ಶಿವಮೊಗ್ಗ

ನಾಲ್ಕನೇ ದಿನಕ್ಕೆ ದಸಂಸ ಧರಣಿ

Published On :

ಶಿವಮೊಗ್ಗ: ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ದಸಂಸ ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಧರಣಿ ನಿರತರೊಂದಿಗೆ ಚರ್ಚಿಸಿ, ಮನವೊಲಿಸುವ ಪ್ರಯತ್ನ ನಡೆಸಿದರು.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಇತ್ಯರ್ಥಕ್ಕೆ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ. ಆದರೆ ಏ.14ರೊಳಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಬಗ್ಗೆ ಲಿಖಿತ ಭರವಸೆ ನೀಡದ ಹೊರತು ಪ್ರತಿಭಟನೆ ಹಿಂಪಡೆಯದಿರಲು ದಸಂಸ ಪಟ್ಟು ಹಿಡಿದಿದೆ.
ಬೆಂಬಲ: ಕರ್ನಾಟಕ ಮಾದಿಗ ದಂಡೋರ- ಮಾದಿಗ ಮೀಸಲಾತಿ ಹೋರಾಟ ಸಮಿತಿಯು ದಸಂಸ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದೆ.
ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಮಂತ್ರಿಗಳು, ಧರಣಿ ಬಗ್ಗೆ ಕಿಂಚಿತ್ತು ಧರಣಿ ನಿರತರ ಬಗ್ಗೆ ಯೋಚಿಸದೇ ಇರುವುದು ದುರ್ದೈವ. ಅಂಬೇಡ್ಕರ್ ಪ್ರತಿಮೆ ಹಾಗೂ ಜಗಜೀವನ್‌ರಾಮ್ ಪ್ರತಿಮೆ ಕಡತಗಳು, ಹಣ ದುರ್ಬಳಕೆ, ಈ ವಿಷಯಕ್ಕೆ ಸಂಬಂದಿಸಿದಂತೆ ಇವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಎಚ್.ಎನ್. ಚಂದ್ರಪ್ಪ, ಅಣ್ಣಪ್ಪ, ಲಕ್ಷ್ಮಯ್ಯ, ಪ್ರಭು, ನಾಗರಾಜ, ಮೂರ್ತಿ ಮೊದಲಾದರು ಒತ್ತಾಯಿಸಿದ್ದಾರೆ. ಅಲ್ಲದೇ ಎ.ಜಿ. ಸದಾಶಿವ ಆಯೋಗದ ಶಿಫಾರಸುಗಳನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಮಾತಂಗ ಪರಿವಾರ: ದಸಂಸ ಹೋರಾಟಕ್ಕೆ ಮಾತಂಗ ಪರಿವಾರವು ಬೆಂಬಲ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ದಲಿತ ಚಲುವಳಿಯ ಕಿಡಿ ಹಚ್ಚಿದ ದಲಿತ ಸಮೂಹದ ಕ್ರಾಂತಿಕಾರಿ ನಾಯಕ ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣಾರ್ಥ ಅಧ್ಯಯನದ ಪೀಠವನ್ನು ಕುವೆಂಪು ವಿವಿಯಲ್ಲಿ ಸ್ಥಾಪಿಸಬೇಕು ಹಾಗೂ ಮೀಸಲಾತಿಯಡಿಯಲ್ಲಿ ತುಂಬದೆ ಬಾಕಿ ಉಳಿದಿರುವ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಸರ್ಕಾರ ಭರ್ತಿಮಾಡಬೇಕು ಎಂದು ಶಿವಮೊಗ್ಗ ಮಾತಂಗ ಪರಿವಾರದ ಅಧ್ಯಕ್ಷ ಎನ್.ಕೆ. ಷಣ್ಮುಗಂ ಮತ್ತು ಕಾರ್ಯದರ್ಶಿ ಎಂ. ಏಳುಕೋಟಿ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ
ಈ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿರುವ ದಸಂಸ ಜತೆಗೆ ಹೋರಾಟಕ್ಕಿಳಿದಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.