ಇಂಗ್ಲಿಷ್ ವ್ಯಾಮೋಹ ಬಿಡಿ ಕನ್ನಡಾಭಿಮಾನ ಬೆಳೆಸಿಕೊಳ್ಳಿ
ಕ.ಪ್ರ. ವಾರ್ತೆ, ಹೊಸನಗರ , ಜೂ.15
ವಿದ್ಯಾಭ್ಯಾಸ ಹೆಚ್ಚಾದಂತೆ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಬೆಳೆಯುತ್ತಿರುವುದು ದುರ್ದೈವ. ತಾಲೂಕು ಮಟ್ಟದಲ್ಲೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದು ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ ಕೆಲಸವಾಗಬೇಕು. ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ವಿದ್ಯಾಸಂಘದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಮಹಾವೇದಿಕೆಯಲ್ಲಿ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಸಾಪ ತಾಲೂಕು ಘಟಕಕ್ಕೆ ನಿವೇಶನ ನೀಡುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಗೋಡು ತಿಮ್ಮಪ್ಪ, ಕನ್ನಡದ ಕೆಲಸ ತಾಯಿ ಸೇವೆ ಮಾಡಿದಂತೆ. ಕಸಾಪದಿಂದ ಅರ್ಜಿ ನೀಡಿ ವರ್ಷಗಟ್ಟಲೆ ಆಗಿದ್ದರೂ ಇನ್ನೂ ಸುಮ್ಮನೆ ಕುಳಿತಿದ್ದೀರಲ್ಲಾ... ನಿಮಗೆ ಪ್ರಜ್ಞೆ ಇದೆಯೇನ್ರೀ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ಪಾರದರ್ಶಕ ಆಡಳಿತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದನ್ನು ತಳಮಟ್ಟದಲ್ಲಿ ಅಳವಡಿಸಿಕೊಳ್ಳಲಿ ಎಂದು ನಾನು ಅವರ ಭಾಷಣದ ಪ್ರತಿಯನ್ನು ಎಲ್ಲಾ ತಾಲೂಕು ಅಧಿಕಾರಿಗಳಿಗೂ ಕಳಿಸಿಕೊಡುವಂತೆ ಪತ್ರ ಬರೆದಿದ್ದೆ. ಆದರೆ ಯಾವ ಅಧಿಕಾರಿಯೂ ಅದನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ ಶೇ.85ರಷ್ಟಿರುವ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ತೋರಿ ಶೇ.15 ರಷ್ಟಿರುವ ಅದರಲ್ಲೂ ವ್ಯಾಪಾರಿ ಮನೋಭಾವ ಹೊಂದಿರುವ ಖಾಸಗಿ ಶಾಲೆಗಳಿಗೆ ಪೋಷಕರ ಬೆಂಬಲ ಹೆಚ್ಚುತ್ತಿದೆ. ನಮ್ಮ ಪರಿಸರ, ಭಾಷೆಯನ್ನು ನಾವೇ ರಕ್ಷಿಸದಿದ್ದರೆ ಇನ್ಯಾರು ರಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಾಹಿತಿ ಡಾ.ಪದ್ಮಪ್ರಸಾದ್ ಚಾಲನೆ ನೀಡಿದರು. ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಮಾಂಜೇಕರ್, ನಾಡಧ್ವಜವನ್ನು ಪಪಂ ಅಧ್ಯಕ್ಷ ಶ್ರೀಪತಿರಾವ್ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಧಾರವಾಡದ ದ.ರಾ.ಬೇಂದ್ರೆ ಪ್ರತಿಷ್ಠಾನ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಪುಸ್ತಕ ಸಂಸ್ಕೃತಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಪದ್ಮಪ್ರಸಾದ್, ಜಿಪಂ ಸದಸ್ಯರಾದ ಶುಭಾ ಕೃಷ್ಣಮೂರ್ತಿ, ಜ್ಯೋತಿ ಚಂದ್ರಮೌಳಿ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್, ಪಪಂ ಅಧ್ಯಕ್ಷ ಎಚ್.ಎನ್.ಶ್ರೀಪತಿರಾವ್, ತಹಸೀಲ್ದಾರ್ ವಿನಾಯಕ ಲಾಂಜೇಕರ್, ಬಿಇಒ ವೀರಭದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷ ಕೆಸಿನಮನೆ ರತ್ನಾಕರ್ ಉಪಸ್ಥಿತರಿದ್ದರು.
ಎಲ್.ಕೆ.ಮುರಳೀಧರ ಚಿತ್ತಾರ ಸ್ವಾಗತಿಸಿದರು. ಎ.ವಿ.ಮಲ್ಲಿಕಾರ್ಜುನ್ ವಂದಿಸಿದರು, ಕಾರ್ಯದರ್ಶಿ ಗುರುಮೂರ್ತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

