ಬಿಜೆಪಿಗೆ ಸೋಲು ಖಚಿತ: ಕುಮಾರ್
ಶಿಕಾರಿಪುರ: ವಿಧಾನಸಭೆ ಮರುಚುನಾವಣೆಯಲ್ಲಿ ಬಿಜೆಪಿಗೆ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂದೇಶ ರವಾನೆಗೆ ಸ್ಥಳೀಯ ಅಭ್ಯರ್ಥಿ ಆಯ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಅವರ ನಿವಾಸದಲ್ಲಿ ಕಾರ್ಯಕರ್ತರು ಮುಖಂಡರ ಸಮ್ಮುಖದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಬಾರಿಯ 3 ಕ್ಷೇತ್ರದ ಉಪಚುನಾವಣೆಯನ್ನು ಪಕ್ಷ ತೀವ್ರ ರೀತಿಯಲ್ಲಿ ಪರಿಗಣಿಸಿದ್ದು ಶಿಕಾರಿಪುರದಲ್ಲಿ ಹಿಂದುಳಿದ ವರ್ಗದವರಿಗೆ ಸ್ವರ್ಧಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ರಾಜ್ಯದ ಭ್ರಷ್ಟ ಮುಖ್ಯಮಂತ್ರಿ ಎಂಬ ಹಣೆ ಪಟ್ಟಿ ಹೊತ್ತಿರುವ ಯಡಿಯೂರಪ್ಪ ಶಿವಮೊಗ್ಗದಲ್ಲಿ ಜಯಗಳಿಸಿದ್ದು ದುರಾದೃಷ್ಟ. ಜನ ಸೋಲಿಸಲು ತೀರ್ಮಾನಿಸಿದರೂ ಎಲ್ಲವೂ ವಿಪರೀತವಾಗಿ ಪುನಃ ಜಯಗಳಿಸಿದ್ದಾರೆ ಎಂದರು.
ಮತದಾರರ ಒಲವು: ಈ ಬಾರಿಯ ಚುನಾವಣೆಯನ್ನು ಎಐಸಿಸಿ, ಕೆಪಿಸಿಸಿ ಹಾಗೂ ಖುದ್ದು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು ಯಡಿಯೂರಪ್ಪನವರನ್ನು ಸ್ವಕ್ಷೇತ್ರದಲ್ಲಿ ಮಣಿಸುವ ಮೂಲಕ ಇಡೀ ದೇಶಕ್ಕೆ ಉತ್ತಮ ಸಂದೇಶ ರವಾನೆಗೆ ಹೆಚ್ಚಿನ ನಿಗಾವಹಿಸಿದ್ದಾರೆ ಎಂದ ಅವರು ಕಾಂಗ್ರೆಸ್ ಗೆಲ್ಲಿಸಲು ಮತದಾರರು ಸಿದ್ಧರಿದ್ದು ಪಕ್ಷ ಸೂಕ್ತ ಅಭ್ಯರ್ಥಿಗೆ ಅವಕಾಶ ಕಲ್ಪಿಸಿ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ ಎಂದರು.
ನಾಯಕನ ಕೊರತೆ: ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ ಮಾತನಾಡಿ, ಕಳೆದ ಬಾರಿಯ ಗ್ರಾಪಂ, ತಾಪಂ ಚುನಾವಣೆಯಲ್ಲಿ 5 ಸಾವಿರ ಅಂತರ, ಜಿಪಂನಲ್ಲಿ 10 ಸಾವಿರ, ವಿಧಾನಸಭೆಯಲ್ಲಿ 25 ಸಾವಿರ, ಲೋಕಸಭಾ ಚುನಾವಣೆಯಲ್ಲಿ 60 ಸಾವಿರ ಅಂತರಕ್ಕೆ ಪಕ್ಷ ಕುಸಿದಿದ್ದು ಇದರಿಂದಾಗಿ ತಾಲೂಕಿನಲ್ಲಿ ಪಕ್ಷ ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂದು ಸಾಬೀತಾಗಿದೆ ಎಂದರು.
ಪಕ್ಷ ಪುನರ್ ಸಂಘಟನೆಗೆ ಕರೆ: ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಮಾತನಾಡಿ, ಪಕ್ಷದ ಪುನರ್ ಸಂಘಟನೆಗೆ ತಾಲೂಕಿನ ನೇತೃತ್ವವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದ ಅವರು ತಳಮಟ್ಟದಿಂದ ಸಂಘಟಿಸುವ ಪರಿಸ್ಥಿತಿ ಉದ್ಭವಿಸಿದೆ ಎಂದರು.
ಮುಖಂಡ ಪಚ್ಚಿಗಿಡ್ಡಪ್ಪ, ರಾಮಣ್ಣ ಮತ್ತಿತರರು ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವಿರುದ್ಧ ಹಲ್ಲೆ ನಡೆಸಿ ಸುಳ್ಳು ಮೊಕದ್ದಮೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದು ಈ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಅಂದಿನ ಅಭ್ಯರ್ಥಿ ಚಕಾರ ಎತ್ತದೆ ಆತ್ಮಸ್ಥೈರ್ಯ ಕುಗ್ಗಿಸಿದ್ದು ಈ ಬಾರಿ ನಿಷ್ಠಾವಂತ ಹಿರಿಯ ಮುಖಂಡ ನಗರದ ಮಹಾದೇವಪ್ಪನವರು ಸೂಕ್ತ ಅಭ್ಯರ್ಥಿಯಾಗಿದ್ದು ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡ ತಬಲಿ ಬಂಗಾರಪ್ಪ, ಶಿವಾ ನಾಯ್ಕ್, ಸುರೇಶ್ ಧಾರವಾಡದ, ಹರೀಶ್, ಬೆಂಕಿ ಮಾಲತೇಶ್, ಸುದೀರ್, ನಗರದ ರವಿಕಿರಣ್, ಮಧು ಹುಲ್ಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

