ಮಹಿಳೆ, ಮಕ್ಕಳ ರಕ್ಷಣೆಗೆ ಪ್ರಾಸಿಕ್ಯೂಶನ್ ಬೋರ್ಡ್
ಶಿವಮೊಗ್ಗ: ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ಸಿಗಬೇಕು ಹಾಗೂ ಅಂತಹ ದೌರ್ಜನ್ಯಗಳ ವಿರುದ್ಧದ ಪ್ರಕರಣಗಳು ತ್ವರಿತವಾಗಿ ತನಿಖೆ ನಡೆಸಲು ಅನುಕೂಲವಾಗಲೆಂದು ಪೊಲೀಸ್ ಇಲಾಖೆಯಲ್ಲಿ ವಿಚಾರಣೆ ಮಂಡಳಿಯೊಂದನ್ನು (ಪ್ರಾಸಿಕ್ಯೂಷನ್ ಬೋರ್ಡ್) ರಚಿಸುವ ಕುರಿತ ಪ್ರಕ್ರಿಯೆ ನಡೆದಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಮಹಿಳೆ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅನುಕೂಲವಾಗಿ ಪ್ರಾಸಿಕ್ಯೂಷನ್ ಬೋರ್ಡ್ ರಚಿಸುವ ಚಿಂತನೆ ಇದೆ ಎಂದು ನುಡಿದರು.
ಈ ವಿಚಾರಣಾ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೂಕ್ತ ತರಬೇತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ರಾಜ್ಯಾದ್ಯಂತ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ತಾವು 22 ಜಿಲ್ಲೆಗಳಿಗೆ ಭೇಟಿ ನೀಡಿದ್ದು ಇಲಾಖೆಯನ್ನು ಬಲಪಡಿಸಿ ಜನರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ 35 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಹಣಕಾಸು ಇಲಾಖೆ ಒಪ್ಪಿಗೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಮಿತಿ ಮೂಲಕವೇ ವರ್ಗಾವಣೆ: ಪೊಲೀಸ್ ಇಲಾಖೆಯ ವರ್ಗಾವಣೆ ಪ್ರಕ್ರಿಯೆ ಇಲಾಖಾಧಿಕಾರಿಗಳ ನೇತೃತ್ವದ ಸಮಿತಿ ಮೂಲಕವೇ ನಡೆಯುತ್ತಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದ ಅವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಶಿಫಾರಸು ಕೂಡ ಸಮಿತಿಯೇ ನೀಡಲಿದ್ದು ಮುಖ್ಯಮಂತ್ರಿಗಳ ವಿವೇಚನೆಯಂತೆ ನಡೆಯಲಿದೆ ಎಂದರು.
ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಿದೆ. ಉತ್ತಮವಾಗಿ ಕೆಲಸ ನಿರ್ವಹಿಸುವ ಅಧಿಕಾರಿಯನ್ನು ಒಂದೇ ಕಡೆಯಲ್ಲಿ ಎರಡು ಮೂರು ವರ್ಷ ಮುಂದುವರಿಸುತ್ತದೆ. ಚೆನ್ನಾಗಿ ಕೆಲಸ ನಿರ್ವಹಿಸಲಿಲ್ಲ ಎಂದಾದರೆ ಒಂದು ವರ್ಷದ ನಂತರ ಬದಲಿಸುತ್ತದೆ ಎಂದು ಹೇಳಿದರು.
ಸವಾಲು: ಎಡಿಜಿಪಿ ರವೀಂದ್ರ ಪ್ರಕರಣದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ. ಸಿಐಡಿ ವರದಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನಂತರ ನಮ್ಮನ್ನು ಪ್ರಶ್ನಿಸಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಗೃಹ ಸಚಿವರು ಸವಾಲು ಹಾಕಿದರು.
ಕಾಫಿಶಾಪ್ನಲ್ಲಿ ಫೋಟೋ ತೆಗೆದಿದ್ದಾರೆ ಎನ್ನಲಾದ ಮೊಬೈಲ್ನ್ನು ಫಾರಿನ್ಸೀಕ್ ರಿಪೋರ್ಟ್ ಬರಬೇಕಾಗಿದೆ. ಇಲ್ಲಿ ಸೂಕ್ತ ತಂತ್ರಜ್ಞಾನ ಇಲ್ಲದ ಕಾರಣ ಮೊಬೈಲನ್ನು ಅಧಿಕಾರಿಯೊಂದಿಗೆ ಗುಜರಾತಿಗೆ ತೆಗೆದುಕೊಂಡು ಹೋಗಿದ್ದಾರೆ. 4-5 ದಿನದಲ್ಲಿ ವರದಿ ಬರುತ್ತದೆಂದು ಹೇಳಿದ್ದಾರೆ. ನಾವೂ ತರಾತುರಿ ಮಾಡುತ್ತಿಲ್ಲ. ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಸಿಐಡಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಸ್.ಪರಶಿವಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ದಯಾಳು ಉಪಸ್ಥಿತರಿದ್ದರು.
ಪ್ರಧಾನಿಯವರು ಈಗ ಹೊಸದಾಗಿ ಚುನಾಯಿತರಾಗಿದ್ದಾರೆ. ಯಾವ ರೀತಿ ಆಡಳಿತ ನಡೆಸಬೇಕು, ಯಾರಿಗೆ ಅಧಿಕಾರ ಕೊಡಬೇಕೆಂಬುದು ಅವರಿಗೆ ಬಿಟ್ಟದ್ದು. ನಾನು ರಾಜ್ಯದ ಗೃಹ ಸಚಿವ. ನಮಗೆ ನಮ್ಮದೇ ಆದ ಮಾರ್ಗವಿದೆ. ಅವರಿಗೆ ಅವರದು. ಅವರ ಮಾರ್ಗ ಕಾದು ನೋಡೋಣ. ಅವರ ಮಾರ್ಗ ಚೆನ್ನಾಗಿ ನಡೆದರೆ ಅದು ಅನುಸರಿಸುವುದು ತಪ್ಪಿಲ್ಲ.
- ಕೆ.ಜೆ.ಜಾರ್ಜ್, ಗೃಹ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

