ಶಿವಮೊಗ್ಗ

ಜಿಲ್ಲಾ ಕೇಂದ್ರಗಳಲ್ಲಿ ಕನ್ನಡಭವನಕ್ಕೆ ನಿವೇಶನ, ಅನುದಾನ

Published On :

ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಜೂ.2
ಕನ್ನಡ ಸಾಹಿತ್ಯ ಪರಿಷತ್ಗೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ನಿವೇಶನ ಹಾಗೂ ಬೇಕಾದ ಅನುದಾನವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ ಕೈಗೊಂಡಿದೆ.
ಸೋಮವಾರ ಸಮ್ಮೇಳನದ ಕೊನೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅದೇ ರೀತಿ, ಸಾಹಿತ್ಯ ಪರಿಷತ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರದ ಪ್ರಸಾರ ಸಾಮರ್ಥ್ಯ, ಇಲ್ಲಿರುವ ಎಫ್ಎಂ ಕೇಂದ್ರದ ಸಾಮರ್ಥ್ಯವನ್ನು ಹೆಚ್ಚಳ ಮಾಡಬೇಕೆಂದು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.
ಲೇಖಕರು ಒಗ್ಗಟ್ಟಾಗಬೇಕು: ಒಬ್ಬ ಲೇಖಕ ತಮ್ಮ ಮೂಗಿನ ನೇರಕ್ಕೆ ಮಾತನಾಡಿಲ್ಲ ಎಂಬ ಕಾರಣಕ್ಕೆ ಆತನನ್ನು ರಸ್ತೆಗೆ ಎಳೆಯುವ ಘಟನೆಗಳು ನಡೆಯುತ್ತಿದ್ದು, ಇದರ ವಿರುದ್ಧ ಎಲ್ಲಾ ಲೇಖಕರು ಒಗ್ಗಟ್ಟಾಗಬೇಕೆಂದು ಹಿರಿಯ ಸಾಹಿತಿ ನಾ. ಡಿಸೋಜ ಸಮ್ಮೇಳನದ ಸಮಾರೋಪದಲ್ಲಿ ಕರೆ ನೀಡಿದರು.
ಸಂವಿಧಾನ ಎಲ್ಲರಿಗೂ ಒಂದಲ್ಲ ಒಂದು ರೀತಿಯ ವಿಶೇಷ ಹಕ್ಕನ್ನು ನೀಡಿದೆ. ಅದರಂತೆ ಲೇಖಕರಿಗೂ ಅಂತಹ ಹಕ್ಕು ಇದೆ ಎಂಬುದನ್ನು ಮರೆತು ಕೆಲವರು ಲೇಖಕರ ತೇಜೋವಧೆ ಮಾಡುತ್ತಿದ್ದಾರೆಂದರು.
ಸಂವಿಧಾನದಲ್ಲಿ ಅಭಿಪ್ರಾಯ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು. ಅದನ್ನು ಬಿಟ್ಟು ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ ಎಂದ ಅವರು, ಈ ಬೆಳವಣಿಗೆ ಮುಂದುವರಿದರೆ ಲೇಖಕನಾದವನು ಒಂದು ಅಕ್ಷರ ಬರೆಯುವುದು ಕಷ್ಟವಾಗುತ್ತದೆ. ಇದರ ವಿರುದ್ಧ ಎಲ್ಲಾ ಲೇಖಕರು ಎಚ್ಚೆತ್ತುಕೊಳ್ಳಬೇಕೆಂದರು.
ಕೆಲವು ಲೇಖಕರು ಆಳುವವರೊಂದಿಗೆ ರಾಜಿ ಮಾಡಿಕೊಂಡು ವಸೂಲಿ ಬಾಜಿ ಮಾಡುತ್ತಿದ್ದಾರೆ. ಇಂತಹ ಲೇಖಕರು ಕೂಡ ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ಆಳುವವರ ಪರವಾಗಿ ನಿಂತು ಅವರು ಹೇಳಿದಂತೆ ಮಾಡುವುದು ಸಮಾಜಕ್ಕೆ ಮಾಡುವ ದ್ರೋಹ ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಕನ್ನಡದ ಬಳಕೆ ಕ್ರಮೇಣ ಹೆಚ್ಚಾಗುತ್ತಿದೆ. ನ್ಯಾಯಾಂಗದಲ್ಲಿಯೂ ಇದರ ಪ್ರಮಾಣ ಹೆಚ್ಚಾಗಬೇಕು ಎಂದರು.
ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ದಂಪತಿ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ್ ಆರಾಧ್ಯ, ಮಾರ್ಕ್ಸ್ ಡಿಸಿಲ್ವಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.