ಶಿವಮೊಗ್ಗ

ಅಡಕೆ ಸಾಗಾಟಕ್ಕೆ ಒಪ್ಪದ ಲಾರಿ

ಅಡಕೆ ಸಾಗಾಟಕ್ಕೆ ಒಪ್ಪದ ಲಾರಿ
Published On :

-ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ:
ಅಡಕೆ ಬೆಲೆ ಹೆಚ್ಚಾಗಿ ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿದ್ದರೂ, ಸಾಗಣೆದಾರರಲ್ಲಿ ಮಾತ್ರ ಭೀತಿ ಸೃಷ್ಟಿಸಿದೆ. ಹಿಂದೆಲ್ಲಾ ಅಡಕೆ ಬೆಲೆ ಕಡಿಮೆ ಇತ್ತು. ಆದರೆ, ಈಗ ಬೆಲೆ ಹೆಚ್ಚಾಗಿರುವುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಿದ್ದಾರೆ ಸರಕು ಸಾಗಣೆ ಲಾರಿ ಮಾಲೀಕರು.
ಭೀತಿ ಏಕೆ?: 10 ಟನ್ ತೂಕದ ಅಡಿಕೆ ಮೌಲ್ಯ ಏನಿಲ್ಲವೆಂದರೂ ಕನಿಷ್ಠ ರು. 70 ಲಕ್ಷ. ಇನ್ನು 16 ಟನ್ ತೂಕದ ಅಡಿಕೆ ಮೌಲ್ಯ ರು. 1.30 ಕೋಟಿಯಷ್ಟಿರುತ್ತದೆ. ಇಷ್ಟು ಮೌಲ್ಯದ ಅಡಕೆಯನ್ನು ಸಾಗಿಸುವಾಗ ಮಾಲಿನ ಭದ್ರತೆಯೇ ಲಾರಿ ಮಾಲೀಕರಿಗೆ ಅತಿ ದೊಡ್ಡ ಸಮಸ್ಯೆ.
ಸಮಸ್ಯೆ ಹೇಗೆ?:  ಅಡಕೆ ಹೆಚ್ಚಾಗಿ ಸಾಗಣೆಯಾಗುವುದು ಬೆಂಗಳೂರು, ಮುಂಬೈ, ಕಾನ್ಪುರ ಹಾಗೂ ದೆಹಲಿಗೆ. ಶಿವಮೊಗ್ಗದಿಂದ ಬೆಂಗಳೂರಿಗೆ ಸಾಗಿಸಲು ರು. 8-9 ಸಾವಿರ ಬಾಡಿಗೆ ಲಾರಿ ಮಾಲೀಕರಿಗೆ ಸಿಗುತ್ತದೆ. ಹಾಗೆಯೇ, ಮುಂಬೈಗೆ ಸಾಗಿಸಲು ರು. 20-25 ಸಾವಿರ, ಕಾನ್ಪುರ ಅಥವಾ ದೆಹಲಿಗೆ ರು. 50-55 ಸಾವಿರ ಬಾಡಿಗೆ ಇದೆ. ಈ ಸಂದರ್ಭದಲ್ಲಿ, ಒಂದು ಕ್ವಿಂಟಲ್ ಅಡಕೆ ಬೆಲೆ ಅಂದಾಜು ರು. 90 ಸಾವಿರ ಇದ್ದು, ಸಾಗಣೆ ವೇಳೆ ಒಂದೇ ಒಂದು ಮೂಟೆ ಕಳುವಾದರೂ ಬಾಡಿಗೆ ಮೊತ್ತವನ್ನು ಮರೆತೇಬಿಡಬೇಕು. ಹಾಗಾಗಿ, ಸಾಗಣೆ ವೇಳೆ ಲಾರಿಯಲ್ಲಿನ ಮಾಲನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ಅಲ್ಲದೆ, ಲಾರಿ ಅನ್‌ಲೋಡ್ ಮಾಡುವಾಗ ಅಡಕೆ ಮೂಟೆಗಳ ಲೆಕ್ಕ ಹೆಚ್ಚುಕಡಿಮೆ ಆದರೂ ಬಾಡಿಗೆ ಕೈತಪ್ಪುತ್ತದೆ ಎನ್ನುತ್ತಿದ್ದಾರೆ. ಇದಲ್ಲದೆ, ಕಬ್ಬಿಣ, ಸ್ಕ್ರಾಪ್ ಆಸೆಗಾಗಿಯೇ ಹೆದ್ದಾರಿ ದರೋಡೆ, ಕೊಲೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅಡಕೆ ಲಾರಿಯಲ್ಲಿದ್ದಾಗ ಕಳ್ಳರು ಸುಮ್ಮನಿರುತ್ತಾರೆಯೇ ಎಂಬುದು ಲಾರಿ ಮಾಲೀಕರ ಪ್ರಶ್ನೆ.
ವಿಮೆ ಬೇಡ ಅಂತಾರೆ: ಅಡಕೆ ಸಾಗಣೆ ಸಮಸ್ಯೆಗೆ ವಿಮೆ ಮಾಡಿಸುವುದು ಒಳ್ಳೆ ಉಪಾಯವೆನಿಸಿದರೂ, ಅದಕ್ಕೆ ಮಾಲೀಕರು ಒಪ್ಪುತ್ತಿಲ್ಲ. ಲಾರಿಯಲ್ಲಿ ಸಾಗಿಸುತ್ತಿರುವ ಸರಕಿನ ಮೌಲ್ಯದ ಶೇ. 1ರಷ್ಟು ಮೊತ್ತ ಪಾವತಿಸಿ ವಿಮೆ ಪಡೆಯಬಹುದು. ಈ ರೀತಿ ವಿಮೆ ಪಡೆಯಲು ಒಂದರಿಂದ ಒಂದೂವರೆ ಲಕ್ಷ ರು. ವೆಚ್ಚವಾಗುತ್ತದೆ. ಆದರೆ ಇದು ವಾಪಸ್ ಬರುವ ಹಣವಲ್ಲ. ಇಷ್ಟು ಮೊತ್ತದ ವಿಮೆ ಪಡೆಯುವುದು ಲಾರಿ ಮಾಲೀಕರಿಗಾಗಲಿ, ವ್ಯಾಪಾರಸ್ಥರಿಗಾಗಲಿ ಲಾಭದಾಯಕ ಅಲ್ಲ.
 ಅಡಕೆ ಸಾಗಣೆ ಸಮಸ್ಯೆಯಿಂದ ವ್ಯಾಪಾರಸ್ಥರು, ಲಾರಿ ಮಾಲೀಕರು ಚಿಂತಿತರಾಗಿದ್ದರೆ, ಒಂದಿಷ್ಟು ಕೂಲಿ ಆಸೆಗೆ ಲಾರಿ ಚಲಾಯಿಸುವ ಚಾಲಕರೂ ಮುಂದೇನು ಎಂಬ ಆತಂಕದಲ್ಲಿದ್ದಾರೆ.

ಕಾಯೋದೆ ದೊಡ್ಡ ಕೆಲಸ
-ವಸಂತಕುಮಾರ್ ಕತಗಾಲ
ಕಾರವಾರ:
ಅಡಕೆಗೆ ಬಂಗಾರದ ರೇಟು. ಆದರೆ, ಕೃಷಿಕರಿಗೆ ಮಾತ್ರ ಸಂಭ್ರಮವಿಲ್ಲ. ಈ ದರ ಅಡಕೆ ಬೆಳೆಗಾರರನ್ನು ಅಕ್ಷರಶಃ ನಿದ್ದೆಗೆಡಿಸಿದೆ. ತೋಟದಲ್ಲಿರುವ ಅಡಕೆ ಬೆಳೆಯನ್ನು ರಕ್ಷಿಸಿಕೊಳ್ಳುವ ಹೊಸ ಸವಾಲು ಕೃಷಿಕರಿಗೆ ಎದುರಾಗಿದೆ.
ಕೆಂಪು ಅಡಕೆ ದರ ಕ್ವಿಂಟಲ್‌ಗೆ 50, 60, 70 ಹೀಗೆ ಜಿಗಿಯುತ್ತ ರು. 85 ಸಾವಿರಕ್ಕೇರಿದೆ. ಬಂಪರ್ ಬೆಲೆ ಬರುತ್ತಿದ್ದಂತೆ ಮನೆಗಳ್ಳರು, ದರೋಡೆಕೋರರು ತಮ್ಮ ದೃಷ್ಟಿಯನ್ನು ಅಡಕೆ ತೋಟದ ಮೇಲೆ ನೆಟ್ಟಿರುವುದು ಸುಳ್ಳೇನಲ್ಲ. ಈಗಾಗಲೇ ಚಿಕ್ಕಪುಟ್ಟ ಕಳ್ಳತನದ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ. ಅಡಕೆ ಇದ್ದರೂ ಸಾವಿರ, ಕದ್ದರೂ ಸಾವಿರ ಎಂಬಂತಾಗಿದೆ. ಇದರ ಅರಿವಾಗಿ ರೈತರು ಬೆಚ್ಚಿ ಬಿದ್ದಿದ್ದಾರೆ. ಮೊದಲೆಲ್ಲ ಮನೆಯಲ್ಲಿ ಇರುತ್ತಿದ್ದುದು ಅವಿಭಕ್ತ ಕುಟುಂಬ. ಮನೆ ತುಂಬ ಜನರು. ತೋಟಕ್ಕೆ ಕಾವಲು ಹಾಕಲು ಕನಿಷ್ಠ 2-3 ಜನರಾದರೂ ಇರುತ್ತಿದ್ದರು. ಆದರೆ ಈಗೆಲ್ಲ ವಿಭಕ್ತ ಕುಟುಂಬ. ಮನೆಯಲ್ಲಿ ಇರುವವರೇ ಪತಿ, ಪತ್ನಿ. ಹೆಚ್ಚೆಂದರೆ ವೃದ್ಧ ತಂದೆ, ತಾಯಿ. ಹೀಗಾದರೆ ತೋಟಕ್ಕೆ ಕಾವಲು ಇಡುವುದು ಹೇಗೆ? ಕಳ್ಳರಿಂದ ಕಾಪಾಡುವುದು ಹೇಗೆ ಎಂಬ ಕಳವಳ ಅಡಕೆ ಬೆಳೆಗಾರರನ್ನು ಕಾಡತೊಡಗಿದೆ.
ವೆನಿಲ್ಲಾಕ್ಕೂ ಕಳ್ಳರ ಕಾಟವಿತ್ತು: ಕೆಲ ವರ್ಷಗಳ ಹಿಂದೆ ವೆನಿಲ್ಲಾಕ್ಕೆ ಭಾರಿ ದರ ಬಂದಾಗ ರೈತರು ಅದನ್ನು ಕಾಯ್ದುಕೊಳ್ಳಲಾಗದೆ ಹೈರಾಣಾಗಿದ್ದರು. ಕಳ್ಳರ ಅಡಕೆ ತೋಟದಲ್ಲಿ ಹಬ್ಬಿದ ವೆನಿಲ್ಲಾ ಬಳ್ಳಿಗಳನ್ನು ಹಾಡುಹಗಲೆ ದೋಚಲಾರಂಬಿಸಿದರು. ಬಳ್ಳಿ ನೆಟ್ಟು ಆರೈಕೆ ಮಾಡಿದ ರೈತನಿಗೆ ದಕ್ಕಿದ್ದು ಕೇವಲ ಕಳ್ಳರ ಕಾಟ. ಆನಂತರ ದರವೇ ಕುಸಿದು ಬಳ್ಳಿಯನ್ನು ತೆಗೆಯಲೂ ಆಗದೆ ಚಡಪಡಿಸಿದ ಕೃಷಿಕರು ಸಾಕಷ್ಟಿದ್ದಾರೆ. ವೆನಿಲ್ಲಾ ಬೆಳೆಯ ಕರಾಳ ಅನುಭವ ರೈತರಿಗಿದೆ. ಅಡಕೆಗೆ ದರ ಬಂದಿದ್ದರಿಂದ ಅಡಕೆ ತೋಟ ಮತ್ತೆ ಕಳ್ಳರ ಆಡುಂಬೊಲವಾಗದಿದ್ದರೆ ಸಾಕು ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.
ಕೇವಲ ತೋಟದಲ್ಲಿರುವ ಬೆಳೆಯಷ್ಟೇ ಅಲ್ಲ. ಮನೆ ಪಕ್ಕದಲ್ಲಿ ಮಡಗಿರುವ ಅಡಕೆ ಚೀಲವನ್ನು ರಕ್ಷಿಸಿಕೊಳ್ಳುವುದೂ ಹೇಗೆಂಬ ಪ್ರಶ್ನೆ ಕೃಷಿಕರದು. ಬಹುತೇಕ ಕೃಷಿಕರು ಮನೆ ಒಳಗಡೆ ಅಡಕೆ ಚೀಲವನ್ನು ಸಂಗ್ರಹಿಸಿಡುವುದಿಲ್ಲ. ಮನೆ ಪಕ್ಕದಲ್ಲಿ ಚಿಕ್ಕದಾದ ಗುಡಿಸಲು ನಿರ್ಮಿಸಿ ಅದರಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಈಗ ಅದನ್ನು ಕಾಪಾಡುವುದು ಹೇಗೆಂದು ತಿಳಿಯುತ್ತಿಲ್ಲ. ಇನ್ನು ಅಡಕೆ ಬೆಳೆಗಾರರು ಇರುವುದು ಗ್ರಾಮಾಂತರ ಪ್ರದೇಶದಲ್ಲಿ. ಅಲ್ಲಿ ಪೊಲೀಸ್ ಠಾಣೆಯೂ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.