ಶಿವಮೊಗ್ಗ

ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಜ.27
ಶಿಕ್ಷಣ ಕೇಂದ್ರಗಳು, ಆಸ್ಪತ್ರೆಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ, ಕಚೇರಿಗಳು ಹಾಗೂ ಮತ್ತಿತರ ಜನನಿಬಿಡ ಮತ್ತು ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ಭಯವಿಲ್ಲದೆ ಧೂಮಪಾನ ಮಾಡುವವರಿಗೆ ಕೋಟ್ಪಾ ಕಾಯಿದೆಯನುಸಾರ ದಂಡನೆಗೆ ಗುರಿಪಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ತೀವ್ರಗೊಳ್ಳಲಿದೆ.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಕೋಟ್ಪಾ ಕಾಯಿದೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ವಹಣೆಯ ಜವಾಬ್ದಾರಿಯ ಜತೆಗೆ ಸೂಕ್ತ ತರಬೇತಿ ನೀಡಲಾಗುವುದು. ಇನ್ನು ಒಂದು ವಾರದ ಅವಧಿಯೊಳಗಾಗಿ ಎಲ್ಲಾ ತಾಲೂಕುಗಳಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳಿಗೆ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿಯ ಕೊಡಚಾದ್ರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕವು ಬ್ಲೂಂಬರ್ಗ್ ಇನ್ಸಿಯೇಟಿವ್ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿ ಕೋಟ್ಪಾ ಕಾಯಿದೆ- 2003ರ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ದುರಂತ: ಶಿಕ್ಷಣ ಕೇಂದ್ರಗಳು, ಆಸ್ಪತ್ರೆಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ, ಕಚೇರಿಗಳು ಹಾಗೂ ಮತ್ತಿತರ ಜನನಿಬಿಡ ಮತ್ತು ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ಭಯವಿಲ್ಲದೆ ಧೂಮಪಾನ ಮಾಡುವವರಿಗೆ ಕೋಟ್ಪಾ ಕಾಯಿದೆಯನುಸಾರ ವಿನಾಯಿತಿ ನೀಡದೆ ದಂಡನೆಗೆ ಗುರಿಪಡಿಸಲಾಗುವುದು ಎಂದ ಅವರು, ಕೆಲವೇ ಜನ ಧೂಮಪಾನಿಗಳ ದುಶ್ಚಟದಿಂದಾಗಿ ಧೂಮಪಾನಿಗಳಲ್ಲದ ಬಹಳಷ್ಟು ಜನ ತಮ್ಮದಲ್ಲದ ತಪ್ಪಿಗೆ ತಮಗರಿವಿಲ್ಲದಂತೆ ತೀವ್ರ ರೀತಿಯ ಕಾಯಿಲೆಗಳಿಗೆ ಬಲಿಯಾಗುತ್ತಿರುವುದು ಸಾಮಾಜಿಕ ದುರಂತವೇ ಸರಿ ಎಂದು ವಿಷಾದಿಸಿದರು.
ಜವಾಬ್ದಾರಿ: 2003ರಲ್ಲಿ ಅನುಷ್ಠಾನಕ್ಕೆ ಬಂದ ಇತ್ತೀಚಿನ 11 ವರ್ಷಗಳ ಅವಧಿಯಲ್ಲಿ ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡುವ ವ್ಯಸನಿಗಳನ್ನು ಗುರುತಿಸಿ ವಸೂಲು ಮಾಡಲಾದ ಮೊತ್ತ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ದಂಡ ವಿಧಿಸುವ ಕಾರ್ಯ ಕೇವಲ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದ ಅವರು, ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಗುರುತಿಸಿ ದಂಡ ವಿಧಿಸುವ ಜವಾಬ್ದಾರಿ ನೀಡಲಾಗಿದ್ದು, ಅಧಿಕಾರಿಗಳು ಈ ಕಾಯ್ದೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಮಾತನಾಡಿ, ತಂಬಾಕು ಉತ್ಪನ್ನಗಳು ಬಹುತೇಕ ಕಾಯಿಲೆಗಳ ಉಗಮ ಸ್ಥಾನವಾಗಿವೆ ಎಂದ ಅವರು, ಜಿಲ್ಲೆಯ ಎಲ್ಲಾ ಇಲಾಖೆ, ಕಚೇರಿಗಳ ಮುಖ್ಯಸ್ಥರಿಗೆ ಧೂಮಪಾನಿಗಳನ್ನು ಗುರುತಿಸಿ, ದಂಡ ವಿಧಿಸುವ ಜವಾಬ್ದಾರಿ ನೀಡಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಣಿ ಶಿಕಾರಿಪುರ ತಹಸೀಲ್ದಾರ್ ಧರ್ಮೋಜಿರಾವ್, ತೀರ್ಥಹಳ್ಳಿ ತಹಸೀಲ್ದಾರ್ ಗಣೇಶಮೂರ್ತಿ, ಭದ್ರಾವತಿ ತಹಸೀಲ್ದಾರ್ ಸಿದ್ಧಮಲ್ಲಪ್ಪ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.