ಕರ ನೀಡಲು ಗ್ರಾಮಸ್ಥರ ನಿರಾಕರಣೆ
ಕ.ಪ್ರ.ವಾರ್ತೆ, ಸಾಗರ, ಜ.31 ತಾಲೂಕಿನ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ನೀಚಡಿಯಲ್ಲಿ ಗ್ರಾಪಂ ಕಂದಾಯ ವಸೂಲಿ ಸಿಬ್ಬಂದಿಯನ್ನು ಗ್ರಾಮಸ್ಥರು ಕರ ನೀಡಲು ನಿರಾಕರಿಸಿ ಹಿಂದಿರುಗಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಪಿ. ಸುಬ್ರಹ್ಮಣ್ಯ ಹಿರೇಬಿಲಗುಂಜಿ ಗ್ರಾಪಂ ನಡೆಸಿದ ಸರ್ವಕುಟುಂಬ ಸಮೀಕ್ಷೆಯಲ್ಲಿ ನೀಚಡಿ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳನ್ನು ಕೈಬಿಡಲಾಗಿದೆ. ಗ್ರಾಮದ ಇಡೀಕೇರಿ, ಕೆಳಗಿನಮನೆ, ಅಡ್ಡೇರಿ ಮೊದಲಾದ ಗ್ರಾಮಗಳ ಕುಟುಂಬಗಳ ಹೆಸರನ್ನು ಕೈಬಿಡಲಾಗಿದೆ. ಗ್ರಾಪಂ ಅಪೂರ್ಣ ಪಟ್ಟಿಯನ್ನು ಬಳಸುತ್ತಿರುವುದು ಖಂಡನೀಯ ಎಂದರು.
ಸೌಲಭ್ಯ ಸಾಧ್ಯವಿಲ್ಲದ ಸ್ಥಿತಿ: ಸರ್ವಕುಟುಂಬ ಸಮೀಕ್ಷೆಯಲ್ಲಿ ಹೆಸರಿಲ್ಲದೆ ಇರುವುದರಿಂದ ಸರ್ಕಾರದಿಂದ ದೊರೆಯುವ ನಿವೇಶನ, ಮನೆ, ಶೌಚಾಲಯ, ಉದ್ಯೋಗಖಾತ್ರಿಯ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಉದ್ಯೋಗಖಾತ್ರಿ ಯೋಜನೆಯಡಿ ಕೃಷಿಹೊಂಡ, ಜಮೀನು ಸಮತಟ್ಟು, ಬಸಿ ಕಾಲುವೆ, ಹೊಸ ತೋಟಗಳ ನಿರ್ಮಾಣ ಇನ್ನಿತರೆ ಕಾಮಗಾರಿಗೆ ಕುಟುಂಬವೊಂದಕ್ಕೆ ವರ್ಷಕ್ಕೆ ರು. 1ಲಕ್ಷ ವರೆಗಿನ ಕಾಮಗಾರಿ ಪಡೆದುಕೊಳ್ಳಲು ಸಾಧ್ಯವಿದೆ. ಆದರೆ ಪಂಚಾಯ್ತಿ ಆಡಳಿತದ ಬೇಜವಾಬ್ದಾರಿಯಿಂದ ಜನರು ಸೌಲಭ್ಯ ವಂಚಿತರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ನೀರಿಗೆ ಪರದಾಟ: ನೀಚಡಿ ಗ್ರಾಮದ ಕುಡಿಯುವ ನೀರಿನ ಯೋಜನೆಯ ಕೊಳವೆಬಾವಿ ಬತ್ತಿ ಹೋಗಿ 2 ವರ್ಷ ಕಳೆದಿದೆ. ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸಬೇಕು. ಇನ್ನೊಮ್ಮೆ ಸರ್ವ ಕುಟುಂಬ ಸಮೀಕ್ಷೆ ನಡೆಸಿ, ಕೈಬಿಟ್ಟ ಕುಟುಂಬಗಳನ್ನು ಸೇರಿಸಬೇಕು. ನಂತರ ಕಂದಾಯವನ್ನು ನೀಡುವುದಾಗಿ ತಿಳಿಸಿದ ಅವರು, ಒಂದೊಮ್ಮೆ ಪಂಚಾಯ್ತಿ ಆಡಳಿತ ನಮ್ಮ ಮನವಿಗೆ ಸ್ಪಂದಿಸದೆ ಹೋದರೆ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಎನ್.ಟಿ.ಲಕ್ಷ್ಮೀನಾರಾಯಣ, ಎನ್.ಎಚ್.ಮಂಜುನಾಥ್, ಎನ್.ಎ.ದತ್ತಮೂರ್ತಿ, ಎಸ್.ಪಿ. ಶ್ರೀಧರ್ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

