ಶನಿಕ, ಸಂತಕವಿಗೆ ಎಂಬುದಕ್ಕೆ ಸೀಮಿತ ಮಾಡಬಾರದು.
ವೈದಿಕ ಪರಂಪರೆ ಕನಕದಾಸರ ಕೀರ್ತನೆಯನ್ನು ಭಕ್ತಿ ಎಂಬ ಚೌಕಟ್ಟಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಅದನ್ನು ಈಚೆ ತರುವ ನಿಟ್ಟಿನಲ್ಲಿ ಇಂತಹ ರಸಗ್ರಹಣ ಶಿಬಿರಗಳ ಅಗತ್ಯ ಹೆಚ್ಚು ಇದೆ ಎಂದು ಅವರು ಹೇಳಿದರು.
ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್, ಪ್ರಜ್ಞಾರಂಗ ತಂಡದ ಎಚ್.ಬಿ.ರಾಘವೇಂದ್ರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

