ಜಿಲ್ಲೆಗೆ ಕಹಿಯೇ ಹೆಚ್ಚು
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಬೇಡಿಕೆಗಳೇನೋ ಸಾಕಷ್ಟಿದ್ದವು. ಅದರಲ್ಲೂ ಬಹು ವರ್ಷಗಳಿಂದ ಮಲೆನಾಡಿಗರು ಕಾಯುತ್ತಿದ್ದ ಯೋಜನೆಗಳಿದ್ದವು. ಪ್ರಮುಖವಾಗಿ ಶಿವಮೊಗ್ಗ-ತಾಳಗುಪ್ಪ ಮಾರ್ಗ ಹೊನ್ನಾವರಕ್ಕೆ ಸೇರುತ್ತದೆ ಎಂಬ ನಿರೀಕ್ಷೆ ಇತ್ತು. ಉತ್ತರ ಕರ್ನಾಟಕಕ್ಕೆ ಮಲೆನಾಡಿನ ಸಂಪರ್ಕ ಸಿಗುವುದೆಂಬ ಆಸೆ ಇತ್ತು. ಆದರೆ ಅದ್ಯಾವುದೂ ಆಗಲಿಲ್ಲ.
ಮಲೆನಾಡಿಗರು ಕೇಳದ ರೈಲು ಸಿಕ್ಕಿದೆ. ಹಾಗಾಗಿ ಜಿಲ್ಲೆಯ ಪಾಲಿಗೆ ಡಿ.ವಿ. ಸದಾನಂದ ಗೌಡರ ಬಜೆಟ್ ಸಿಹಿಗಿಂತ ಹೆಚ್ಚು ಕಹಿಯನ್ನೇ ನೀಡಿದೆ.
ಕೊಂಕಣ ಕನಸು: ತಾಳಗುಪ್ಪ ರೈಲು ಮಾರ್ಗವು ಕೊಂಕಣ ರೈಲಿಗೆ ಸಂಪರ್ಕಿಸಬೇಕೆಂಬ ಬೇಡಿಕೆ ಬಹು ವರ್ಷಗಳದ್ದು. ಈ ಮೂಲಕ ಕರಾವಳಿಗೆ, ಮುಂಬೈಗೆ ಸಂಪರ್ಕ ದೊರೆತು ವಾಣಿಜ್ಯ ಕ್ಷೇತ್ರ ಬೆಳೆಯುತ್ತದೆಂಬ ಕನಸು ಇತ್ತು. ಮೋದಿ ಸರ್ಕಾರ ಬಹಳಷ್ಟು ಯೋಜನೆಗಳಿಗಿದ್ದ ಅರಣ್ಯ ಅಡೆತಡೆಗಳನ್ನು ನಿವಾರಿಸಿದಾಗ ಈ ಕನಸು ನನಸಾಗುವ ಆಸೆಯೂ ಮೇಲೆದ್ದಿತ್ತು. ಆದರೆ ಬಜೆಟ್ ಅಕ್ಷರಗಳಲ್ಲಿ ನಮೂದಾಗಲಿಲ್ಲ.
ಆದರೆ ತಾಳಗುಪ್ಪ ಮಾರ್ಗವನ್ನು ಸಿದ್ದಾಪುರಕ್ಕೆ ಸಂಪರ್ಕಿಸಲು ಡೀವಿ ಮುಂದಾಗಿದ್ದಾರೆ. ಸಿದ್ದಾಪುರಕ್ಕೂ ಈ ಮಾರ್ಗವನ್ನು ಮುಂದುವರಿಸುವುದು ಅಸಾಧ್ಯ. ಇಲ್ಲಿ ಸಹ ಅರಣ್ಯ ಸಮಸ್ಯೆ ಇದೆ. ಆದರೂ ಕೇಳದೇ ಸಿಕ್ಕ ಈ ಹೊಸ ಮಾರ್ಗಕ್ಕೆ ಖುಷಿ ಪಡಬೇಕಷ್ಟೇ.
ಇನ್ನೊಂದು ದಿಕ್ಕಿನಲ್ಲಿ ಶಿವಮೊಗ್ಗ -ಶೃಂಗೇರಿ-ಮಂಗಳೂರು ಮಾರ್ಗದ ಸಮೀಕ್ಷೆಯನ್ನು ಕೇಂದ್ರ ರೈಲ್ವೆ ಸಚಿವರು ಘೋಷಿಸಿದ್ದಾರೆ. ವಾಸ್ತವವಾಗಿ ಕೊಂಕಣ ರೈಲು ಶುರುವಾಗುವುದೇ ಮಂಗಳೂರಿನಿಂದ. ಶಿವಮೊಗ್ಗದಿಂದ ಮಂಗಳೂರು ವರೆಗಿನ ದೂರ ಅಂದಾಜು 210 ಕಿ.ಮೀ. ಆದರೆ ತಾಳಗುಪ್ಪದಿಂದ ಹೊನ್ನಾವರಕ್ಕೆ ಸಂಪರ್ಕಿಸಿದ್ದರೆ ಅದು ಸುಮಾರು 80 ಕಿ.ಮೀ. ಪಯಣ ಮಾತ್ರ. ಘೋಷಿತ ಹೊಸ ಮಾರ್ಗ ಮಲೆನಾಡಿಗರ ಪಾಲಿಗೆ ನಿಜವಾದ ಅರ್ಥದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆಯೇ ಆಗುತ್ತದೆ. ಇದರ ಜತೆಗೆ ಶಿವಮೊಗ್ಗ -ಶೃಂಗೇರಿ-ಮಂಗಳೂರು ಮಾರ್ಗದ ಅರಣ್ಯ ಸಮಸ್ಯೆ ದೊಡ್ಡ ಸವಾಲು.
ಉತ್ತರ ಸಂಪರ್ಕ: ಮಲೆನಾಡನ್ನು ಬಯಲುಸೀಮೆಗೆ ಸಂಪರ್ಕಿಸುವ ಶಿವಮೊಗ್ಗ -ಹರಿಹರ ಮಾರ್ಗಕ್ಕೆ ಈ ಬಾರಿ ಚಾಲನೆ ದೊರೆಯುವ ನಿರೀಕ್ಷೆ ಇತ್ತು. ಈ ಮಾರ್ಗ ಕೈಗೂಡಿದ್ದರೆ ಉತ್ತರ ಕರ್ನಾಟಕದ ವಾಣಿಜ್ಯ ನಗರಿಗಳ ಜತೆ ವ್ಯವಹಾರ ಸುಲಭವಾಗುತ್ತಿತ್ತು. ಆದರೆ ಸದಾನಂದಗೌಡರು ಈ ಮಾರ್ಗದ ಪ್ರಸ್ತಾವವನ್ನೇ ಮಾಡಿಲ್ಲ. ಈಗಾಗಲೇ ಸಮೀಕ್ಷೆ ಮುಗಿದು ಅನುದಾನಕ್ಕೆ ಕಾಯುತ್ತಿದ್ದ ಯೋಜನೆ ಇನ್ನಷ್ಟು ಕಾಲ ನೆನಗುದಿಗೆ ಬೀಳಲಿದೆ.
ಸಂಸದರ ಬೇಡಿಕೆ: ಬಜೆಟ್ ಮುನ್ನ ಸಂಸದ ಯಡಿಯೂರಪ್ಪ ಅವರು ಹಲವು ಬೇಡಿಕೆಗಳ ಪಟ್ಟಿಯನ್ನು ರೈಲ್ವೆ ಸಚಿವ ಸದಾನಂದಗೌಡರಿಗೆ ಸಲ್ಲಿಸಿದ್ದರು. ಅದರಲ್ಲಿ ಅವರು ಪ್ರಮುಖವಾಗಿ ಹಿಂದಿನ ಬಜೆಟ್ 2012-13ರಲ್ಲಿ ಘೋಷಿಸಿದ್ದ ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ಬದಲು ಶಿವಮೊಗ್ಗ -ಶಿಕಾರಿಪುರ-ಹಾನಗಲ್-ತಡಸ ಮೂಲಕ ಹುಬ್ಬಳ್ಳಿ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಕೋರಿದ್ದರು. ಈ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ.
ಬಿ.ಎಸ್. ಯಡಿಯೂರಪ್ಪ ಅವರ ಬಹಳಷ್ಟು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮಣೆ ಹಾಕಿಲ್ಲ ಎಂಬುದು ಮೇಲ್ನೋಟಕ್ಕೇ ಗೋಚರವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

