ಕೊಲ್ಲಿಬಚ್ಚಲು ಅಣೆಕಟ್ಟೆ ಭರ್ತಿ
ತ್ಯಾಗರ್ತಿ: ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಅಬ್ಬರದಿಂದ ಮಳೆ ಸುರಿಯುತ್ತಿದೆ. ಹೆಚ್ಚು ಮಳೆ ಸುರಿದ ಕಾರಣ ಆಚಾಪುರ ಗ್ರಾಪಂ ವ್ಯಾಪ್ತಿಯ ಗಿಳಾಲಗುಂಡಿ ಬಳಿ ಇರುವ ಕೊಲ್ಲಿಬಚ್ಚಲು ಅಣೆಕಟ್ಟೆ ಸೋಮವಾರ ಸಂಜೆಯಿಂದ ಭರ್ತಿಯಾಗಿ ಹೆಚ್ಚುವರಿ ನೀರು ದುಮ್ಮಿಕ್ಕಿ ಭೋರ್ಗರೆದು ಹರಿಯುತ್ತಿದೆ.
ಕೋಣೆಹೊಸೂರು ಗ್ರಾಮದವರೆಗೆ ಹಿನ್ನೀರು ಹೊಂದಿರುವ ಈ ಅಣೆಕಟ್ಟೆಗೆ ಕೊಲ್ಲಿ ಬಚ್ಚಲು ಹಳ್ಳದ ನೀರು ಪ್ರಮುಖ ಆಧಾರವಾಗಿದೆ. ಇದರಿಂದಾಗಿ ಈ ಅಣೆಕಟ್ಟೆ ಕೊಲ್ಲಿಬಚ್ಚಲು ಡ್ಯಾಂ ಎಂಬ ಹೆಸರು ಪಡೆದುಕೊಂಡಿದೆ. ಡ್ಯಾಂ ಭರ್ತಿಯಾದ ಕಾರಣ ಕಣ್ಣು ಹಾಯಿಸಿದಷ್ಟೂ ನೀರು ಕಾಣುತ್ತಿದೆ.
ಈ ಡ್ಯಾಂನ ಹೆಚ್ಚುವರಿ ನೀರು ಅರ್ಧ ಭಾಗ ಗಿಳಾಲಗುಂಡಿಯ ಅಮ್ಮನಕೆರೆ ತಲುಪಿ ಅಲ್ಲಿಂದ ಕೆರೆಹಿತ್ತಲು, ಲಕ್ಕವಳ್ಳಿಗಳಲ್ಲಿ ಕಾಲುವೆ ಮೂಲಕ ಹರಿದು ಅಂದಾಸುರದ ನವಟೂರು ಹೊಳೆ ಸೇರುತ್ತದೆ. ಇನ್ನರ್ಧ ನೀರು ತಂಗಳವಾಡಿ ಮೂಲಕ ಹೊಸಕೊಪ್ಪ ತಲುಪಿ ಆರುಕಟ್ಟಿನ ಹೊಳೆಗೆ ಸೇರಿ ಅಲ್ಲಿಂದ ಮುಂದಕ್ಕೆ ಅಂಬ್ಲಿಗೊಳ ಜಲಾಶಯ ಸೇರುತ್ತದೆ.
ಸಣ್ಣ ನೀರಾವರಿ ಯೋಜನೆಯಡಿ 2005ರಲ್ಲಿ ಪ್ರಾರಂಭಗೊಂಡ ಈ ಅಣೆಕಟ್ಟು 2008ರಲ್ಲಿ ಸಾರ್ವಜನಿಕರಿಗೆ ಬಳಕೆಗೆ ಮುಕ್ತಗೊಂಡಿತ್ತು. ಒಟ್ಟು 9ಮೀಟರ್ ಎತ್ತರ ಹಾಗೂ 62 ಮೀಟರ್ ಅಗಲದ ಈ ಅಣೆಕಟ್ಟು ಸುಂದರ ರಚನೆ ಹೊಂದಿದ್ದು 8 ಮೀಟರ್ ಅಗಲದ ವಿಸ್ತಾರದಲ್ಲಿ ನೀರು ಉಕ್ಕಿ ಹರಿಯುವ ವ್ಯವಸ್ಥೆ ಇದೆ. ಸುತ್ತಮುತ್ತಲು ಆವರಿಸಿದ ಕಾನನದ ನಡುವೆ ಇರುವ ಈ ಡ್ಯಾಂ ಸುಮಾರು 2 ಕಿ.ಮೀ.ವಿಸ್ತೀರ್ಣದ ಹಿನ್ನೀರನ್ನು ಹೊಂದಿದೆ. ಶಿವಮೊಗ್ಗ -ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಳಾಲಗುಂಡಿ ಬಸ್ನಿಲ್ದಾಣದಿಂದ ಕೇವಲ 2 ಕಿ.ಮೀ.ದೂರದಲ್ಲಿ ಈ ಡ್ಯಾಂ ಇದೆ.
ಅಣೆಕಟ್ಟೆಯ ಮೇಲ್ಭಾಗದಲ್ಲಿ ನಿಂತು ವೀಕ್ಷಿಸಲು ಅವಕಾಶವಿರುವ ಕಾರಣ ಜೋಗಕ್ಕೆ ತೆರಳುವ ಹಲವು ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಿ ನಿಸರ್ಗದ ಮಡಿಲಲ್ಲಿರುವ ಈ ಅಣೆಕಟ್ಟೆಯ ಸೊಬಗು ವೀಕ್ಷಿಸಿ ಪುಳಕಿತರಾಗುತ್ತಾರೆ. ಅಣೆಕಟ್ಟೆಯ ಸಮೀಪದವರೆಗೂ ವಾಹನದಲ್ಲಿ ತೆರಳಿ ನಂತರ ಅಣೆಕಟ್ಟೆಯ ಮೇಲ್ಭಾಗದಲ್ಲಿ ಏರಿ ನಿಂತು ವೀಕ್ಷಿಸಲು ಅವಕಾಶವಿರುವ ಕಾರಣ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

