ಕಾಸು ನೀಡದೇ ಕಸ ರಸ್ತೆಗೆಸೆವ ಜನ
ಭದ್ರಾವತಿ: ಕೈಗಾರಿಕಾ ನಗರಿ ಭದ್ರಾವತಿಯಲ್ಲಿ ನಗರಸಭೆ, ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಘನ ತ್ಯಾಜ್ಯ ವಿಲೇವಾರಿ ಬಗ್ಗೆ ತೆಗೆದುಕೊಂಡಿರುವ ಅನೇಕ ಕ್ರಮಗಳ ಫಲವಾಗಿ ಕಸದ ಸಮಸ್ಯೆ ಕಡಮೆಯಾಗಿದ್ದರೂ ಕಸ ವಿಲೇವಾರಿ ಶುಲ್ಕ ಪಾವತಿಸದೇ ಮನೆಗಳ ಕಸವನ್ನು ರಸ್ತೆ ಬದಿಗೆ ಎಸೆಯುವ ಪರಿಪಾಠ ಮಾತ್ರ ಇನ್ನೂ ಮುಂದುವರೆದಿರುವುದು ನಗರಸಭೆಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿರುವುದರೊಂದಿಗೆ ಮೈಸೂರು ಕಾಗದ ಕಾರ್ಖಾನೆ ತನ್ನ ನಗರಾಡಳಿತ ಪ್ರದೇಶ ಕಾಗದ ನಗರದಲ್ಲಿ ಕಸ ಸಂಗ್ರಹಣೆಗಾಗಿ ವಿಶೇಷ ವಾಹನ ನೇಮಿಸಿ ಅದರಲ್ಲಿ ಮನೆಗಳ ತ್ಯಾಜ್ಯವನ್ನು ಸಂಗ್ರಹಣೆ ಮಾಡುವ ಪ್ರಕ್ರಿಯೆಗೆ ಇತ್ತೀಚೆಗೆ ಪ್ರಾರಂಭಿಸಿದೆ. ವಿಐಎಸ್ಎಲ್ ನಗರಾಡಳಿತ ಪ್ರದೇಶ ಸಹ ಇದನ್ನು ಅನುಕರಿಸ ಬೇಕಾಗಿದೆ.
ಭದ್ರಾವತಿ ನಗರದಲ್ಲಿ ನಗರಸಭೆ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಪ್ರತಿ ನಿತ್ಯ 51.7 ಟನ್ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಹೊಟೇಲ್, ಮಾಂಸದ ಅಂಗಡಿಗಳು ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆಯಲ್ಲಿ ನಗರಸಭೆಯೊಂದಿಗೆ ಸಹಕರಿಸುತ್ತಿದ್ದಾರೆ.ನರ್ಸಿಂಗ್ ಹೋಮ್ಗಳ ತ್ಯಾಜ್ಯವನ್ನು ಶುಶೃತಾ ಸಂಸ್ಥೆಯವರು ಸಂಗ್ರಹಿಸಿ ಕೊಂಡೊಯ್ಯುತ್ತಿದ್ದಾರೆ.
20 ಎಕರೆ ಜಾಗದಲ್ಲಿ: ತ್ಯಾಜ್ಯ ವಿಲೇವಾರಿಗೆ ನಗರಸಭೆಯವರು ಪಟ್ಟಣದಿಂದ ಸುಮಾರು 6 ಕಿ.ಮೀ. ದೂರದ ಹಿರಿಯೂರು ಬಳಿ ಸುಮಾರು 20 ಎಕರೆ ಪ್ರದೇಶದಲ್ಲಿ ನೆಲ ಭಾಗ ಜಾಗದಲ್ಲಿ ದೊಡ್ಡ ಗುಂಡಿಗಳನ್ನು ತೋಡಿ ಕಂಟೈನರ್ಗಳಿಂದ ಸಂಗ್ರಹಿಸಿದ ಕಸವನ್ನು ಇಲ್ಲಿಗೆ ಲಾರಿಗಳಲ್ಲಿ ತಂದು ಹಾಕುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಿ ಗೊಬ್ಬರ ತಯಾರಿಸುವ ಯೋಜನೆ ಸಹ ಮಾಡಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳ ಕಸ ಸಂಗ್ರಹಿಸಲು ನಗರಸಭೆಯವರು ಸ್ತ್ರೀಶಕ್ತಿ ಸಂಘಗಳ ಮೂಲಕ ಆಟೋ ಟಿಪ್ಪರ್ನಲ್ಲಿ ಕಸ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಿದ್ದರು. ಪಟ್ಟಣದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಕಸ ಸಂಗ್ರಹಣೆ ಮಾಡುವುದನ್ನು ಪರಿಣಾಮಕಾರಿಯಾಗಿ ಮಾಡಿದರಾದರೂ ಕೆಲ ಮನೆಗಳವರು ಸರಿಯಾಗಿ ತಿಂಗಳ ಕಸ ಸಂಗ್ರಹಣೆ ಶುಲ್ಕ ನೀಡದ ಕಾರಣ ವೆಚ್ಚ ತೂಗಿಸುವುದು ಕಷ್ಟವಾಗಿ ಕಸ ಸಂಗ್ರಹಣೆ ಮಾಡುವುದನ್ನು ನಿಲ್ಲಿಸಿದರು.
ಶಿವಮೊಗ್ಗದ ಏಜೆನ್ಸಿಯೊಂದು ಆಟೋ ಟಿಪ್ಪರ್ ಮೂಲಕ ಕಸ ಸಂಗ್ರಹಣೆ ಮಾಡುವ ಪ್ರಕ್ರಿಯೆಗೆ ಪ್ರಯೋಗಾತ್ಮಕ ಚಾಲನೆ ನೀಡಿತು. ಇವರು ಸಹ ಒಂದು ತಿಂಗಳು ಹಳೇನಗರದ ಕೆಲ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ಕಸ ಸಂಗ್ರಹಣೆಗೆ ಮುಂದಾದರು.
ಶುಲ್ಕ ನೀಡದ ನಿವಾಸಿಗಳು: ಇವರಿಗೂ ಮನೆ ಮಾಲಿಕರು ಅಥವಾ ನಿವಾಸಿಗಳಿಂದ ಸರಿಯಾಗಿ ಕಸ ಸಂಗ್ರಹಣೆ ಶುಲ್ಕ ಪಾವತಿಯಾಗದ ಕಾರಣ ಇತ್ತೀಚೆಗೆ ಕಸ ಸಂಗ್ರಹಣೆ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಮನೆಗಳ ಕಸ ರಸ್ತೆ ಬದಿಯಲ್ಲಿ ಎಸೆಯುವ ಪರಿಪಾಠ ಎಂದಿನಂತೆ ಮುಂದುವರೆದಿದೆ.
2014-15 ರ ಸಾಲಿಗೆ ಭದ್ರಾವತಿ ನಗರಸಭೆ ತ್ಯಾಜ್ಯ ವಿಲೇವಾರಿ ಯೋಜನೆಗೆ ಮತ್ತಷ್ಟು ಆಟೋ ಟಿಪ್ರರ್, ಟ್ರೈಸಿಕಲ್ ಹಾಗೂ ತಳ್ಳುವ ಗಾಡಿಗಳನ್ನು ಖರೀದಿಸುವ ಚಿಂತನೆ ನಡೆಸಿದೆ. ತ್ಯಾಜ್ಯ ಸಂಗ್ರಹಣೆಗೆ ಹಾಲಿ ಇರುವ 25 ಕಂಟೈನರ್ಗಳು ಸಾಕಾಗುತ್ತಿಲ್ಲ.
ನಗರಸಭೆಯವರು ಹೆಚ್ಚಿನ 50 ಕಸ ಸಂಗ್ರಹಣೆಯ ಕಂಟೈನರ್ಗಳನ್ನು ತಯಾರಿಸುವ ಆದೇಶ ನೀಡಿದ್ದರೂ ಅದನ್ನು ಸರಿಯಾಗಿ ತಯಾರಿಸದ ಕಾರಣ ಅವು ನಗರಸಭೆ ಆವರಣದಲ್ಲಿ ದುರಸ್ತಿ ಕಾಣದೆ ತುಕ್ಕು ಹಿಡಿಯುತ್ತಿವೆ. ತ್ಯಾಜ್ಯ ವಿಲೇವಾರಿ ಬಗ್ಗೆ ನಗರಸಭೆ ಕೌನ್ಸಿಲ್ಸಭೆಯಲ್ಲಿ ಅನೇಕ ಬಾರಿ ಚರ್ಚೆ ನಡೆದಿದ್ದರೂ ಮನೆ ಕಸವನ್ನು ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಮಾಡಲು ಆಗುತ್ತಿಲ್ಲ.
ಸಹಕರಿಸದಿದ್ದರೆ ಕಷ್ಟ
ಕಸ ಸಂಗ್ರಹಣೆ ಶುಲ್ಕ ನಾಗರಿಕರೇ ಭರಿಸ ಬೇಕೆಂಬುದು ನಗರಸಭೆ ವಾದ. ಈ ಶುಲ್ಕವನ್ನು ಭರಿಸಲು ನಗರಸಭೆಯ ಯಾವುದೇ ಯೋಜನೆಯಲ್ಲಿ ಹಣಕಾಸು ವ್ಯವಸ್ಥೆ ಇಲ್ಲದಿರುವುದರಿಂದ ಅದನ್ನು ನಾಗರಿಕರೇ ಭರಿಸಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ನಾಗರಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಮನೆಗಳ ಕಸ ಸಂಗ್ರಹಿಸಿ ಅವುಗಳನ್ನು ವಿಲೇವಾರಿ ಮಾಡುವುದು ಕಷ್ಟವಾಗುತ್ತದೆ. ನಗರಸಭೆಯಲ್ಲಿ ಕಸ ಸಂಗ್ರಹಿಸಲು 118 ಕಾಯಂ ನೌಕರರು ಮತ್ತು 75 ಮಂದಿ ಎರವಲು ಸೇವೆ ಪಡೆದ ಪೌರ ಕಾರ್ಮಿಕರಿದ್ದರೂ ಅವರು ಬೆಳಗ್ಗೆ ಒಂದು ಸಲ ಕಸ ಗುಡಿಸಿ ಅದನ್ನು ಸಂಗ್ರಹಿಸಿದ ಮೇಲೆ ಮತ್ತೆ ಮನೆಗಳ ಕಸ ಬಂದು ರಸ್ತೆಬದಿಗೆ ಬೀಳುತ್ತಿವೆ ಪಟ್ಟಣವನ್ನು ಕಸ ರಹಿತವಾಗಿಡಲು ಜನ ಸಹಕರಿಸದ ಕಾರಣ ಕಷ್ಟವಾಗುತ್ತದೆ ಎಂದು ನಗರಸಭೆ ಪರಿಸರ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

