ಶಿವಮೊಗ್ಗ

ಪ್ರವಾಸೋದ್ಯಮ ಇಲಾಖೆಯ 2 ಎಕರೆ ಭೂಮಿ ಅತಿಕ್ರಮಣ

Published On :

ಸಾಗರ: ಪಟ್ಟಣಕ್ಕೆ ಸಮೀಪ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಸುಮಾರು ಎರಡು ಎಕರೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಒತ್ತುವರಿ ತೆರವುಗೊಳಿಸಲು ಇಲಾಖೆ ಪ್ರಯತ್ನಿಸುತ್ತಿದ್ದು ಅದು ಸುಲಭ ಸಾಧ್ಯವಾಗುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿ ತಾಲೂಕು ಕಚೇರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇತಿಹಾಸ ಪ್ರಸಿದ್ಧ ಇಕ್ಕೇರಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿ (ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 80ರಲ್ಲಿ) ಪ್ರವಾಸೋದ್ಯಮ ಇಲಾಖೆಗೆ ಸೇರಿದ ಎರಡು ಎಕರೆ ಜಾಗವಿದೆ.
ಮಾಹಿತಿ ಹಕ್ಕಿನಿಂದ ಮಾಹಿತಿ ಲಭ್ಯ:  1990-91ರಲ್ಲಿ ಯಡಜಿಗಳೇಮನೆ ಮಂಡಳ ಪಂಚಾಯ್ತಿ ಪ್ರವಾಸೋದ್ಯಮ ಇಲಾಖೆಗೆ ಈ ಜಾಗವನ್ನು ಮಂಜೂರು ಮಾಡಿತ್ತು. ಆದರೆ ಇಲಾಖೆ ಈವರೆಗೆ ಜಾಗಕ್ಕೆ ಬೇಲಿ ನಿರ್ಮಾಣ ಮುಂತಾದ ಯಾವುದೇ ಕೆಲಸ ಮಾಡಿರಲಿಲ್ಲ. ನಿಜವೆಂದರೆ ಇಲಾಖೆಗೆ ತನ್ನದೊಂದು ಜಾಗವಿದೆ ಎನ್ನುವುದೇ ಗೊತ್ತಿರಲಿಲ್ಲ. ಜಾಗ ಸ್ಥಳೀಯ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರ ಮಗ ಅತಿಕ್ರಮಣ ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಸಾಮಾಜಿಕ ಹೋರಾಟಗಾರರು ಅನುಮಾನದಿಂದ ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆದಾಗ ವಾಸ್ತವ ಸಂಗತಿ ಬೆಳಕಿಗೆ ಬಂದಿದೆ.
ತಕ್ಷಣ ಇಲಾಖೆ ಗಮನಕ್ಕೆ ತಂದಾಗ ಅದನ್ನು ತೆರವುಗೊಳಿಸಲು ಇಲಾಖೆ ಮುಂದಾಗಿದೆ. ಈ ನಡುವೆ ಅತಿಕ್ರಮಣದಾರರು ಸ್ಥಳೀಯ ಪಂಚಾಯ್ತಿಯಿಂದ ಪರವಾನಿಗೆ ಪಡೆದು ಮನೆಕಟ್ಟಲು ಅಡಿಪಾಯ ಹಾಕಿದ್ದರು. ಈ ವಿಷಯವನ್ನು ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ತಂದಾಗ ಅವರು ತಕ್ಷಣ ಕ್ರಮ ತೆಗೆದುಕೊಂಡು ಮನೆ ನಿರ್ಮಾಣ ಮಂಜೂರಾತಿಯನ್ನು ರದ್ದುಗೊಳಿಸಲು ಗ್ರಾಮಪಂಚಾಯ್ತಿಗೆ ದಾಖಲೆ ಸಮೇತ ಪತ್ರ ಹಾಕಿದರು. ಸದ್ಯ ಕಲ್ಮನೆ ಗ್ರಾಮ ಪಂಚಾಯ್ತಿ ಮಂಜೂರಾತಿಯನ್ನು ರದ್ದು ಮಾಡಿದ್ದು ಮನೆ ನಿರ್ಮಾಣ ಕಾಮಗಾರಿ ತಳಪಾಯದ ಹಂತದಲ್ಲಿಯೇ ನಿಂತಿದೆ.
ಹರಸಾಹಸ ಫಲಿತಾಂಶ ನೀಡಿಲ್ಲ:  ಜಾಗವನ್ನು ಖುಲ್ಲಾ ಮಾಡಲು ಇಲಾಖೆ ನಡೆಸುತ್ತಿರುವ ಹರಸಾಹಸ ಯಾವುದೇ ಫಲಿತಾಂಶ ನೀಡಿಲ್ಲ. ಈಗಾಗಲೇ ಇಲಾಖೆ ತನ್ನ ಜಾಗದಲ್ಲಿ ಕಾಯ್ದಿರಿಸಿದ ಜಾಗ ಎಂದು ಫಲಕ ಹಾಕಿದೆ. ಕಲ್ಲುಕಂಬಗಳ ಬೇಲಿ ನಿರ್ಮಿಸಲು ಇಲಾಖೆ ಮುಂದಾಗಿ ಕಲ್ಲುಕಂಬಗಳನ್ನು ಖರೀದಿಸಿತ್ತು. ಅಷ್ಟರಲ್ಲಿ ಒತ್ತುವರಿದಾರರು ಬೇಲಿ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು, ಒತ್ತುವರಿ ಸಂಬಂಧ ಕಳೆದ ಜನವರಿಯಿಂದ ತಹಶೀಲ್ದಾರರ ಕಚೇರಿಯೊಂದಿಗೆ 3 ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸಾಗರವನ್ನು ಪಾರಂಪರಿಕ ನಗರವಾಗಿ ಘೋಷಿಸುವ ನಿಟ್ಟಿನಲ್ಲಿ ಉತ್ಸುಕರಾಗಿರುವ ರಾಜ್ಯ ವಿಧಾನಸಭಾಧ್ಯಕ್ಷರನ್ನು ಕೂಡಾ ಭೇಟಿಯಾಗಿ ಮಾಹಿತಿ ನೀಡಲಾಗಿದೆ ಎಂದರು.
ಒಟ್ಟಿನಲ್ಲಿ ಸರ್ಕಾರಿ ಇಲಾಖೆ ಜಾಗ ಅತಿಕ್ರಮಣವಾಗಿದ್ದರೂ ಮೊದಲು ಇಲಾಖೆ ಗಮನಕ್ಕೆ ಬಂದಿಲ್ಲ. ನಂತರ ಗಮನಕ್ಕೆ ಬಂದು ಅತಿಕ್ರಮ ತೆರವಿಗೆ ಮುಂದಾದರೆ ಅದು ಸಾಧ್ಯವಾಗುತ್ತಿಲ್ಲ. ತಾಲೂಕು ಆಡಳಿತ, ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಇಲಾಖೆಗೆ ಜಾಗ ದೊರಕಿಸಿ ಕೊಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.