ಶಿವಮೊಗ್ಗ

ಅರಣ್ಯ ಅತಿಕ್ರಮಣ ತಡೆಯಲು ಪರಿಣಾಮಕಾರಿ ಕ್ರಮಕ್ಕೆ ಆಗ್ರಹ

Published On :

ವೃಕ್ಷಲಕ್ಷ ಆಂದೋಲನದಿಂದ ಸಿಎಂಗೆ ಹಕ್ಕೊತ್ತಾಯ
ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಅರಣ್ಯನಾಶ, ಹೊಸ ಅರಣ್ಯ ಅತಿಕ್ರಮಣ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ವೃಕ್ಷಲಕ್ಷ ಆಂದೋಲನ, ಪರಿಸರ ದಿನದ ಹಿನ್ನೆಲೆಯಲ್ಲಿ 10 ಅಂಶಗಳ ಹಕ್ಕೊತ್ತಾಯ ಮಾಡಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ.
ಕರ್ನಾಟಕದ ಪಶ್ಚಿಮಘಟ್ಟದಿಂದ ಪರಿಸರ ಸಂಘಟನೆಗಳ ಪರವಾಗಿ ತಮ್ಮ ಗಮನ ಸೆಳೆಯುವುದಾಗಿ ತಿಳಿಸಿರುವ ಸಂಘಟನೆ, ಅಗತ್ಯ ಕ್ರಮಕ್ಕೆ ಕೋರುತ್ತೇವೆ ಎಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಪ್ರಮುಖ ಹಕ್ಕೊತ್ತಾಯಗಳು: ಪಶ್ಚಿಮಘಟ್ಟದ ನದಿ, ಉಪನದಿಗಳಿಂದ ಅಕ್ರಮವಾಗಿ ಮರಳು ತೆಗೆಯುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಅತ್ಯವಶ್ಯ. ನದೀ ಪಾತ್ರ ನಾಶ, ನೀರಿನ ಹರಿವು ನಿಲ್ಲುವುದು, ಜೀವವೈವಿಧ್ಯ ನಾಶ ಮುಂತಾದ ದುಷ್ಟರಿಣಾಮ ತಡೆಯಲು ಘಟ್ಟದ ನದಿಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು.
- ಪಶ್ಚಿಮಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಯ ದಿಕ್ಕು ತಿರುಗಿಸುವ ಎತ್ತಿನಹೊಳೆ ಯೋಜನೆಯ ಪುನರ್ ವಿಮರ್ಶೆ ಅತ್ಯಗತ್ಯ. ಸಮಗ್ರ ಪರಿಸರ ಅರಣ್ಯ ಅಧ್ಯಯನ ನಡೆಸಬೇಕು. ತಾಂತ್ರಿಕ ವರದಿಗಳನ್ನು ಬಹಿರಂಗ ಪಡಿಸಬೇಕು. ಅರಣ್ಯ ಪರವಾನಗಿ ಪಡೆಯದ ಎತ್ತಿನಹೊಳೆ ಯೋಜನೆ ಕಾಯ್ದೆ ಬಾಹಿರವಾಗುತ್ತದೆ.
- ಮಲೆನಾಡಿನ ರೈತರಿಗೆ ಮನೆ ಬಳಕೆ ಸೋಲಾರ್ ಯೋಜನೆಗೆ ಶೇ.75 ಸಬ್ಸಿಡಿ ನೀಡಬೇಕು.
- ಪಶ್ಚಿಮಘಟ್ಟದ ವನವಾಸಿ, ರೈತರ ಜೊತೆ ಅರಣ್ಯ ಇಲಾಖೆ ಜನಸಂಪರ್ಕ ಸಭೆ ನಡೆಸಬೇಕು. ಹಿಂದಿನ ಸರ್ಕಾರ ಅರಣ್ಯ ಜನ ಸಂಪರ್ಕ ಸಭೆಗಳನ್ನು ರೇಂಜ್ ವಲಯ ಮಟ್ಟದಲ್ಲಿ ನಡೆಸಿತ್ತು. ಇದರಿಂದ ಅರಣ್ಯ ರಕ್ಷಣೆ ಅಭಿವೃದ್ಧಿಗೆ ಜನರ ಸಹಕಾರ ಪಡೆಯಲು ಸಾಧ್ಯವಾಗುತ್ತದೆ. ಅರಣ್ಯ ಮಧ್ಯೆ ಇರುವ ಜನರ ಸಂಕಷ್ಟ ಪರಿಹಾರ ಸಾಧ್ಯವಾಗುತ್ತದೆ.
-ಕಾನು  ದೇವರ ಕಾನು ಸಂರಕ್ಷಣಾ ಯೋಜನೆಗಳನ್ನು ಹಿಂದಿನ ಸರ್ಕಾರ ಜಾರಿಗೆ ತಂದಿತ್ತು. ತಮ್ಮ ಸರ್ಕಾರ ಈ ಯೋಜನೆಗಳನ್ನು ನಿಲ್ಲಿಸಿದೆ. ಅರಣ್ಯ ಇಲಾಖೆ ಪುನಃ ಈ ಯೋಜನೆಗಳಿಗೆ ಅನುದಾನ ನೀಡಬೇಕು.
-ಅರಣ್ಯ ಅಭಿವೃದ್ಧಿ ಯೋಜನೆಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಬೇಕು. ಪ್ರಾಣಿಗಳಿಗೆ ಆಹಾರ ಸಿಗಲು ಜೇನು ಸಂತತಿ ಉಳಿಸಲು ಹಣ್ಣಿನ ವಿವಿಧ ಸ್ಥಾನೀಯ ಜಾತಿಯ ಗಿಡಮರ ಬೆಳೆಸಬೇಕು. ಅಕೇಶಿಯಾ, ನರ್ಸರಿ ಪಶ್ಚಿಮಘಟ್ಟದಲ್ಲಿ ಬೇಡ.
- ಗ್ರಾಮ ಅರಣ್ಯ ಸಮಿತಿ ಮೂಲಕ ಜನರ ಪಾಲ್ಗೊಳ್ಳುವಿಕೆ ಹೆಚ್ಚಲು ವಿಶೇಷ ಯೋಜನೆ ಪ್ರಕಟಿಸಬೇಕು.
- ಅಡುಗೆ ತ್ಯಾಜ್ಯದಿಂದ ಬಯೋಗ್ಯಾಸ್ ತಯಾರಿಸುವ ಘಟಕ ಸ್ಥಾಪಿಸಲು ಎಲ್ಲಾ ಪಟ್ಟಣ, ನಗರ ಮಹಾನಗರಗಳಲ್ಲಿ ಯೋಜನೆ ರೂಪಿಸಬೇಕು. ನಗರ ತ್ಯಾಜ್ಯ ಕಡಿಮೆ ಮಾಡಲು, ಅಡುಗೆ ಇಂಧನ ಸಿಗುವ ಬಯೋಗ್ಯಾಸ್ ಯೋಜನೆ ಬಹು ಉಪಯುಕ್ತ ಯೋಜನೆ. ಹೊಟೆಲ್‌ಗಳು, ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಬಯೋಗ್ಯಾಸ್ ಅಳವಡಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ನೀಡುವಂತಾಗಬೇಕು.
- ಪಶ್ಚಿಮಘಟ್ಟದ ಪರಿಸರ ಧಾರಣ ಸಾಮರ್ಥ್ಯ ಅಧ್ಯಯನಕ್ಕೆ ಸರ್ಕಾರ ಮುಂದಾಗಬೇಕು. ಈಗಾಲೇ ಉ.ಕ ಜಿಲ್ಲೆಯಲ್ಲಿ ಇಂತಹ ಸಮಗ್ರ ಪರಿಸರ ಅಧ್ಯಯನವನ್ನು ನಡೆಸಲು ಸರ್ಕಾರವೇ ಆದೇಶ ನೀಡಿತ್ತು. ಭಾರತೀಯ ವಿಜ್ಞಾನ ಸಂಸ್ಥೆ ಮೂಲಕ ಈ ಅಧ್ಯಯನ ನಡೆದಿದೆ. ಇದೇ ಮಾದರಿಯಲ್ಲಿ ಪಶ್ಚಿಮಘಟ್ಟದಲ್ಲಿ ಇಂತಹ ಸಮಗ್ರ ಅಧ್ಯಯನ ನಡೆಸಬೇಕು ಎಂದು ಆಂದೋಲನದ ಸಂಚಾಲಕ ಬಿ.ಎಚ್. ರಾಘವೇಂದ್ರ, ಅಧ್ಯಕ್ಷ ಅನಂತ ಹೆಗಡೆ ಆಶೀಸರ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.