ಕೆರೆಗಳ ಒತ್ತುವರಿ ತೆರವು ಮುಖ್ಯಾಧಿಕಾರಿಗೆ ಮನವಿ
ಶಿಕಾರಿಪುರ: ಪಟ್ಟಣ ವ್ಯಾಪ್ತಿಯ ಹಲವು ಪುರಾತನ ಕೆರೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಲಿನಗೊಳ್ಳುವುದರ ಜತೆಗೆ ಒತ್ತುವರಿ ಕೂಡಾ ಆಗುತ್ತಿವೆ. ಇನ್ನಾದರೂ ಕೆರೆಗಳನ್ನು ಸಂರಕ್ಷಿಸಿ ಸಾರ್ವಜನಿಕರು, ಜನಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಜೆಡಿಎಸ್ನಿಂದ ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಜೆಡಿಎಸ್ ಮುಖಂಡ ಎಚ್.ಟಿ ಬಳಿಗಾರ್ ಮಾತನಾಡಿ, ಪಟ್ಟಣದ ಮಾಸೂರು ರಸ್ತೆ ಬಲಭಾಗದಲ್ಲಿನ ಕಪ್ಪೆಹೊಂಡ ಅಂದಾಜು 30 ಗುಂಟೆ ವಿಸ್ತೀರ್ಣದ ಕೆರೆಯಾಗಿದ್ದು, ಹಲವು ವರ್ಷಗಳಿಂದ ಕೆರೆಯ ನೀರು ಶುದ್ಧವಾಗಿ ಜನಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿತ್ತು.
ಇತ್ತೀಚಿನ ದಿನದಲ್ಲಿ ಕೆರೆಗೆ ಸಮೀಪದ ಜಯನಗರ ಮತ್ತಿತರ ಬಡಾವಣೆಯ ತ್ಯಾಜ್ಯ ಮಿಶ್ರಿತ ಕೊಳಚೆ ನೀರು ಹಾಗೂ ಕೆರೆಯ ಬಳಿ ಆರಂಭವಾಗಿರುವ ಶುಂಠಿ ಸ್ವಚ್ಚಗೊಳಿಸುವ ಯಂತ್ರದ ಬೃಹತ್ ಪ್ರಮಾಣದ ಕಲುಷಿತ ನೀರು ಕೆರೆಗೆ ಸೇರ್ಪಡೆಗೊಳ್ಳುತ್ತಿದೆ ಎಂದ ಅವರು ಇದರಿಂದಾಗಿ ಕೆರೆ ಹೂಳು ತುಂಬಿಕೊಂಡು ಸಂಪೂರ್ಣ ಮಲಿನವಾಗುತ್ತಿದೆ ಎಂದರು.
ಶುಂಠಿ ಸ್ವಚ್ಚತಾ ಘಟಕದಿಂದ ಮಾಸೂರು ರಸ್ತೆಯಲ್ಲಿ ಸಂಚಾರಕ್ಕೆ ಧಕ್ಕೆಯಾಗಿ ಇತ್ತೀಚಿನ ದಿನದಲ್ಲಿ ಅಪಘಾತ ಸಂಭವಿಸಿದ್ದು ಈ ಕೂಡಲೇ ಶುಂಠಿ ಸ್ವಚ್ಚತಾ ಘಟಕವನ್ನು ಸ್ಥಳಾಂತರಗೊಳಿಸಿ ಸಂಚಾರಕ್ಕೆ ಹಾಗೂ ಕೆರೆಯ ಸ್ವಚ್ಚತೆ ಕಡೆಗೆ ಗಮನ ಹರಿಸುವಂತೆ ಅವರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಪುರಸಭಾ ಮುಖ್ಯಾಧಿಕಾರಿ ಮನೋಹರ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅಂದಾಜು 24 ಕೆರೆಗಳಿದ್ದು ಈಗಾಗಲೇ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪುರಸಭಾದ್ಯಕ್ಷೆ ಗೌರಮ್ಮ ಉಪಾಧ್ಯಕ್ಷ ಸೈಯದ್ಪೀರ್, ಸದಸ್ಯ ಪಾಲಾಕ್ಷಪ್ಪ ಇದ್ದರು. ಜೆಡಿಎಸ್ ನಗರಾಧ್ಯಕ್ಷ ಮಲ್ಲೇಶಪ್ಪ, ಜಯಾನಾಯ್ಕ್, ಪಾರಿವಾಳದ ರಾಜಣ್ಣ, ಭೀಮಪ್ಪ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

