ಶಿವಮೊಗ್ಗ

ಬೇಡಿಕೆ ಈಡೇರಿಸಲು ಆ.15ರ ಗಡುವು

Published On :

ಶಿವಮೊಗ್ಗ:  ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಕಾರ್ಯವೈಖರಿ ವಿರುದ್ಧ ಸರ್ಕಾರಿ ಸೇವೆಯಲ್ಲಿ ಇರುವ ವೈದ್ಯರು ಸಿಡಿದೆದ್ದಿದ್ದಾರೆ. ತಮ್ಮ ಬೇಡಿಕೆಗಳನ್ನು ಆ.15 ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಹೋದಲ್ಲಿ ಸೆ.30 ರಂದು ರಾಜ್ಯಾದ್ಯಂತ ಸಾಮೂಹಿಕ ರಾಜಿನಾಮೆ ಕೊಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಶಿವಪ್ರಕಾಶ್, ನಾನೇ ಸರ್ಕಾರ ಎನ್ನುವ ಹಾಗೂ ಪ್ರಜಾಪ್ರಭುತ್ವದ ಕೊಲೆ ಮಾಡುವ ಪ್ರಧಾನ ಕಾರ್ಯದರ್ಶಿ ನಮಗೆ ಬೇಡ ಎಂದು ಹೇಳಿದರು.
ವೈದ್ಯ ಸಮುದಾಯಕ್ಕೆ ಬೆಲೆ ಕೊಡದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಬೇರೆ ಇಲಾಖೆಗೆ ತಕ್ಷಣವೇ ವರ್ಗ ಮಾಡಬೇಕು. ಬಡ ಜನರ ಬಗ್ಗೆ ಕಾಳಜಿ ಇರುವ, ವೈದ್ಯರಿಗೆ ಗೌರವ ಕೊಡುವ ಸಮಾಜದ ಹಿತ ಕಾಪಾಡಬಯಸುವ ವೈದ್ಯಕೀಯ ಪದವಿ ಪಡೆದು ಐಎಎಸ್ ಮಾಡಿರುವವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬೇಕೆಂಬುದು ನಮ್ಮ ಆಗ್ರಹ ಎಂದರು.
ಜು.18 ರಂದು ಆದೇಶ ಹೊರಡಿಸಿರುವ ಹಾಲಿ ಪ್ರಧಾನ ಕಾರ್ಯದರ್ಶಿಯವರು ಇಲಾಖೆಯಲ್ಲಿ ಇರುವ ವೈದ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ. ಈ ಮೂಲಕ ಐಪಿಎಚ್‌ಎಸ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಕೇಂದ್ರ ರೂಪಿಸಿದ ನಿಯಮಾವಳಿಯಷ್ಟು ಹಾಲಿ ವೈದ್ಯರಿಲ್ಲ, ಶೇ.50 ಕ್ಕಿಂತ ಹೆಚ್ಚು ಸ್ಪೆಷಲಿಸ್ಟ್ ವೈದ್ಯರ ಕೊರತೆ ಇದೆ ಎಂದ ಅವರು, ವೈದ್ಯರ ಹುದ್ದೆ ಕಡಿತಗೊಳಿಸುವ ಮೂಲಕ ಇರುವ ವೈದ್ಯರಿಗೆ ಕೆಲಸ ಒತ್ತಡ ಹೆಚ್ಚಿಸಿ ಕೆಲಸದಿಂದ ದೂರ ಉಳಿಯುವಂತೆ ಮಾಡುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ಸಾರ್ವಜನಿಕರಿಗೆ ತೊಂದರೆ ಆಗಬಹುದು ಎಂದು ವಿಶ್ಲೇಷಿಸಿದರು.
ಆರೋಗ್ಯ ಇಲಾಖೆಗೆ ಸೇರಿದ ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜನ್ನಾಗಿ ಮಾಡಿದಾಗ ಇಲಾಖೆಯಲ್ಲಿ ಇರುವ ಸ್ಪೆಷಲಿಸ್ಟ್‌ಗಳು ತಾಲೂಕಿನಲ್ಲೇ ನಿವೃತ್ತಿ ಆಗುವಂತೆ ಆಯಿತು. ಒಂದೇ ಸ್ಪೆಷಾಲಿಟಿ ಆಗಿದ್ದರೂ ವೇತನ ತಾರತಮ್ಯ ಇರುವುದು ಆರೋಗ್ಯ ಇಲಾಖೆಯ ವೈದ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅನುಭವ ಹಾಗೂ ಹಿರಿತನಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯರ ಯೋಗ್ಯತೆ ಹಾಗೂ ಅರ್ಹತೆಗೆ ತಕ್ಕ ಹಾಗೆ ವೇತನಕೊಟ್ಟು, ಎಲ್ಲಾ ಸ್ಪೆಷಾಲಿಟಿಗಳಿಗೂ ಯಂತ್ರೋಪಕರಣ ಹಾಗೂ ಒಳ್ಳೆಯ ಕೆಲಸ ಮಾಡುವ ವಾತಾವರಣ ಕಲ್ಪಿಸಿದರೆ ಎಲ್ಲಾ ಹುದ್ದೆಗಳು ಭರ್ತಿಯಾಗುತ್ತದೆ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ. ಕೆಲ ದಿನಗಳ ಹಿಂದೆ ಆರೋಗ್ಯ ಮಂತ್ರಿಗಳು ವೈದ್ಯರಿಗೆ ಒಂದೂವರೆ ಲಕ್ಷ ವೇತನ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಆದರೆ, ಈವರೆಗೆ ಪ್ರಕ್ರಿಯೆಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ಆಸ್ಪತ್ರೆ ವ್ಯವಸ್ಥೆ ಸುಧಾರಣೆ, ವೇತನದಲ್ಲಿ ಏರಿಕೆ ಸೇರಿದಂತೆ ಹುದ್ದೆ ಕಡಿತ ಕೈಬಿಡುವ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಹರ್ಷವರ್ಧನ್, ಡಾ. ತಿಪ್ಪೇಶ್, ಡಾ. ನಾಗರಾಜ ನಾಯ್ಕ, ಡಾ.ರಂಗಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.